ಬೇಲೂರು: ಶೃಂಗೇರಿ ಶಾರದಾ ಪೀಠವೇ ಹಾಗೆ. ಇಡಿಯ ದೇಶ ಮಾತ್ರವಲ್ಲ ವಿದೇಶಗಳಲ್ಲಿಯೂ ಭಕ್ತ ಸಮೂಹವನ್ನು ಹೊಂದಿದೆ. ಅದೇ ರೀತಿ ಹಿಂದೂಗಳಲ್ಲಿ ಮಾತ್ರವಲ್ಲದೇ ಮುಸ್ಲೀಮರೂ ಸಹ ಶ್ರೀಮಠಕ್ಕೆ ಭಕ್ತರಾಗಿದ್ದಾರೆ.
ಇಂತಹ ಮುಸ್ಲಿಂ ಭಕ್ತರಲ್ಲಿ ಕೆಲವರು ಇತ್ತೀಚೆಗೆ ಶೃಂಗೇರಿ ಕಿರಿಯ ಶ್ರೀಗಳಿಂದ ಆಶೀರ್ವಾದ ಪಡೆದಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕರ್ನಾಟಕ, ತೆಲಂಗಾಣ, ಆಂಧ್ರ ದೇಶಗಳ ವಿಜಯಯಾತ್ರೆಯನ್ನು ಸುಸಂಪನ್ನಗೊಳಿಸಿ ಹಾಸನದಿಂದ ಶೃಂಗೇರಿಗೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಹಿಂತಿರುಗುತ್ತಿದ್ದರು.

ಈ ವೇಳೆ ಸ್ವಾಮಿಗಳು ಈ ಮಾರ್ಗವಾಗಿ ಆಗಮಿಸುತ್ತಾರೆ ಎಂದು ತಿಳಿದಿದ್ದ ಬೇಲೂರಿನ ಮುಸಲ್ಮಾನ ವ್ಯಕ್ತಿಯೊಬ್ಬರು ಮಸೀದಿ ಬಳಿಯಲ್ಲಿ ಗಂಟೆಗಟ್ಟಲೆ ಕಾದಿದ್ದರು.
ಶ್ರೀಗಳು ಆಗಮಿಸುತ್ತಿರುವ ವೇಳೆ ಮುಂದಾಗಿ ಅವರನ್ನು ಭೇಟಿಯಾದ ಆ ವ್ಯಕ್ತಿ ಫಲ ಸಮರ್ಪಣೆ ಮಾಡಿದ್ದಾರೆ. ಶ್ರೀಗಳು ಸಂತೋಷದಿಂದ ಫಲ ಮಂತ್ರಾಕ್ಷತೆಯನ್ನು ನೀಡಿ ಹರಸಿದ್ದಾರೆ.

ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೃಂಗೇರಿ ಪೀಠದ ಕುರಿತಾಗಿ ಗೌರವ ಹೆಚ್ಚಾಗಿದೆ.
















