ಗದಗ: ಪ್ರಸಿದ್ದ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಇಂದು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.
ಸ್ವಾಮಿಗಳಿಗೆ ಬೆಳಗಿನ ಜಾವ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ.
ಸ್ವಾಮಿಗಳ ನಿಧನದಿಂದಾಗಿ ಅವರ ಹಾಗೂ ಮಠದ ಭಕ್ತವರ್ಗದಲ್ಲಿ ತೀವ್ರ ಶೋಕ ಮಡುಗಟ್ಟಿದ್ದು, ಇಡಿಯ ಗದುಗಿನಲ್ಲಿ ಸೂತಕದ ಛಾಯೆ ಆವರಿಸಿದೆ. ಸಾಮಾಜಿಕ ಕಳಕಳಿಯ ನೂರಾರು ಕಾರ್ಯಗಳ ಮೂಲಕ ಸ್ವಾಮೀಜಿ ಜನಾನುರಾಗಿಯಾಗಿದ್ದರು.
ಇನ್ನು, ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಎಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರುಗಳು ಸ್ವಾಮೀಜಿಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡ, ಸಾವಿರಾರು ಮಂದಿಗೆ ಅನ್ನದಾನ, ವಿದ್ಯಾದಾನ ಮಾಡಿದ ಶ್ರೀಗಳ ನಿಧನ ನಮಗೆ ಅಪಾರ ನೋವನ್ನು ತಂದಿದೆ ಎಂದಿದ್ದಾರೆ.
ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದು, ಶ್ರೀಗಳ ನಿಧನ ಆಘಾತ ತಂದಿದ್ದು, ಧಾರ್ಮಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದಿದ್ದಾರೆ.
ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದು, ಅಪಾರ ಭಕ್ತರನ್ನು ಹೊಂದಿದ್ದ ಶ್ರೀತೋಂಟದಾರ್ಯ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ತೀವ್ರ ಆಘಾತಗೊಂಡೆ. ಸ್ವಾಮೀಜಿಯವರ ನಿಧನದಿಂದ ನಾಡು ಶ್ರೇಷ್ಠ ಸಾಧಕರೊಬ್ಬರನ್ನು ಕಳೆದುಕೊಂಡಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದಿದ್ದಾರೆ.
ಅಪಾರ ಭಕ್ತರನ್ನು ಹೊಂದಿದ್ದ ಶ್ರೀ ತೋಂಟದಾರ್ಯ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ತೀವ್ರ ಆಘಾತಗೊಂಡೆ. ಸ್ವಾಮೀಜಿಯವರ ನಿಧನದಿಂದ ನಾಡು ಶ್ರೇಷ್ಠ ಸಾಧಕರೊಬ್ಬರನ್ನು ಕಳೆದುಕೊಂಡಿದೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ. pic.twitter.com/pEUROwYZmF— B.S. Yeddyurappa (@BSYBJP) October 20, 2018
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ತೋಂಟದಾರ್ಯ ಸ್ವಾಮೀಜಿ ಬಹಳ ಓದಿದವರು ಹಾಗೂ ವೈಚಾರಿಕತೆ ಬೆಳೆಸಿಕೊಂಡ ಸ್ವಾಮೀಜಿ. ತೋಂಟದಾರ್ಯ ಸ್ವಾಮೀಜಿ ನಿಧನ ನಾಡಿಗೆ ದಿಗ್ಬ್ರಮೆ ಮೂಡಿಸಿದ್ದು, ಧಾರ್ಮಿಕ ಕ್ಷೇತ್ರಕ್ಕೆ ಬಹಳ ನಷ್ಟ ಉಂಟಾಗಿದೆ ಎಂದಿದ್ದಾರೆ.

















