ನವದೆಹಲಿ: ಪ್ರಧಾನಿನ ನರೇಂದ್ರ ಮೋದಿಯವರ ವಿರುದ್ಧ ಕಂಡಲ್ಲಿ ಕೆಂಡ ಕಾರುವ ಕಾಂಗ್ರೆಸ್ ಈಗ ಒಂದು ವಿಚಾರದಲ್ಲಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಆಶ್ಚರ್ಯ ಮೂಡಿಸಿದೆ.
ಹೌದು. ಆಫ್ಘಾನಿಸ್ಥಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿರುವ ಮೋದಿ ವಿರುದ್ಧ ಕಿಡಿ ಕಾರಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಈ ವಿಚಾರದಲ್ಲಿ ಭಾರತದ ಪ್ರಧಾನಿ ಪರವಾಗಿ ನಿಲ್ಲುವುದಾಗಿ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ಭಾರತದ ಪ್ರಧಾನಿ ಬಗ್ಗೆ ಟ್ರಂಪ್ ಆಡಿರುವ ಮಾತುಗಳು ಉತ್ತಮ ಅಭಿರುಚಿಯದ್ದಲ್ಲ. ನಮ್ಮ ದೇಶದ ಪ್ರಧಾನಿಗಳ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತವು ಯುದ್ಧ ಪೀಡಿತ ಆಫ್ಘಾನ್‌ನಲ್ಲಿ ಲೈಬ್ರರಿ ಸ್ಥಾಪಿಸಲು ನೆರವು ನೀಡಿದೆ. ಮಾತ್ರವಲ್ಲ 2004ರಿಂದಲೂ ಭಾರತವು ಆಫ್ಘಾನ್‌ನಲ್ಲಿ ರಸ್ತೆಗಳು, ಅಣೆಕಟ್ಟುಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. 3 ಶತಕೋಟಿ ಡಾಲರ್ ನೆರವನ್ನೂ ನೀಡುತ್ತಲೇ ಬಂದಿದೆ. ಇದರಿಂದ ಆ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಆದರೂ ಭಾರತ ಇದನ್ನು ಮಾಡುತ್ತಿದೆ. ಇಂತಹ ದೇಶದ ಪ್ರಧಾನಿಯವರ ವಿರುದ್ಧ ಹೀಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಆಫ್ಘನ್ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿರುವ ಟೀಕಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಟ್ರಂಪ್ ಟೀಕಿಸುತ್ತಿರುವುದು ಭಾರತ ದೇಶದ ಪ್ರಧಾನಮಂತ್ರಿ ವಿರುದ್ಧ ಎಂಬುದನ್ನು ಅವರು ಮರೆಯಬಾರದು ಎಂದಿದ್ದಾರೆ.
ಇನ್ನು, ಟ್ರಂಪ್ ಹೇಳಿಕೆಗೆ ಇದೀಗ ಪಕ್ಷಭೇದ ಮರೆದು ಭಾರತೀಯ ರಾಜಕೀಯ ಪಕ್ಷಗಳು ತಕ್ಕ ಪ್ರತ್ಯುತ್ತರ ನೀಡಿವೆ. ಪ್ರಮುಖವಾಗಿ ಹಲವು ವಿಚಾರಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ನಿಂತಿರುವ ಪ್ರತಿಪಕ್ಷ ಕಾಂಗ್ರೆಸ್ ಕೂಡ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನಿಗೆ ನಿಂತಿದೆ.

















