ನವದೆಹಲಿ: ಮಹಿಳೆ ಹಾಗೂ ಪುರುಷರಿಗೆ ಸಮಾನ ಹಕ್ಕು ವಿಚಾರದಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಗಂಡ ಹೆಂಡತಿಗೆ ಮಾಲೀಕನಲ್ಲ, ಹಾಗೆಯೇ ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದಿದೆ.
ಈ ಕುರಿತಂತೆ ಐತಿಹಾಸಿಕ ತೀರ್ಪು ಪ್ರಕಟಿಸಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ, ಐಪಿಸಿ ಸೆಕ್ಷನ್ 497 ಅಸಾಂವಿಧಾನಿಕ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದು, ಮಹಿಳೆಯರು ಹಾಗೂ ಪುರುಷರು ಸಮಾನರು ಎಂದಿದ್ದಾರೆ.
ಹಾಗೆಯೇ, ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದಿರುವ ಸಿಜೆಐ, ಗಂಡ ಹೆಂಡತಿಗೆ ಮಾಲೀಕನಲ್ಲ. ಪುರುಷರಿಗೆ ಸಮಾನವಾಗಿ ಮಹಿಳೆಯೂ ಸಹ ಗೌರವಕ್ಕೆ ಅರ್ಹಳು. ಸಮಾನತೆ ಎನ್ನುವುದು ಆಡಳಿತ ತತ್ವವಾಗಿದೆ ಎಂದಿದ್ದಾರೆ.
ಮಹಿಳೆಯರ ಜೊತೆ ಅಗೌರವದ ವರ್ತನೆ ಸರಿಯಲ್ಲ, ಮಹಿಳೆಯರಿಗೆ ಅಗೌರವ ತೋರುವ ಕಾನೂನು ಸಾಂವಿಧಾನಿಕವಲ್ಲ ಎಂದಿದ್ದಾರೆ.
ವ್ಯಭಿಚಾರ ವಿವಾಹ ವಿಚ್ಚೇದನಕ್ಕೆ ಕಾರಣವಾಗಬಹುದು. ಇದಕ್ಕಾಗಿ ವ್ಯಕ್ತಿಗೆ ನಾಗರಿಕ ಪರಿಹಾರಗಳನ್ನು ನೀಡಬಹುದು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.















