ಅಯ್ಯೋ ರಾಮ ಇದು ನಾವು -ನೀವು ದೈನಂದಿನ ಮಾತುಕತೆಗಳಲ್ಲಿ ಸಹಜವಾಗಿ ಕೇಳಿಸಿಕೊಳ್ಳುವ, ಬಳಸುವ ಪದ. ಕೆಲವೊಮ್ಮೆ ಗಾಬರಿ, ಗಡಿಬಿಡಿ, ಮತ್ತೊಮ್ಮೆ ವಿಷಾದವನ್ನು ಈ ಪದದ ಮೂಲಕ ವ್ಯಕ್ತಪಡಿಸುತ್ತೀವಿ. ವಿಶೇಷವೇನೆಂದರೆ ಅಯ್ಯೋರಾಮ ಶೀರ್ಷಿಕೆಯಿಂದ ಸಿನಿಮಾ ಒಂದು ತಯಾರಾಗಿ ಈಗ ಬಿಡುಗಡೆಗೆ ಸಿದ್ದವಾಗಿದೆ.
ಈ ಹಿಂದೆಯೂ ನೀರ್‌ದೋಸೆ, ಕನ್ನಡಕ್ಕಾಗಿ ಒಂದನ್ನು ಒತ್ತಿ, ರಾಮ ರಾಮ ರೇ ಇನ್ನು ಅನೇಕ ಸಿನೆಮಾಗಳು ಈ ರೀತಿ ವಿಭಿನ್ನ ಟೈಟಲ್‌ನೊಂದಿಗೆ ತೆರೆಕಂಡಿವೆ. ಈಗ ಈ ಪಂಕ್ತಿಯಲ್ಲಿ ಅಯ್ಯೋ ರಾಮ ಚಿತ್ರ ಕೂಡ ಭಾಗಿಯಾಗಿದೆ. ಈ ರೀತಿ ವಿಭಿನ್ನ ಶೀರ್ಷಿಕೆಯ ಟ್ರೆಂಡ್ ಪ್ರೇಕ್ಷಕನನ್ನು ಚಿತ್ರ ಮಂದಿರಕ್ಕೆ ಸೆಳೆಯೋ ಗಿಮಿಕ್ಸಾ? ಅಥವಾ ಟೈಟಲ್ ಕಥೆಗೆ ಪೂರಕವಾಗಿಯೇ ಇದೆಯೇ? ಒಟ್ಟಿನಲ್ಲಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ವಿನೋದ್ ಕುಮಾರ್ ನಿರ್ದೇಶಕರಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ ಅನೇಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ತಂತ್ರಜ್ಞರಾಗಿ, ತೆರೆ ಹಿಂದೆ ಕೆಲಸ ಮಾಡಿದ ಅನೇಕ ಕೈಗಳು ಸೇರಿಕೊಂಡು ನಿರ್ದೇಶಕ ವಿನೋದ್ ಕುಮಾರ್ ಕಲ್ಪನೆಗೆ ಶ್ರಮಿಸಿದ್ದಾರೆ.
ಮನುಷ್ಯ ಒಳ್ಳೆಯದೇ ಕೆಲಸ ಮಾಡಲು ಹೊರಟಾಗ ಹಲವಾರು ತೊಂದರೆಗಳು ಉಂಟಾದರೂ ಕೊನೆಯಲ್ಲಿ ಒಳ್ಳೆಯದೇ ಆಗುತ್ತದೆ. ಹಾಗೆ ಕೆಟ್ಟ ಕೆಲಸ ಮಾಡಲು ಹೊರಟರೆ ಶುರುವಿನಲ್ಲಿ ಒಳ್ಳೆಯದೇ ಆದರೂ ಕೊನೆಯಲ್ಲಿ ಅದು ಫಲಿಸುವುದಿಲ್ಲ. ದುರಾಸೆ ಮನುಷ್ಯನನ್ನು ಏನೆಲ್ಲಾ ಪರಿಸ್ಥಿತಿಗೆ ಒಳಪಡಿಸುತ್ತದೆ ಎಂಬ ಅಂಶಗಳನ್ನು ಇಟ್ಟುಕೊಂಡು ತಯಾರಾದ ಈ ಚಿತ್ರದಲ್ಲಿ ಕಥೆಯೇ ನಾಯಕ.
ಕಥೆಯಲ್ಲಿ ಹಲವು ಪಾತ್ರಗಳಿದ್ದು ಒಂದು ಪಾತ್ರದಿಂದ ಮತ್ತೊಂದು ಪಾತ್ರಕ್ಕೆ ಲಿಂಕ್ ನೀಡುವುದರ ಮೂಲಕ ಕಥೆ ಮುಂದೆ ಸಾಗುತ್ತದೆಂದು ನಿರ್ದೇಶಕ ವಿನೋದ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಒಂದು ವ್ಯಾನ್ ಹಾಗೂ ಎರಡು ಗೊಂಬೆಗಳನ್ನು ಪ್ರಮುಖ ಪಾತ್ರಗಳಂತೆ ಬಿಂಬಿಸಲಾಗಿದೆ.
ಸಹಾಯಕ ನಿರ್ದೇಶನ, ಸಹಾಯಕ ನಿರ್ಮಾಣ ಮತ್ತು ಸ್ಯಾಂಡಲ್‌ವುಡ್ ನ ಹಲವು ಕ್ಷೇತ್ರಗಳಲ್ಲಿ ಸಹಾಯಕರಾಗಿದ್ದ ಕೆಲಸಗಾರರು ಮುಖ್ಯಭೂಮಿಕೆಗೆ ಬಂದು ತಾವೇ ಸೇರಿ ಮಾಡಿದ ಚಿತ್ರ ಈ ಅಯ್ಯೋ ರಾಮ. ಕೆಲ ದಿನಗಳ ಹಿಂದೆಯಷ್ಟೇ ನಿರ್ದೇಶಕರಾದ ‘ಚೇತನ್’, ‘ಎ.ಪಿ. ಅರ್ಜುನ್’, ನಟ ಶ್ರೀಮುರುಳಿ, ಧ್ರುವ ಸರ್ಜಾ, ನಟಿ ರಚಿತಾರಾಮ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಈ ಯುವ ತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ಈ ಥ್ರಿಲ್ಲರ್ ಕಾಮಿಡಿ ಸಿನಿಮಾಗೆ ತ್ರಿವಿಕ್ರಮ್ ರಘು ಹಣ ಹೂಡಿದ್ದಾರೆ. ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಹಾಡೊಂದಕ್ಕೆ ಗಾನ ಮಾಂತ್ರಿಕ ‘ವಿಜಯ್ ಪ್ರಕಾಶ್’ ಧ್ವನಿಯಾಗಿದ್ದರೆ, ನಿರ್ದೇಶಕ ‘ವಿನೋದ್ ಕುಮಾರ್ ಸ್ವತಃ ಹಾಡು ರಚಿಸಿದ್ದೂ ಅಲ್ಲದೇ, ಕಥೆ ಚಿತ್ರಕಥೆ ಸಂಭಾಷಣೆಯನ್ನು ತಾವೇ ನೀಡಿದ್ದಾರೆ. ಚಿತ್ರದ ಹಾಡುಗಳಿಗೆ ವಿವೇಕ್ ಚಕ್ರವರ್ತಿಯವರ ಸಂಗೀತವಿದ್ದು, ಅಚ್ಚುಕಟ್ಟಾಗಿ ಮೂಡಿ ಬಂದಿವೆ.
ಮಹೇಶ್ ಎಸ್ ರವರು ಕತ್ತರಿ ಪ್ರಯೋಗ ನಡೆಸಿದ ಈ ಸಿನೆಮಾಗೆ ಶಂರಣ್ ಸಿಂಧನೂರು ಕ್ಯಾಮೆರ ಹಿಡಿದಿದ್ದಾರೆ. ಇನ್ನು ರಘು ವಂಶಿ ಕಾ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ, ಶೇಷನ್ ಪದ್ಮನಾಭನ್, ಉಗ್ರಂ ಖ್ಯಾತಿಯ ಪ್ರದೀಪ್, ಹಿರಿಯನಟ ಕರಿಸುಬ್ಬು, ರಾಕ್ ಲೈನ್ ಸುಧಾಕರ್, ನಟಿ ಪ್ರಿಯಾಂಕ ನಟಿಸಿದ್ದಾರೆ. ಸುಮಾರಷ್ಟು ರಂಗಭೂಮಿ ಕಲಾವಿದರು, ನಟಿಸಿರುವ ಈ ಚಿತ್ರದಲ್ಲಿ ಶಿವಮೊಗ್ಗದ ರಂಗಭೂಮಿ ಕಲಾವಿದರೂ, ನೀನಾಸಮ್ ಪದವೀಧರರೂ ಆದ ಶ್ರೀಹರ್ಷ ಗೋಭಟ್ ಕೂಡಾ ನಟಿಸಿದ್ದು, ನಾಳೆ (ಜುಲೈ-27ಕ್ಕೆ) ರಾಜ್ಯದಾದ್ಯಂತ ತೆರೆಕಾಣಲಿದೆ.
-ಸುಮಖ, ಪತ್ರಿಕೋದ್ಯಮ ವಿದ್ಯಾರ್ಥಿ,
ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ
Discussion about this post