ಭದ್ರಾವತಿ: ಶ್ರೇಷ್ಠವಾದ ಹಾಗೂ ಕನಿಷ್ಠವಾದ ಎರಡುಬಗೆಯ ಸಂಪತ್ತುಗಳಲ್ಲಿ ಭಗವಂತನ ಗುಣಗಳೇ ಶ್ರೇಷ್ಟ ಸಂಪತ್ತು ಎಂದು ಉಡುಪಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಸ್ವಾಮಿಜೀ ಹೇಳಿದರು.
ಸಿದ್ಧಾರೂಢನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಸಮೀಪದ ಶ್ರೀನಿವಾಸ ಕಲ್ಯಾಣ ಸೇವಾ ಸಮಿತಿ ವತಿಯು ನಿರ್ಮಿಸಲು ಉದ್ದೇಶಿಸಿರುವ ಶ್ರೀಶ್ರೀನಿವಾಸನ ದೇವಾಲಯಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಅನುಗ್ರಹ ಸಂದೇಶ ನೀಡಿದರು.
ಅನಂತಗುಣಗಳಿಂದ ಪರಿಪೂರ್ಣನಾದ ಭಗವಂತನ ಕುರಿತಾದ ಬಗೆ ಬಗೆಯ ವಿಷಯಗಳನ್ನು ತಿಳಿಯಲು ಅಗತ್ಯವಾದ ಇಂದ್ರಿಯಗಳನ್ನು ಪಡೆಯುವುದು ಶ್ರೇಷ್ಠವಾದ ಸಂಪತ್ತೆನಿಸುತ್ತದೆ. ಇದಕ್ಕೆ ಹೊರತಾದ ಉಳಿದ ಸಂಪತ್ತುಗಳು ಕನಿಷ್ಠವಾದ ಸಂಪತ್ತುಗಳಾಗಿದ್ದು, ನಾವು ಪ್ರತಿನಿತ್ಯ ಭಗವಂತನಲ್ಲಿ ಈ ರೀತಿಯ ಅನುಸಂಧಾನದಿಂದ ಭಗವಂತನಲ್ಲಿ ನಮ್ಮ ಮನಸ್ಸು ಸದಾ ಹೊಂದಿರುವಂತೆ ಅವನಲ್ಲಿ ಬೇಡುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಶ್ರೀನಿವಾಸ ಎಂಬ ಪದದ ಅರ್ಥವೇ ಹೇಳುವಂತೆ ಶ್ರೀ ಎಂದರೆ ಲಕ್ಷ್ಮೀ ಎಂದು ಅಂತಹ ಲಕ್ಷ್ಮೀಯನ್ನು ಪತ್ನಿಯಾಗಿ ಹೊಂದಿರುವ ಭಗವಂತ ತನ್ನ ಬಗ್ಗೆ ಪರಿಮಳ ಯುಕ್ತವಾದ ಅನಂತಗುಣಗಳನ್ನು ಪತ್ನಿಯಾದ ಲಕ್ಷ್ಮೀದೇವಿಯಲ್ಲಿ ಪ್ರತಿನಿತ್ಯ ಪ್ರತಿಕ್ಷಣ ತಿಳುವಳಿಕೆ ಮೂಡಿಸುವವನಾದ್ದರಿಂದ ಭಗವಂತನು ಶ್ರೀನಿವಾಸ ಎನಿಸಿದ್ದಾನೆ ಎಂದರು.
ಯಾವುದೇ ಉಪನ್ಯಾಸದಲ್ಲಿಯೂ ಹೇಗೆ ವಿವಿಧ ರೀತಿಯಲ್ಲಿ ಬಗೆ ಬಗೆಯಾಗಿ ವಿಷಯಗಳನ್ನು ಉಪನ್ಯಾಸ ನೀಡಿದಾಗ ಕೇಳುಗರಲ್ಲಿ ಉಪನ್ಯಾಸದ ಬಗ್ಗೆ ಆಸಕ್ತಿ ಇಮ್ಮಡಿಸುತ್ತದೆಯೋ ಹಾಗೆಯೇ ಭಗವಂತನ ಅನಂತಗುಣಗಳನ್ನು ಪ್ರತಿನಿತ್ಯ ಕೇಳುವುದರಿಂದ ಭಗವಂತನ ಕುರಿತಾದ ಆಸಕ್ತಿ ಇಮ್ಮಡಿಸಲು ಪ್ರೇರಣೆಯಾಗುತ್ತದೆ ಎಂದರು.
ಮೊಬೈಲ್‌ಗಳಲ್ಲಿರುವ ಆಸಕ್ತಿ ತೊರೆದು ಭಗವಂತನ ಕಡೆ ಹೆಚ್ಚಿನ ಗಮನ ನೀಡುವುದರಿಂದ ಆತನ ಅಗಣಿತ ಗುಣಗಳ ತಿಳುವಳಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಅಂತಹ ಶ್ರೀನಿವಾಸನ ದೇವಾಲಯದ ನಿರ್ಮಾಣಕ್ಕೆ ಈದಿನ ನೆರವೇರಿರುವ ಶಂಕುಸ್ಥಾಪನೆ ಕಾರ್ಯ ಪವಿತ್ರಕಾರ್ಯವಾಗಿದ್ದು ದೇವಾಲಯ ಶೀಘ್ರವಾಗಿ ನಿರ್ಮಾಣವಾಗಲಿ ಎಂದರು.
ಶಂಕುಸ್ಥಾಪನೆಯ ನಂತರ ಶ್ರೀಗಳು ಮಠದಲ್ಲಿ ದೇವರ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀನಿವಾಸಕಲ್ಯಾಣ ಸೇವಸಮಿತಿ ಅಧ್ಯಕ್ಷ ವಾಸು, ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ, ರಾಮಚಂದ್ರ, ಪಂಡಿತ್ ಗೋಪಾಲಾಚಾರ್, ಶ್ರೀನಿವಾಸಾಚಾರ್, ಮೃತ್ತಿಕಾ ಗುರುರಾಜಾಚಾರ್, ಮಠದ ಮುಖ್ಯಸ್ಥ ಶೇಷಗಿರಿ ಆಚಾರ್, ಮಧುಸೂಧನ್, ರಮಾಕಾಂತ, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post