ಸೊರಬ: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಹಿಂದೆಂದೂ ಕಾಣದಷ್ಟು ಸೊರಬ ಕ್ಷೇತ್ರಕ್ಕೆ ಸಾಕಷ್ಟು ಅನುದಾನದ ಹೊಳೆ ಹರಿದು ಬಂದಿದೆ ಎಂದು ಲೋಕಸಭಾ ಉಪಚುನಾವಣಾ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಸೊರಬ ವಿಧಾನಸಭಾ ಕ್ಷೇತ್ರದ ತತ್ತೂರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ರಸ್ತೆ, ಬಸ್ ನಿಲ್ದಾಣಗಳು, ಅನೇಕ ಸರ್ಕಾರಿ ಕಟ್ಟಡಗಳು ಈ ಅವಧಿಯಲ್ಲಿ ಆರಂಭಗೊಂಡಿದ್ದವು. ಈ ಅನುದಾನವನ್ನು ಕ್ಷೇತ್ರಕ್ಕೆ ತರುವುದರಲ್ಲಿ ಆಗಿನ ನಮ್ಮ ಪಕ್ಷದ ಶಾಸಕರು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದಾರೆ ಎಂದರು.
ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಇಬ್ಬರೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಜನಪರ, ಬಡವರ, ರೈತರ ಪರ ಕೆಲಸಗಳು ಜನಪರ ಯೋಜನೆಗಳು ರಾಜ್ಯಕ್ಕೆ ನೀಡಿದ್ದರು ಎಂದರು.
ದೇಶದ ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ದೇಶದ ಜನರ ಶ್ರೇಯಸ್ಸಿಗೆ ಅನೇಕ ಜನಪರ ಯೋಜನೆಗಳು ನಮ್ಮ ಕಣ್ಣ ಮುಂದಿವೆ. ನಾವು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇವೆ. ಎಲ್ಲಾ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನಮಗೆ ಅತಿ ಹೆಚ್ಚು ಮತಗಳನ್ನು ನೀಡಿ ಆಶೀರ್ವಾದವನ್ನು ನೀಡುತ್ತಿದ್ದು ಈ ಬಾರಿಯ ಉಪ ಚುನಾವಣೆಯಲ್ಲಿ ನಮಗೆ ಆಶೀರ್ವಾದ ನೀಡಬೇಕು ಎಂದು ವಿನಂತಿಸಿದರು.
ಸಭೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ, ರಾಜ್ಯ ಬಿಜೆಪಿ ವಿಶೇಷ ಆಹ್ವಾನಿತ ಸದಸ್ಯ ಎಸ್. ದತ್ತಾತ್ರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ಮಾಜಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ಅರವಿಂದ್, ಫಾಣಿ ರಾಜಪ್ಪ, ಗಜಾನನ ರಾಯರು, ಶ್ರೀಪಾದ್ ಹೆಗಡೆ, ಅಶೋಕ್ ನಾಯಕ್, ಉಮೇಶ್ ಗೌಡ್ರು, ಸತೀಶ್, ಪುರುಷೋತ್ತಮ ಇದ್ದರು.
Discussion about this post