ಭದ್ರಾವತಿ: ನ್ಯೂಟೌನ್ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಬಂಜಾರ ನೌಕರರ ಜಾಗೃತಿರಂಗ, ತಾಲೂಕು ಬಂಜಾರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತೀಜ್ ಮಳಾವೂ, ನಂಗಾರ ವಾಜ, ಪ್ರತಿಭಾ ಪುರಸ್ಕಾರ ಹಾಗು ಸನ್ಮಾನ ಸಮಾರಂಭವನ್ನು ಶಾಸಕ ಬಿ.ಕೆ. ಸಂಗಮೇಶ್ವರ್ ಉದ್ಘಾಟಿಸಿ ಶುಭ ಹಾರೈಸಿದರು.
ಡಿವೈಎಸ್‌ಪಿ ಕೆ.ಓಂಕಾರನಾಯ್ಕ ಮಾತನಾಡಿ ಬಂಜಾರ ಸಮಾಜವು ಪಾರಂಪರಿಕ ಸಮಾಜವಾಗಿದ್ದು ಸಮಾಜದಲ್ಲಿನ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕವಾಗಿ ನೆರವು ನೀಡಬೇಕಾಗಿದೆ. ಸಮಾಜದ ಬಲಿಷ್ಟತೆಗೆ ಒಗ್ಗಟ್ಟು ಪ್ರದರ್ಶಿಸಿ ಬಲಿಷ್ಟಗೊಳಿಸುವಂತಾಗಬೇಕು. ಸಮಾಜದ ಬಂಧುಗಳು ಹೆಚ್ಚು ನೆಲೆಯಾಗಿರುವ ಪ್ರದೇಶದಲ್ಲಿ ಶಾಸಕರ ನೆರವಿನೊಂದಿಗೆ ಸಮುದಾಯ ಭವನ ನಿರ್ಮಿಸಿಕೊಳ್ಳುವಂತಾಗಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಾಸಕರಲ್ಲಿ ಮನವಿ ಮಾಡಲಾಗಿಲ್ಲ. ಚುನಾವಣೆ ಪ್ರಕ್ರಿಯೆ ಮುಕ್ತಾಯವಾದ ನಂತರ ಶಾಸಕರೊಂದಿಗೆ ಚರ್ಚಿಸಿ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸುವ ಅಗತ್ಯತೆ ಇದೆ.ಸಮಾಜದ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಹಣ ಸಂಗ್ರಹಿಸಿ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅನುಕೂಲ ಕಲ್ಪಿಸುವಂತಾಗಬೇಕು. ಅದ್ದರಿಂದ ಸರಕಾರಿ ಉದ್ಯೋಗ ಹಾಗು ಉನ್ನತ ಉದ್ಯೋಗದಲ್ಲಿರುವ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಚನ್ನಗಿರಿ ವಲಯ ಅರಣ್ಯಾಧಿಕಾರಿ ವಿ.ಎನ್. ವಿರೇಶ್‌ನಾಯ್ಕ ಮಾತನಾಡಿ ಸಮಾಜದ ಸಣ್ಣ ಸಂಘಟನೆ ಪ್ರಸ್ತುತ ಬೃಹತ್ ಗಾತ್ರದಲ್ಲಿ ಬೆಳೆದಿದೆ. ಬಂಜಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಳೆದ 7 ವರ್ಷಗಳಿಂದ ನಿರಂತರವಾಗಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ವೆಚ್ಚಗಳನ್ನು ಸಂಪೂರ್ಣವಾಗಿ ಸಂಘದ ವತಿಯಿಂದ ಭರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸಂಗ್ರಹಿಸಲಾಗಿರುವ ನಿಧಿಗೆ ಇನ್ನೂ ಹೆಚ್ಚಿನ ನೆರವು ನೀಡಲು ಎಲ್ಲಾ ಉದ್ಯೋಗಸ್ಥರು ಮುಂದೆ ಬರಬೇಕೆಂದು ಕರೆ ನೀಡಿದರು.
ಚಿತ್ರದುರ್ಗ ಬಂಜಾರ್ ಗುರುಪೀಠದ ಸರ್ದಾರ್ ಶ್ರೀ ಸೇವಾಲಾಲ್ ಸ್ವಾಮೀಜಿ ಹಾಗು ಶಿಕಾರಿಪುರ ಸಾಲೂರು ಮಠದ ಶ್ರೀ ಸೈನಾಭಗತ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಬಂಜಾರ ನೌಕರರ ಜಾಗೃತಿರಂಗದ ಅಧ್ಯಕ್ಷ ಕೂಬಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್‌ನಾಯ್ಕ ಸಂತ ಸೇವಾಲಾಲ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕುವೆಂಪು ವಿ.ವಿ ಕುಲಸಚಿವ ಭೋಜ್ಯನಾಯ್ಕ, ಹಣಕಾಸು ವಿಭಾಗದ ಹಿರೇಮಣಿನಾಯ್ಕ, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ, ಇಂಜಿನಿಯರ್ ಸತೀಶ್, ಜಿಲ್ಲಾ ಬಂಜಾರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗೇಶನಾಯ್ಕ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ. ಕಾಂತರಾಜ್, ಅಕ್ಷರ ದಾಸೋಹ ಕೇಂದ್ರ ಸಹಾಯಕ ನಿರ್ದೇಶಕ ನಟರಾಜ್, ಮುಖ್ಯ ಶಿಕ್ಷಕ ಮೋತಿನಾಯ್ಕ, ತಾಲೂಕು ಬಂಜಾರ ಸಂಘದ ಅಧ್ಯಕ್ಷ ನಾಗರಾಜನಾಯ್ಕ, ಮಾಜಿ ಅಧ್ಯಕ್ಷ ಪ್ರೇಮ್ ಕುಮಾರ್, ಮುಖಂಡ ರಮೇಶ್ ನಾಯ್ಕ ಮತ್ತಿತರರು ವೇದಿಕೆಯಲ್ಲಿದ್ದರು.
ಕಲ್ಪನಹಳ್ಳಿ ಯುವಕರ ತಂಡದಿಂದ ಡೊಳ್ಳು ಕುಣಿತ ಹಾಗು ಸಿದ್ದಾಪುರ ಸರಕಾರಿ ಶಾಲಾಮಕ್ಕಳು ಕೋಲಾಟ ಹಾಗು ವಿದ್ಯಾರ್ಥಿನಿ ತೃಪ್ತಿ ಇವರಿಂದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತ್ತು. ಸಾಂಸ್ಕೃತಿಕ ಕಲೆಗಳು ಅನಾವರಣಗೊಂಡವು. ಕೆ.ಬಿ. ಜುಂಜಾನಾಯ್ಕ ಸ್ವಾಗತಿಸಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಭಾಗ್ಯಬಾಯಿ ತಂಡದವರು ಪ್ರಾರ್ಥಿಸಿದರೆ, ಟೀಕ್ಯಾನಾಯ್ಕ ಹಾಗು ಲೋಲಾಕ್ಷಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆ ಮೂಲಕ ಶ್ರೀಗಳನ್ನು ಕರೆತರಲಾಯಿತು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post