ಶಿವಮೊಗ್ಗ: ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸುವ ಸಲುವಾಗಿ ಬಿಜೆಪಿ ಸೋಷಿಯಲ್ ಮೀಡಿಯಾ ಸೆಲ್ ವಿಶೇಷ ಸಭೆ ನಡೆಸಿ, ಕಾರ್ಯತಂತ್ರಗಳನ್ನು ರೂಪಿಸಿದೆ.
ಈ ಕುರಿತಂತೆ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ ಪ್ರಧಾನಿ ನರೆಂದ್ರ ಮೊದಿ ನೇತೃತ್ವದ ಕೇಂದ್ರ ಸರ್ಕಾರದ ಮತ್ತು ಯಡಿಯೂರಪ್ಪನವರ ರಾಜ್ಯದ ಜನರಿಗೆ ಕೊಟ್ಟ ಸಾಧನೆಗಳನ್ನು ಸಾಮಾಜಿಕ ಜಾಲತಾಣದ ಮುಖೇನ ಜನರ ಬಳಿಗೆ ಕೊಂಡೊಯ್ಯುವಂತೆ ಸಾಮಾಜಿಕ ಜಾಲತಾಣದ ಕಾರ್ಯಕರ್ತರಿಗೆ ತಿಳಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಂದು ಸುಳ್ಳನ್ನು ನೂರು ಬಾರಿ ಸುಳ್ಳು ಹೇಳುತ್ತಾ, ನರೇಂದ್ರ ಮೋದಿಜಿ ಅವರು ತಂದಿರುವ ಜನಪರ ಯೋಜನೆಗಳನ್ನು ಮರೆಮಾಚುವ ಪ್ರಯತ್ನವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನ ಈ ಕೆಟ್ಟ ಸಂಸ್ಕೃತಿ ರಾಜಕಾರಣಕ್ಕೆ ನಾವು ನಾಂದಿ ಹಾಡಬೇಕಿದೆ ಇವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಲೋಕಸಭಾ ಉಪಚುನಾವಣೆ ಕೇವಲ ಉಪಚುನಾವಣೆ ಆಗದೇ ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಈ ಚುನಾವಣೆ ಮಾರ್ಗಸೂಚಿ ಆಗಲಿದೆ. ಈಗಾಗಲೇ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಹೆಸರು ಘೋಷಣೆಗೊಂಡು ಜಿಲ್ಲೆಯಾದ್ಯಂತ ಹಿರಿಯ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಡಿ.ಎಸ್. ಶಂಕರಮೂರ್ತಿ ಸೇೀರಿದಂತೆ ಅನೇಕ ಮುಖಂಡರುಗಳು ಜಿಲ್ಲೆಯಾದ್ಯಂತ ಚುನಾವಣೆ ಪ್ರಚಾರ ನಡೆಸುತ್ತಿದ್ದು ಈಗಾಗಲೇ ಬಿವೈಆರ್ ಅತಿ ಹೆಚ್ಚು ಮತಗಳ ಗೆಲುವು ಸಾಧಿಸುವ ವಾತಾವರಣ ಉಂಟಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಜನರಿಗೆ ಮತ್ತು ಕಾರ್ಯಕರ್ತರಿಗೆ ಯಶಸ್ವಿಯಾಗಿ ತನ್ನ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಅದೇ ರೀತಿ ಈ ಬಾರಿಯೂ ಉಪ ಚುನಾವಣೆ ಮತ್ತು ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಕಾರ್ಯ ನಿರ್ವಹಿಸಬೇಕು. ನರೇಂದ್ರ ಮೋದಿಯವರ ಜನಪರ ಕಾರ್ಯಗಳನ್ನು, ಯಡಿಯೂರಪ್ಪನವರು ಜಾರಿಗೆ ತಂದ ಜನಪರ ಕಾರ್ಯಗಳು ನಮ್ಮ ಪಕ್ಷದ ಸಂಘಟನೆ ಕುರಿತು ಅನೇಕ ವಿಚಾರಗಳನ್ನು ಪ್ರಾಮಾಣಿಕವಾಗಿ ಜನರ ಬಳಿ ಕೊಂಡೊಯ್ಯುವ ಕೆಲಸವನ್ನು ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಯಶಸ್ವಿಯಾಗಿ ನಿರ್ವಹಿಸಬೇಕು. ಇದು ನಿಮ್ಮ ಮೇಲಿರುವ ಜವಾಬ್ದಾರಿ ಇದಾಗಿದೆ ಎಂದು ಕರೆ ನೀಡಿದರು.
ರಾಜ್ಯ ಬಿಜೆಪಿ ವಿಶೇಷ ಆಹ್ವಾನಿತ ಸದಸ್ಯ ಎಸ್. ದತ್ತಾತ್ರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅರುಣ್ ಮಾತನಾಡಿದರು. ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕರಾದ ಪ್ರಶಾಂತ್ ಮಾಕನೂರು, ಸಿದ್ದು ಪುಂಡಲೀಕ, ಪ್ರದೀಪ್, ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು.
ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ಅವಿನಾಶ್, ವಿಕ್ರಮ್, ಸಹ ಸಂಚಾಲಕ ಎಚ್.ಆರ್. ತೀರ್ಥೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೃಷಿಕೇಶ್ ಪೈ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಭವಾನಿ ಮೋರೆ, ಪಾಲಿಕೆ ಸದಸ್ಯೆ ಸುರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Discussion about this post