ನವದೆಹಲಿ: ಒಪ್ಪಿತ ಅಕ್ರಮ ಸಂಬಂಧದಲ್ಲಿ ಮಹಿಳೆ ಹಾಗೂ ಪುರುಷ ಇಬ್ಬರೂ ಸಹ ಸಮಾನ ಬಾಧ್ಯಸ್ತರಾಗಿರುತ್ತಾರೆ. ಇದರಲ್ಲಿ ಪುರುಷನನ್ನು ಮಾತ್ರ ಅಪರಾಧಿಯನ್ನಾಗಿ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ವಿವಾಹಿತ ಪರ ಸ್ತ್ರೀಯೊಂದಿಗೆ ವಿವಾಹೇತರ ಲೈಂಗಿಕ ಸಂಬಂಧ ಹೊಂದುವ ಪುರುಷನನ್ನು ಮಾತ್ರವೇ ಶಿಕ್ಷಿಸುವ ಐಪಿಸಿ ಸೆ.497 (ವ್ಯಭಿಚಾರ ನಿಗ್ರಹ ಕಾನೂನು) ರದ್ದು ಪಡಿಸಬೇಕೆಂದು ಕೋರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ಕೈಗೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಐಪಿಸಿಯ ಸೆ.497 ಕ್ರಿಮಿನಲ್ ಅಪರಾಧವಾಗಿ ಉಳಿಯಬೇಕೇ ಬೇಡವೇ ಎಂಬುದನ್ನು ತಾನು ಪರಿಶೀಲಿಸುವುದಾಗಿ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಪೀಠ ಹೇಳಿದೆ.
ಇದೇ ವೇಳೆ ಮಹಿಳೆಯರನ್ನೂ ಅಪರಾಧಿಗಳನ್ನಾಗಿ ಮಾಡುವ ವ್ಯಭಿಚಾರ ನಿಗ್ರಹ ಕಾನೂನನ್ನು ತಾನು ಮುಟ್ಟಲು ಹೋಗುವುದಿಲ್ಲ ಎಂದಿರುವ ಸರ್ವೋಚ್ಚ ನ್ಯಾಯಾಲಯ, ವ್ಯಭಿಚಾರ ನಿಗ್ರಹ ಕಾನೂನು ಲಿಂಗ ಅಲಿಪ್ತ ಕಾನೂನಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇನ್ನೊಬ್ಬ ವ್ಯಕ್ತಿಯ ಪತ್ನಿಯೊಂದಿಗೆ ತಾನು ಪರಸ್ಪರ ಒಪ್ಪಿಗೆಯ ಮೇಲೆ ಸಂಭೋಗ ನಡೆಸಿದ್ದಾಗಿ ಹೇಳುವ ವ್ಯಕ್ತಿಯನ್ನು ಜೈಲಿಗೆ ಅಟ್ಟಲು ಸಾಧ್ಯವೇ ಎಂಬುದನ್ನು ಕೂಡ ಪರಿಶೀಲಿಸುವುದಾಗಿ ಪೀಠ ಹೇಳಿದೆ.
Discussion about this post