ಕ್ಯಾತ್ಸಂದ್ರ: ಭಾರತೀಯ ಸನಾತನ ಪರಂಪರೆಯ ಯುಗ ಸಂತ, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಹಿರಿಯ ಸ್ವಾಮಿಗಳಾದ ಡಾ. ಶಿವಕುಮಾರ ಶ್ರೀಗಳು ಇಂದು ಅಸ್ತಂಗತರಾಗಿದ್ದಾರೆ.
ಶತಮಾನ ಕಂಡ 111 ವರ್ಷದ ಶತಾಯುಷಿ ಸಿದ್ದಗಂಗಾ ಶ್ರೀಗಳು ವಯೋಸಹಜವಾದ ಅಸ್ವಸ್ತತೆಯಿಂದ ಬಳಲುತ್ತಿದ್ದ ಅವರು, ಇಂದು ನಸುಕಿನಲ್ಲಿ ತಮ್ಮ ಇಹದ ಕರ್ತವ್ಯವನ್ನು ಮುಗಿಸಿ ಶಿವನ ಪಾದದಲ್ಲಿ ಲೀನವಾಗಿದ್ದಾರೆ. ಈ ಮೂಲಕ ಶ್ರೀಮಠದ ಸಾವಿರಾರು ಮಕ್ಕಳನ್ನು, ಕೋಟ್ಯಾಂತರ ಭಕ್ತರನ್ನು ಅನಾಥವನ್ನಾಗಿಸಿ ಶ್ರೀಗಳು ತೆರಳಿದ್ದಾರೆ.
ಇಂದು ಮುಂಜಾನೆ 11.44ಕ್ಕೆ ಶಿವನ ಪಾದ ಸೇರಿದ್ದು, ನಾಳೆ ಸಂಜೆ 4.30ಕ್ಕೆ ಶ್ರೀಗಳ ಅಂತಿಮ ಕ್ರಿಯಾಧಾನಗಳು ನಡೆಯಲಿವೆ.
ನಿನ್ನೆಯಿಂದ ಶ್ರೀಗಳ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಸಾವಿರಾರು ಭಕ್ತರು ತಂಡೋಪತಂಡವಾಗಿ ಮಠದತ್ತ ಧಾವಿಸಿ, ಕಿಟಕಿಯ ಮೂಲಕವೇ ಶ್ರೀಗಳ ದರ್ಶನ ಪಡೆಯುತ್ತಿದ್ದರು. ಇಂದು ನಸುನಿಕಿನಲ್ಲಿ ಶ್ರೀಗಳ ಆರೋಗ್ಯ ತೀವ್ರವಾಗಿ ಏರುಪೇರಾದ ಹಿನ್ನೆಲೆಯಲ್ಲಿ ಮಠದಲ್ಲಿ ನಡೆಯುತ್ತಿದ್ದ ದೈನಂದಿನ ಮುಂಜಾನೆಯ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿತ್ತು.
ಹಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿಶೇಷ ಚಿಕಿತ್ಸೆಗಾಗಿ 15 ದಿನಗಳ ಹಿಂದೆ ಚೆನ್ನೈಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಒಂದು ವಾರದಿಂದ ಸಿದ್ದಗಂಗಾ ಮಠದ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸಿದ್ಧಗಂಗಾ ಶ್ರೀಗಳಿಗೆ ಮೊದಲ ಬಾರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು 2016ರ ಮೇ 16 ರಂದು. ಪಿತ್ತಕೋಶದಲ್ಲಿ ಬ್ಲಾಕ್ ಆಗುತ್ತಿದೆ ಎಂಬ ಶಂಕೆ ಮೇಲೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದು ಅಂದು ವಿವಿಧ ಪರೀಕ್ಷೆಗಳನ್ನು ನಡೆಸಲಾಯಿತು. ಆ ವೇಳೆ ಪಿತ್ತಕೋಶದ ನಾಳಗಳಲ್ಲಿ ಸ್ವಲ್ಪ ಮಟ್ಟಿಗೆ ಬ್ಲಾಕ್ ಆಗಿರುವುದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಅವರನೇತೃತ್ವದಲ್ಲಿ ತಪಾಸಣೆ ನಡೆಸಿ, ಎಆರ್‌ಸಿಪಿ ಮಾಡಿ ಸ್ಟೆಂಟ್ ಗಳನ್ನು ಅಳವಡಿಸಲಾಗಿತ್ತು. ಇದು ವರ್ಷಗಳ ಕಾಲ ಸರಿಯಾಗಿಯೇ ಇತ್ತು. ಆದರೆ ಒಂದು ವರ್ಷ ಕಳೆಯುತ್ತಿದ್ದಂತೆ ಆಗಾಗ ಸ್ಟೆಂಟ್ ಗಳು ಬ್ಲಾಕ್ ಆಗಲಾರಂಭಿದ್ದವು.
ಶ್ರೀಗಳಿಗೆ ಪದೇ ಪದೇ ಸ್ಟೆಂಟ್ ಗಳಲ್ಲಿ ಬ್ಲಾಕ್ ಆಗುತ್ತಿದ್ದರಿಂದ ಎಆರ್’ ಸಿಪಿಮಾಡಿ 4 ಮೆಟಲ್ ಮತ್ತು 7 ಪ್ಲಾಸ್ಟಿಕ್ ಸ್ಟೆಂಟ್ ಗಳನ್ನು ಅಳವಡಿಸಲಾಗಿತ್ತು.
ಶ್ರೀಗಳ ಶ್ವಾಸಕೋಶದಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಅದಕ್ಕೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿ, ಅದರಂತೆ ಮಠದ ಕಿರಿಯ ಶ್ರೀ, ಹಿರಿಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಚರ್ಚೆ ನಡೆಸಿ ಚೆನ್ನೈ ನಲ್ಲಿರುವ ರೆಲಾ ಆಸ್ಪತ್ರೆಗೆ ಕರೆದೊಯ್ಯುವ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಡಿ.6 ರಂದು ಶ್ರೀಗಳಿಗೆ ಆ ವರೆಗೆ ನೀಡಿದ್ದ ಎಲ್ಲಾ ವೈದ್ಯಕೀಯ ಚಿಕಿತ್ಸೆಯ ದಾಖಲೆಗಳೊಂದಿಗೆ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಚೆನ್ನೈಗೆ ಪ್ರಯಾಣ ಬೆಳೆಸಿದ್ದರು. ಚೆನ್ನೈನ ರೆಲಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಮಹಮ್ಮದ್ ರೆಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಡಾ.ಮಹಮ್ಮದ್ ರೆಲಾ ಅವರ ಸಲಹೆಯಂತೆ ಡಿ.7 ರಂದು ಸಿದ್ಧಗಂಗಾ ಶ್ರೀಗಳನ್ನು ವಿಶೇಷ ಏರ್ ಅಂಬುಲೆನ್ಸ್ ನಲ್ಲಿ ಚೆನ್ನೈನ ರೆಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಡಿ.8 ರಂದು ಡಾ.ಮಹಮ್ಮದ್ ರೆಲಾ ನೇತೃತ್ವದಲ್ಲಿ ಶ್ರೀಗಳಿಗೆ ಯಶಸ್ವಿ ಬೈ ಪಾಸ್ ಸರ್ಜರಿ ಮಾಡಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ಕೇವಲ ಎರಡ್ಮೂರು ಗಂಟೆಗಳ ಒಳಗಾಗಿ ಶ್ರೀಗಳು ಅನಸ್ತೆಶಿಯಾದಿಂದ ಚೇತರಿಸಿಕೊಂಡಿದ್ದರು. ಇದನ್ನು ವೈದ್ಯಕೀಯ ಲೋಕದ ಪವಾಡ ಎಂದು ವೈದ್ಯರು ಬಣ್ಣಿಸಿದ್ದರು.
ಎರಡ್ಮೂರು ದಿನಗಳಲ್ಲಿ ಶಸ್ತ್ರಚಿಕಿತ್ಸೆಯಿಂದಲೂ ಶ್ರೀಗಳು ಚೇತರಿಸಿಕೊಂಡಿದ್ದರು.
ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆಯಲ್ಲಿ ಶ್ರೀಗಳು ಲವಲವಿಕೆಯಿಂದ ಇದ್ದದ್ದರಿಂದ ಅವರ ಇಚ್ಛೆಯಂತೆ ಡಿ.9 ರಂದು ಆಸ್ಪತ್ರೆಯಿಂದ ಮಠಕ್ಕೆ ಕರೆಯಲಾಗಿತ್ತು.
ಕೆಲವೇ ದಿನಗಳಲ್ಲಿ ಪುನಃ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಶ್ರೀಗಳ ಮನವೊಲಿಸಿ ಅವರನ್ನು 2019ರ ಜ.3 ರಂದು ನಗರದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ಮಠದಲ್ಲೇ ಚಿಕಿತ್ಸೆ ನೀಡುವಂತೆ ಶ್ರೀಗಳು ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 13 ದಿನಗಳ ಬಳಿಕ ಜ.16ರ ಬೆಳಗ್ಗಿನ ಜಾವ 3.50 ರ ಸಮಯದಲ್ಲಿ ಶ್ರೀಗಳನ್ನು ಮಠಕ್ಕೆ ಕರೆತಂದು, ಮಠದಲ್ಲಿಯೇ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ಕೋಟ್ಯಂತರ ಭಕ್ತರ ಹೋಮ ಹವನ, ಪೂಜೆ, ಪ್ರಾರ್ಥನೆಗಳು ಫಲ ನೀಡದೇ ಶಿವಕುಮಾರ ಸ್ವಾಮಿಗಳು ರಾಜ್ಯದ ಸನಾತನ ಪರಂಪರೆಯನ್ನು ಅನಾಥವನ್ನಾಗಿಸಿ, ಶಿವನಲ್ಲಿ ಐಕ್ಯರಾಗಿದ್ದಾರೆ.
ಶ್ರೀಮಠದಲ್ಲಿ ಬಿಗಿ ಪೊಲೀಸ್ ಭದ್ರತೆ
ಸಿದ್ದಗಂಗಾಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಹ ಭಕ್ತರು ಭಕ್ತರು ಹಾಗೂ ನೂರಾರು ಗಣ್ಯರು ಮಠಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ರಾಷ್ಟಿಯ ಹೆದ್ದಾರಿ 4 ಹಾಗೂ ಮಠದ ಸುತ್ತಮುತ್ತಲು ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆಗಳಿಂದ ಸಾವಿರಾರು ಪೊಲೀಸ್ನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಸ್ವತಃ ಡಿಜಿ, ಐಜಿ ಇಂದು ನಸುಕಿನಿಂದಲೇ ಮಠದಲ್ಲಿ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದು, ಡಿಜಿಪಿಗಳನ್ನು ಹಾಗೂ ಹಲವು ಜಿಲ್ಲೆಗಳ ವರಿಷ್ಠಾಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ವಿವಿಐಪಿಗಳ ಆಗಮನದ ಹಿನ್ನೆಲೆಯಲ್ಲಿ ಮಠದ ಬಳಿಯಲ್ಲಿ ಏಕಕಾಲಕ್ಕೆ ಸುಮಾರು 11 ಹೆಲಿಕಾಪ್ಟರ್ ಗಳನ್ನು ಇಳಿಸುವಷ್ಟು ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡಲಾಗಿದೆ.
Discussion about this post