ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಮಹೋನ್ನತ ದಿವಂಗತ ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾಹಸಸಿಂಹ ಅವರು ಕುಟುಂಬ ಅತ್ಯಂತ ಘನತೆಯಿಂದ ಘರ್ಜನೆ ಮಾಡಿದೆ.
ಈ ವಿಚಾರ ಕುರಿತಂತೆ ಇಂದು ತಮ್ಮ ಜೆಪಿ ನಗರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಭಾರತಿ ವಿಷ್ಣುವರ್ಧನ್, ವಿಷ್ಣುವರ್ಧನ್‌ಗೆ ಸ್ಮಾರಕವೇ ಬೇಕಾಗಿಲ್ಲ. ಅವರು ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಸ್ಮಾರಕವಾಗದಿದ್ದರೂ ಪರವಾಗಿಲ್ಲ, ಕೋಟ್ಯಂತರ ಅಭಿಮಾನಿಗಳು ನಮ್ಮೊಂದಿಗೆ ಇದ್ದಾರೆ ಎಂದು ತಮ್ಮ ಅಸಮಾಧಾನವನ್ನು ಅತ್ಯಂತ ಗೌರವಯುತವಾಗಿ ಹೊರಹಾಕಿದರು.
ವಿವಾದ ನೆನೆದು ಕಣ್ಣೀರಿಟ್ಟ ಭಾರತಿ, ನಾವು ಯಾವುದಕ್ಕೂ ಯಾರನ್ನೂ ನೋಯಿಸಿದವರಲ್ಲ. ಅಭಿಮಾನಿಗಳ ಆಶಯದಂತೆ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕು. ಒಂದು ವೇಳೆ ಆಗದೇ ಇದ್ದಲ್ಲಿ ಮೈಸೂರಿನಲ್ಲಾದರೂ ಸಹ ಸ್ಮಾರಕ ನಿರ್ಮಾಣವಾಗಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ ಎಂದರು.
ಅವತ್ತು ಏಕಾಏಕಿ ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ನಿಗದಿ ಮಾಡಿದರು. ಆದರೆ, ಮೈಸೂರಿನಲ್ಲಿ ಜಾಗ ಅನಾಥವಾಗಿ ಬಿದ್ದಿತ್ತು. ಅದನ್ನು ಯಾರೂ ಗಮನಿಸಿರಲಿಲ್ಲ. ಎಲ್ಲರಿಗೂ ಮಾತಾಡೋಕೆ ಬಹಳ ಸುಲಭ. ಆದರೆ, ವಿಚಾರವನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ಗಲಾಟೆ ಬೇಡ, ಶಾಂತ ರೀತಿಯಲ್ಲಿ ಮನಸ್ಸಿಗೆ ಸಮಾಧಾನದ ರೀತಿಯಲ್ಲಿ ನಡೆಯಲಿ. ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ಮಾಡುತ್ತೇವೆ ಎಂದು ಸ್ಥಳ ನಿಗದಿ ಮಾಡುವುದು ಸರಿಯಲ್ಲ ಎಂದರು.
ವಿಷ್ಣು ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮರ್ಯಾದೆ ಇಲ್ಲದ ಸ್ಥಳಗಳಿಗೆ ಯಾತಕ್ಕಾಗಿ ಹೋಗಬೇಕು. ನೀವು ನಿಮಗೆ ಮರ್ಯಾದೆ ಇಲ್ಲದ ಸ್ಥಳಕ್ಕೆ ಹೋಗುತ್ತೀರಾ ಎಂದು ಪ್ರಶ್ನಿಸಿದರು.
ವಿಷ್ಣುವರ್ಧನ್ ಪುತ್ರಿ ಕೀರ್ತಿ ಮಾತನಾಡಿ, ಪ್ರತಿಯೊಂದು ದಿನವೂ ಹೋರಾಟ ಮಾಡುತ್ತಾ ಬಂದಿದ್ದೇವೆ. 9 ವರ್ಷ ಕಾದಿದ್ದೇವೆ, ಇನ್ನೆಷ್ಟು ವರ್ಷ ನಾವು ಕಾಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪ್ಪನ ಬಗ್ಗೆ ಚಾನಲ್‌ಗಳಲ್ಲಿ ಕುಳಿತು ಮಾತನಾಡುತ್ತಾರೆ. ನಮ್ಮ ತಂದೆಯ ಬಗ್ಗೆ ನಮಗೆ ಗೊತ್ತು. ಮೊದಲು ನಮ್ಮ ತಂದೆಯನ್ನು ಟಾರ್ಗೆಟ್ ಮಾಡುತ್ತಿದ್ದರು. ಈಗ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮ ತಂದೆ ಬದುಕಿದ್ದಿದ್ದರೆ ಯಾರಿಗಾದರೂ ಮಾತನಾಡುವ ತಾಕತ್ತು ಇರುತ್ತಿತ್ತೇ ಎಂದು ಖಾರವಾಗಿ ಪ್ರಶ್ನಿಸಿದ ಅವರು, ನಿಮ್ಮ ವಿಚಾರಗಳನ್ನು ಚಾನಲ್‌ಗಳಲ್ಲಿ ಕುಳಿತು ಮಾತನಾಡುವುದಲ್ಲ. ನಮ್ಮ ಕುಟುಂಬದೊಂದಿಗೆ ಬಂದು ಚರ್ಚಿಸಿ ಎಂದರು.
ಅಲ್ಲಿ ಮಾಡುತ್ತೇವೆ, ಇಲ್ಲಿ ಮಾಡುತ್ತೇವೆ ಎಂದು 9 ವರ್ಷದಿಂದ ಅಲೆಯುತ್ತಲೇ ಇದ್ದೇವೆ. ನಮಗೇನು ಭಿಕ್ಷೆ ನೀಡುತ್ತಿದ್ದಾರಾ? ನಾವೇನು ನಮ್ಮ ಸ್ವಂತಕ್ಕೆ ಕೇಳುತ್ತಿದ್ದೇವಾ? ಅಂತಹ ಸ್ಮಾರಕ ನಮಗೆ ಬೇಡವೇ ಬೇಡ ಎಂದು ಕಿಡಿ ಕಾರಿದರು.
ಅಂಬರೀಶ್ ಸಂಸ್ಕಾರ ಸಂದರ್ಭದಲ್ಲಿ ನನ್ನ ಪತಿ ಅನಿರುದ್ ತೆರಳಿ ವಿಷ್ಣುವರ್ಧನ್ ಅವರ ಹೆಸರು ಹೇಳಿ ಹೂಗುಚ್ಚ ಸಲ್ಲಿಸಿ, ಅಂತಿಮ ಗೌರವ ಸಲ್ಲಿಕೆ ಮಾಡುವಂತೆ ಕೇಳಿದರೆ, ಭಾರತಿ ಬರಬೇಕು ಎಂದು ಷರತ್ತು ವಿಧಿಸುತ್ತಾರೆ. ಇದೇನಾ ವಿಷ್ಣುವರ್ಧನ್ ಅವರಿಗೆ ನೀವು ನೀಡುವ ಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದರು.
Discussion about this post