ಸೊರಬ: ಕಳೆದ 5 ವರ್ಷದಿಂದ ತಾಲ್ಲೂಕಿನಲ್ಲಿ ನೀರಾವರಿ ಹೆಸರಿನಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿ ಅಧಿಕಾರ ಮುಗಿಸಿದರೆ, ಶಾಸಕ ಕುಮಾರ್ ಬಂಗಾರಪ್ಪ ನೀರಾವರಿ ಯೋಜನೆ ಮಾಡುತ್ತೇನೆಂದು ಸರ್ವೆ ಕಾರ್ಯ ಮಾಡವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ರಾಜು ಎಂ. ತಲ್ಲೂರು ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಐದುವರೆ ವರ್ಷಗಳಿಂದ ತಾಲೂಕು ಅಭಿವೃದ್ಧಿಯಿಂದ ವಂಚಿತವಾಗಿದೆ. ಮಾಜಿ ಶಾಸಕ ಮಧುಬಂಗಾರಪ್ಪ ಗುದ್ದಲಿ ಪೂಜೆಯಲ್ಲಿ ಕಾಲ ಕಳೆದರೇ ಈಗಿರುವ ಶಾಸಕ ಕುಮಾರ್‌ಬಂಗಾರಪ್ಪ ನೀರಿಲ್ಲದ ಕೆರೆಯಂಗಳಕ್ಕೆ ಅಧಿಕಾರಗಳ ನಿಯೋಗ ಕರೆದೊಯ್ದು ನೀರಾವರಿಯ ಹೆಸರಿನಲ್ಲಿ ಟೇಪ್ ಹಿಡಿದು ಸರ್ವೆ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಆಡಳಿದಲ್ಲಿದ್ದಾಗ ರೈತರ ಹಿತದೃಷ್ಟಿಯಿಂದ ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರಾತಿ ನೀಡಿ ಹಕ್ಕುಪತ್ರ ನೀಡಲಾಗಿತ್ತು. ತಾಲ್ಲೂಕಿನಲ್ಲಿ ಬಗರ್ ಹುಕುಂ ಹೆಸರಿನಲ್ಲಿ ಅನ್ಯಾಯವಾಗಿದೆ ಎಂದು ಶಾಸಕ ಕುಮಾರ್‌ಬಂಗಾರಪ್ಪ ಸದಸನದಲ್ಲಿ ಧ್ವನಿ ಎತ್ತಿ ಸಾವಿರಾರು ರೈತರಿಗೆ ನೀಡಿದ ಭೂ ಮಂಜೂರಾತಿ ವಾಪಸು ಪಡೆಯುವಂತೆ ಆಗ್ರಹಿಸಿದರಲ್ಲದೆ, ತಮ್ಮ ಅಧಿಕಾರ ಬಳಸಿ ವಿಭಾಗಾಧಿಕಾರಿಗಳಿಂದ ರೈತರಿಗೆ ಕಾರಣ ಕೇಳಿ ನೋಟಿಸ್ ನೀಡಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಿದ್ದು, ಇದರಿಂದ ಇವರ ರೈತ ವಿರೋಧಿ ಧೋರಣೆ ಸಾಬೀತಾದಂತಾಗಿದೆ. ಅಧಿಕಾರದ ದರ್ಪದಿಂದ ಪ್ರತಿ ಇಲಾಖೆಯ ಮುಖ್ಯಸ್ಥರ
ಮೇಲೆ ವಿನಾ ಕಾರಣ ಆರೋಪಗಳನ್ನು ಮಾಡುತ್ತಿದ್ದು, ಇದರಿಂದ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳು ಬೇರೆಡೆ ವರ್ಗಾವಣೆ ಪಡೆಯುತ್ತಿದ್ದಾರೆ. ಇದರಿಂದ ತಾಲ್ಲೂಕು ಆಡಳಿತ ಯಂತ್ರ ಕುಸಿದು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹಿನ್ನೆಡೆಯಾಗಿದೆ ಎಂದರು.
ಹಲವು ದಶಕಗಳಿಂದ ಪಟ್ಟಣದ ಮುಖ್ಯ ಭಾಗದಲ್ಲಿ ನಡೆಯುತ್ತಿದ್ದ ವಾರದಸಂತೆಯನ್ನು ವರ್ತಕರು ಹಾಗೂ ಪಟ್ಟಣ ಪಂಚಾಯಿತಿ ಆಡಳಿತದ ಜೊತೆಗೆ ಚರ್ಚಿಸದೆ ಏಕಾಏಕಿಯಾಗಿ ಶಾಸಕರು, ಸರ್ವಾಧಿಕಾರಿ ಧೋರಣೆಯಿಂದ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡದೆ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಿರುವುದು ಖಂಡನೀಯ. ಶಾಸಕರು ಮುಂದಿನ ದಿನಗಳಲ್ಲಿ ಸೇಡಿನ ರಾಜಕಾರಣದಿಂದ ದೂರ ಉಳಿದು ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಗಮನ ಹರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಕೆ. ಮಂಜುನಾಥ್ ಮಾತನಾಡಿ, ಚುನಾವಣೆಯಲ್ಲಿ ಸೋತಾಗ ಮನೆಯಲ್ಲಿ ಮಲಗುವುದು ಗೆದ್ದಾಗ ಸೇಡಿನ ರಾಜಕಾರಣದಿಂದ ಜನರಿಗೆ ಕಿರುಕುಳ ನೀಡುವುದು ಇಲ್ಲಿನ ಶಾಸಕರ ಗುಣವಾಗಿದೆ. ಅಣ್ಣ ತಮ್ಮಂದಿರ ರಾಜಕೀಯ ಒಳ ಜಗಳದಿಂದ ತಾಲ್ಲೂಕಿನ ಬಗರ್ ಹುಕುಂ ರೈತರು ತೊಂದರೆ ಅನುಭವಿಸುವಂತಾಗಿದೆ
ಎಂದರು.
ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಅಹಮದ್ ಪಟೇಲ್, ನೆಮ್ಮದಿ ಸುಬ್ಬು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
Discussion about this post