ರಾಷ್ಟದ ಆರ್ಥಿಕತೆಗೆ ನೇರ ಪರಿಣಾಮ ಬೀರುವ, ರಾಷ್ಟ್ರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟವುಂಟು ಮಾಡುವ, ರಾಷ್ಟ್ರದ ಹಿತ ಬಯಸದ ಕೆಲವು ವ್ಯಕ್ತಿಗಳ ದುರಾಲೋಚನೆಯಿಂದ ಜನರನ್ನು ಕತ್ತಲೆಯೆಡೆಗೆ ದೂಡುವ ಈ ‘ಬಂದ್’ ಗಳು ನಮಗೆ ಬೇಕೆ? ಬೆದರಿಕೆಯೊಡ್ಡಿ ಬಾಗಿಲೆಳೆದು ಬಂದ್ ಮಾಡಿಸುವ ಪಡ್ಡೆಗಳ ಹಿಂದಿರುವ ರಾಜಕೀಯ ಶಕ್ತಿಗಳಿಗೆ ಬೇಕಿರುವುದು ತನ್ನ ಇಷ್ಟಾರ್ಥ ಸಾಧನೆ ಮಾತ್ರ.
ಸಾರ್ವಜನಿಕ ಕಳಕಳಿ ಇದ್ದರೆ ಹೋರಾಟಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಆದರೆ ಇಂತಹ ಇತರೆ ಹೋರಾಟಗಳಿಂದ ತನಗೆ ಹೆಚ್ಚೇನೂ ಪ್ರಯೋಜನವಾಗದು ಎಂದರಿತ ದುಷ್ಟ ಶಕ್ತಿಗಳು ಕಲ್ಲು ತೂರಾಟ, ಬಸ್ಸುಗಳಿಗೆ ಬೆಂಕಿ, ರಸ್ತೆ ತಡೆ ಇತ್ಯಾದಿ ಇತ್ಯಾದಿಗಳ ಮೂಲಕ ಸಾರ್ವಜನಿಕ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಶಕ್ತಿಗಳ ದುರುದ್ದೇಶವನ್ನರಿಯದೇ ಇಂತಹ ಬಂದ್ ಗಳಿಗೆ ಬೆಂಬಲಿಸಿದರೆ ನಮ್ಮ ಗುಂಡಿಯನ್ನು ನಾವೇ ತೋಡಿಕೊಂಡ ಹಾಗೆ ಎನ್ನುವುದನ್ನು ಮರೆಯಬಾರದು.
ಹೌದು ನಾವಿಂದು ಕಾರಣ ತಿಳಿಯದೇ ಕೇವಲ ಒಂದು ರಜೆಗಾಗಿ ಹಾತೊರೆಯುತ್ತೇವೆ. ಮಡದಿ ಮಕ್ಕಳ ಜೊತೆ ಪಿಕ್ನಿಕ್ ಪ್ರವಾಸ ಮಾಡುತ್ತೇವೆ. ಸ್ನೇಹಿತರ ಜೊತೆಗೂಡಿ ಮೋಜು ಮಸ್ತಿ ಮಾಡುವವರಿಗೂ ಕೊರತೆಯಿಲ್ಲ. ಅಬ್ಬಾ ಇವತ್ತೊಂದಿನವಾದರೂ ಗಡಿಬಿಡಿಯ ಅಡುಗೆಗೆ ವಿರಾಮ ಸಿಕ್ಕಿತಲ್ಲಾ’, ನಿಧಾನವಾಗಿ ಏಳಬಹುದಲ್ಲಾ ಎಂದು ಯೋಚಿಸುವ ಗೃಹಿಣಿಯರು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿ ಕಂಪ್ಯೂಟರ್ ಗೇಮ್ಸ್ ಆಡಬಹುದಲ್ಲ ಎಂದು ಯೋಚಿಸುವ ಮಕ್ಕಳು, ಕೆಲಸದ ಒತ್ತಡದಿಂದ ಒಂದು ದಿನವಾದರೂ ಮುಕ್ತಿ ದೊರೆಯಿತಲ್ಲ ಎಂದು ಯೋಚಿಸುವ ನೌಕರ ವರ್ಗ ಇತ್ಯಾದಿ ಇತ್ಯಾದಿ ಯೋಚಿಸುವ ಜನರಿಗೇನೂ ಕೊರತೆಯಿಲ್ಲ.
ರಾಷ್ಟ್ರದ ಹಿತ ಬಯಸುವ ಯಾವೊಬ್ಬ ವ್ಯಕ್ತಿಯೂ ಇಂತಹ ಬಂದ್ ಬಯಸುವುದಿಲ್ಲ. ಈ ಬಂದ್ ವಿಚಾರ ಬಂದಾಗ ಥಟ್ಟನೆ ನೆನಪಾಗುವುದು ಜಪಾನ್. ಹೌದು ಅಲ್ಲಿ ಪ್ರತಿಭಟನೆ, ಹರತಾಳಗಳೆಂದರೆ ನಮ್ಮಂತೆ ಬೀದಿಗಿಳಿಯುವುದಿಲ್ಲ, ಘೋಷಣೆ ಕೂಗುವುದಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ, ಸರ್ಕಾರಿ ಬಸ್ಸುಗಳಿಗೆ ಕಲ್ಲು ತೂರುವುದಿಲ್ಲ, ಬೆಂಕಿ ಹಚ್ಚುವುದಿಲ್ಲ. ರಸ್ತೆ ತಡೆ, ರೈಲು ತಡೆ ಮಾಡುವುದಿಲ್ಲ. ಬದಲಿಗೆ ಕೈಗೊಂದು ಕಪ್ಪು ಪಟ್ಟಿ ಧರಿಸಿ ಹೆಚ್ಚು ಕೆಲಸ (Over Time) ಮಾಡಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಾರೆ. ವಿಷಯಾಧಾರಿತ ಪ್ರತಿಭಟನೆ ಮತ್ತು ದೇಶಪ್ರೇಮ ಎರಡರ ಸಮ್ಮಿಲನದ ಹೋರಾಟಗಳು ಸರ್ಕಾರದ ಮನಮುಟ್ಟಿ ನ್ಯಾಯದ ಕದ ತಟ್ಟುವ ಪ್ರಯತ್ನ ಮಾಡುತ್ತವೆ. ಇಂತಹ ಪ್ರಯತ್ನಗಳಿಂದ ದೇಶದ ಆರ್ಥಿಕತೆಯ ಲಾಭದ ಜೊತೆಗೆ ಉತ್ಪಾದನಾ ಸಾಮರ್ಥ್ಯವೂ ಹೆಚ್ಚುತ್ತ ಬೇಡಿಕೆಗಳ ಈಡೇರಿಕೆಗೆ ಸಾಧ್ಯಾ ಸಾಧ್ಯತೆಗಳ ಅವಕಾಶಗಳು ತೆರೆಯಲ್ಪಡುತ್ತವೆ.
ಇಂತಹ ಉದಾಹರಣೆಗಳು ವಿಶ್ವದ ನಾನಾ ರಾಷ್ಟ್ರಗಳಲ್ಲಿ ದೊರೆಯುತ್ತವೆ. ಆ ರಾಷ್ಟ್ರದ ಕಾನೂನುಗಳೂ ಸಹ ರಾಷ್ಟ್ರದ ಹಿತಾಸಕ್ತಿಗಳನ್ನು ಕಾಪಾಡಲು ಬದ್ಧವಾಗಿರುತ್ತವೆ. ಆದರೆ ರಾಷ್ಟ್ರದ ಹಿತಾಸಕ್ತಿ ವಿಚಾರಗಳು ಬಂದಾಗ ಭಾರತದಲ್ಲಿ ಮಾತ್ರ ರಾಜಕೀಯ ಪ್ರೇರಿತ ಚಿಂತನೆಗಳಿಗೆ ಹೆಚ್ಚು ಪ್ರಾಧಾನ್ಯತೆ ದೊರೆಯುತ್ತದೆ. ಕೆಲವೇ ಕೆಲವು ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುವ ಅವುಗಳು ಜನರನ್ನು ಕತ್ತಲಿನಲ್ಲಿಟ್ಟು ಬೇರೆಯದೇ ಚಿತ್ರಣವನ್ನು ತೋರಿಸಿ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತವೆ. ಇದು ದೇಶದ ಅಭಿವೃದ್ಧಿಯ ಕನಸಿಗೆ ಮಾರಕ ಎಂಬುದನ್ನು ಮರೆಯಬಾರದು. ಆಮ್ ಆದ್ಮಿ ಎಂದು ಕರೆಸಿಕೊಳ್ಳುವ ನಾಗರಿಕ ದೇಶದ ಆಗು ಹೋಗುಗಳ ಬಗ್ಗೆ ಎಲ್ಲಿಯವರೆಗೆ ಚಿಂತಿಸಿ ಸ್ವಯಂ ನಿರ್ಧಾರಕ್ಕೆ ಬರುವ ಪ್ರಯತ್ನ ಮಾಡುವುದಿಲ್ಲವೋ ಅಲ್ಲಿಯವರೆಗೆ ನಾವು ಮತ್ತೊಬ್ಬರ ಹಿಡಿತದಲ್ಲಿರುವ ಅಡಿಯಾಳುಗಳು ಅಷ್ಟೇ ಎಂಬುದನ್ನು ನೆನಪಿನಲ್ಲಿಡಬೇಕು.
-ನಾಗರಾಜ್ ಶೆಟ್ಟರ್, ಶಿವಮೊಗ್ಗ
Discussion about this post