ಬೆಂಗಳೂರು: ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವಿದ್ದರೂ ಸಹ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯಲ್ಲಿ ಸರ್ಕಾರ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ಈ ಕುರಿತಂತೆ ಶ್ರೀಮಠ ಇಂದು ಪ್ರಕಟಣೆ ಬಿಡುಗಡೆ ಮಾಡಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಶ್ರೀಮಠ ಸಲ್ಲಿಸಿದ್ದ ಅರ್ಜಿಯನ್ನು ಸೆ. 7 ರಂದು ಮಾನ್ಯ ಮಾಡಿದ್ದ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಸೂಚಿಸಿ, ದೇವಾಲಯದ ಆಡಳಿತ ನಿರ್ವಹಣೆಯನ್ನು ಶ್ರೀಮಠವೇ ಮುಂದುವರಿಸುವಂತೆ ಮಧ್ಯಂತರ ಆದೇಶ ನೀಡಿತ್ತು ಎಂದು ಹೇಳಿದೆ.
ಸರ್ವೋಚ್ಚನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳ ಆದೇಶವನ್ನೇ ಸರ್ಕಾರವೇ ಉಲ್ಲಂಘಿಸಿದರೆ ನ್ಯಾಯವನ್ನು ಎಲ್ಲಿ ಹುಡುಕುವುದು ಎಂದು ಶ್ರೀಮಠ ಪ್ರಶ್ನಿಸಿದೆ.
ಶ್ರೀಮಠದ ಆಡಳಿತವು ಅಬಾಧಿತವಾಗಿ ಒಂದು ತಿಂಗಳು ಮುಂದುವರಿಯುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದ ಮೂಲಕ ಆ ಆದೇಶವೇ ಮುಂದುವರಿಯಬೇಕು ಎಂದು ಆದೇಶಿಸಿತ್ತು. ಈ ಮೂಲಕ ಶ್ರೀಮಠಕ್ಕೆ ನೀಡಿದ ಕಾನೂನಿನ ರಕ್ಷಣೆ ಹೊರತಾಗಿಯೂ, ಕಾನೂನು ಬಾಹಿರವಾಗಿ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ವಶಕ್ಕೆ ಪಡೆದಿರುವ ಸರ್ಕಾರದ ಹೇಯ ಕ್ರಮ ನ್ಯಾಯಾಂಗಕ್ಕೆ ಸರ್ಕಾರಿ ವ್ಯವಸ್ಥೆ ಮಾಡುತ್ತಿರುವ ಅಪಚಾರವಾಗಿದ್ದು, ಈ ಕುರಿತಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀಮಠ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದೆ.

















