ಭದ್ರಾವತಿ: ಮಗು ಜನಿಸಿದ ಒಂದು ಗಂಟೆಯಿಂದ ಆರಂಭಿಸಿ, ಮಗುವಿಗೆ ಹಾಲುಣಿಸುವುದರಿಂದ ತಾಯಿಗೆ ಕ್ಯಾನ್ಸರ್ ಬರುವ ಸಾಧ್ಯತೆಗಳು ಕ್ಷೀಣವಾಗಿರುತ್ತವೆ ಎಂದು ಮಕ್ಕಳ ತಜ್ಞ ಡಾ.ವಿಕ್ರಂ ಹೇಳಿದರು.
ವಿಶ್ವ ಸ್ತನ್ಯಪಾನ ಸಪ್ತಾಹದ ಹಿನ್ನೆಲೆಯಲ್ಲಿ ನಯನ ಆಸ್ಪತ್ರೆ, ಮಹಿಳಾ ಆರೋಗ್ಯ ವೇದಿಕೆ, ಭಾರತೀಯ ಶಿಶು ವೈದ್ಯ ಸಂಘದ ಜಿಲ್ಲಾ ಶಾಖೆಯ ಸಂಯುಕ್ತಾಶ್ರಯದಲ್ಲಿ ನಯನ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಗು ಜನಿಸಿದ ಒಂದು ಗಂಟೆಯ ಒಳಗಾಗಿ ತಾಯಿ ಹಾಲುಣಿಸಲು ಆರಂಭಿಸಬೇಕು. ಆರು ತಿಂಗಳು ತುಂಬುವವರೆಗೂ ಮಗುವಿಗೆ ಕೇವಲ ತಾಯಿ ಎದೆ ಹಾಲು ಮಾತ್ರ ಉಣಿಸಬೇಕೇ ವಿನಾ ಬೇರೇನು ಆಹಾರ ತಿನ್ನಿಸಬಾರದು. ಆರು ತಿಂಗಳು ತುಂಬಿದ ನಂತರ ಮಗುವಿಗೆ ಎದೆ ಹಾಲು ಕುಡಿಸುವ ಜೊತೆಯಲ್ಲಿ ಮೇಲಿನ ಆಹಾರ ಕೊಡಬೇಕು ಎಂದರು.
ಮಗುವಿಗೆ ಆರು ತಿಂಗಳವರೆಗೂ ಕರಳು ಬಲಿತಿರುವುದಿಲ್ಲ. ಮಗುವಿಗೆ ಜೀರ್ಣಶಕ್ತಿ ಇರುವುದಿಲ್ಲ. ಹೀಗಾಗಿ, ಆರು ತಿಂಗಳವರೆಗೂ ಮಗುವಿಗೆ ಮೇಲಿನ ಆಹಾರ ಕೊಡಬಾರದು ಎಂದರು.
ಇನ್ನು, ಎದೆ ಹಾಲು ಕುಡಿಸುವುದರಿಂದ ತಾಯಿಗೆ ಹಲವಾರು ಲಾಭವಿದ್ದು, ಸ್ತನ, ಕರುಳು ಹಾಗೂ ಅಂಡಾಣು ಕ್ಯಾನ್ಸರ್ ಬರುವ ಸಾಧ್ಯತೆಗಳು ಕ್ಷೀಣವಾಗಿರುತ್ತದೆ. ಇದರೊಂದಿಗೆ ತಾಯಿಗೆ ಬೊಜ್ಜು ಬರುವ ಸಾಧ್ಯತೆಯೂ ಸಹ ಕಡಿಮೆ. ಹೀಗಾಗಿ, ಯಾವುದೇ ರೀತಿಯ ಪೂರ್ವಾಗ್ರಹಪೀಡಿತ ವಿಚಾರಗಳಿಲ್ಲದೇ ತಾಯಂದಿರು ತಮ್ಮ ಶಿಶುವಿಗೆ ಎದೆ ಹಾಲು ಉಣಿಸಬೇಕು ಎಂದು ಕರೆ ನೀಡಿದರು.
ಖ್ಯಾತ ತಜ್ಞ ಡಾ. ವೈದ್ಯ ಮಾತನಾಡಿ, ಎದೆ ಹಾಲು ಉಣಿಸುವುದರಿಂದ ತಾಯಿಗೆ ಹಾಗೂ ಕುಟುಂಬಕ್ಕೆ ಆಗುವ ಲಾಭಗಳನ್ನು ತಿಳಿಸಿದರು.
ಇದಕ್ಕೂ ಮುನ್ನ ಗರ್ಭಿಣಿಯರಿಗೆ ಅಗತ್ಯವಿರುವ ವ್ಯಾಯಾಮಗಳು, ಜೀವನ ಶೈಲಿ ಹಾಗೂ ಮಗುವಿಗೆ ಹಾಲುಣಿಸುವ ಮಹತ್ವದ ಕುರಿತಾಗಿ ಮಾರ್ಗದರ್ಶನ ನೀಡಿದ ಖ್ಯಾತ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್. ಭಟ್, ಗರ್ಭಿಣಿಯರು ಯಾವಾಗಲೂ ಸಕಾರಾತ್ಮಕ ಚಿಂತನೆ ಮಾಡುತ್ತಿರಬೇಕು. ಆರೋಗ್ಯಕರ ಆಹಾರ ತೆಗೆದುಕೊಳ್ಳುವ ಜೊತೆಯಲ್ಲಿ ನಿಯಮಿತವಾಗಿ ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಸ್ತ್ರೀರೋಗ ತಜ್ಞೆ ಡಾ. ಆಶಾ ಮಾತನಾಡಿದರು. ಖ್ಯಾತ ವೈದ್ಯ ಮಲ್ಲಿಕಾರ್ಜುನ ಸಾಲಿ, ನಯನ ಆಸ್ಪತ್ರೆ ನಿರ್ದೇಶಕ ಡಾ.ಕುಮಾರಸ್ವಾಮಿ ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ವಂದನಾರ್ಪಣೆ ಮಾಡಿದರು.
Discussion about this post