ನವದೆಹಲಿ: ಅವರಿಗೆ ಗುರಿಯಿಲ್ಲ, ಸರಿಯಾದ ಯೋಜನೆಯಿಲ್ಲ, ಓರ್ವ ಸಮರ್ಥ ನಾಯಕ ಮೊದಲೇ ಇಲ್ಲ… ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಒಕ್ಕೂಟವನ್ನು ಲೇವಡಿ ಮಾಡಿದ ಪರಿ…
ನವದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಮಹಾಘಟಬಂಧನ್ ಒಕ್ಕೂಟವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅವರಿಗೆ ಒಂದು ಸರಿಯಾದ ಯೋಜನೆಯಿಲ್ಲ, ಒಂದು ನಿರ್ಧಿಷ್ಟ ಗುರಿಯಿಲ್ಲ, ಪ್ರಧಾನಿ ಮೋದಿ ಅವರಂತಹ ಓರ್ವ ಸಮರ್ಥ ನಾಯಕ ಮೊದಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದಿನ ಸನ್ನಿವೇಶದಲ್ಲಿ ಅವರಿಗಾಗಿ ಯಾವುದೇ ಪವಾಡಗಳೂ ಸಹ ನಡೆಯುವುದಿಲ್ಲ ಎಂದು ಕಟಕಿಯಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ತಡೆಯುವುದಷ್ಟೇ ಅವರ ಅಜೆಂಡಾ ಹಾಗೂ ಸ್ಲೋಗನ್ ಆಗಿದೆಯೇ ವಿನಾ, ಇನ್ನೇನು ಗುರಿಯಲ್ಲ ಎಂದು ಕಿಡಿ ಕಾರಿದರು.
2014ರಿಂದ ಬಿಜೆಪಿ 15 ರಾಜ್ಯಗಳಲ್ಲಿ ಜಯಗಳಿಸಿದ್ದು, 20 ರಾಜ್ಯಗಳಲ್ಲಿ ಮಿತ್ರರ ಸಹಕಾರ ಪಡೆದು ಅಧಿಕಾರ ಹಿಡಿದಿದೆ. ಆದರೆ, ಕಾಂಗ್ರೆಸ್ ಇದ್ದ 10 ರಾಜ್ಯಗಳನ್ನು ಕಳೆದುಕೊಂಡು, ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರವನ್ನು ಉಳಿಸಿಕೊಂಡಿದೆ ಎಂದರೆ ಆ ಪಕ್ಷಕ್ಕೆ ಎಷ್ಟು ಅವಮಾನಕರ ಎಂದು ತಿಳಿಯುತ್ತದೆ ಎಂದು ಕಟಕಿಯಾಡಿದ್ದಾರೆ.
ಇನ್ನು ವಿಷನ್ 2022ರ ಯೋಜನೆಯ ಕುರಿತಾಗಿ ಮಾತನಾಡಿದ ರಾಜನಾಥ್ ಸಿಂಗ್, ಇದರ ರಾಜಕೀಯ ನಿರ್ಣಯಗಳನ್ನು ಬಿಡುಗಡೆ ಮಾಡಿ, ಈ ಗುರಿಯಂತೆ ಎಲ್ಲರೂ ಮನೆ ಹೊಂದುತ್ತಾರೆ, ದೇಶದಲ್ಲಿ ಕೋಮುವಾದ ಇರುವುದಿಲ್ಲ, ದೇಶದಲ್ಲಿ ಭಯೋತ್ಪಾದನೆ ಇರುವುದಿಲ್ಲ ಹಾಗೂ ಅಭಿವೃದ್ಧಿಯೊಂದೇ ಇರುತ್ತದೆ ಎಂದಿದ್ದಾರೆ.
Discussion about this post