ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಗೆ ವಾರಗಳ ಲೆಕ್ಕದಲ್ಲಿ ಸಮಯ ಹತ್ತಿರವಾಗುತ್ತಿರುವ ಬೆನ್ನಲ್ಲೆ, 5 ದಿನಗಳಲ್ಲಿ 10 ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರವಾಗಿ ಪ್ರಚಾರ ಸಭೆ ನಡೆಸಲು ಮುಂದಾಗಿದ್ದು, ಈ ಮೂಲಕ ರಣಕಹಳೆ ಊದಲು ಸಜ್ಜಾಗಿದ್ದಾರೆ.
ಮೊಟ್ಟ ಮೊದಲನೆಯದಾಗಿ, ಛತ್ತೀಸ್’ಘಡದ ರಾಯಪುರದಲ್ಲಿ ಇಂದು ಬಹಿರಂಗ ಸಭೆ ನಡೆಸಲಿದ್ದು, ಇಲ್ಲಿಂದಲೇ ಮೋದಿ ಸುನಾಮಿ ಆರಂಭವಾಗಲಿದೆ.
ಅಲ್ಲದೇ ಇಂದೇ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಗೆ ಭೇಟಿ ನೀಡಲಿರುವ ಮೋದಿ, ಫಲಕಾತ-ಸಾಲ್ಸಾಲಾಬರಿ ನಡುವಿನ ಚತುಷ್ಪತ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇನ್ನು, ಫೆ.9ರ ನಾಳೆ ಈಶಾನ್ಯದತ್ತ ಮುಖ ಮಾಡುವ ಮೋದಿ ಅಸ್ಸಾಂ, ಅರುಣಾಷಲ ಪ್ರದೇಶ ಹಾಗೂ ತ್ರಿಪುರಾಗಳಲ್ಲಿ ಸಭೆ ನಡೆಸಲಿದ್ದಾರೆ.
ಫೆ.10ರಂದು ತಮಿಳುನಾಡಿನ ತಿರ್ಪೂರ್, ಕರ್ನಾಟಕದ ಹುಬ್ಬಳ್ಳಿ ಹಾಗೂ ಆಂಧ್ರಪ್ರದೇಶದ ಗುಂಟೂರಿನಲ್ಲಿ ಬಹಿರಂಗ ಸಭೆ ನಡೆಸಲಿರುವ ಮೋದಿ, ಫೆ.11ರಂದು ಉತ್ತರ ಪ್ರದೇಶದ ಮಥುರಾಗೆ ಭೇಟಿ ನೀಡಲಿದ್ದಾರೆ.
ಈ ಪಟ್ಟಿನ ಕೊನೆಯ ಹೆಜ್ಜೆಯಾಗಿ ಫೆ.12ರಂದು ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಲಿರುವ ಮೋದಿ ಸ್ವಚ್ಛ ಶಕ್ತಿ ಕಾರ್ಯಕ್ರಮದಲ್ಲೂ ಸಹ ಭಾಗಿಯಾಗಲಿದ್ದಾರೆ.
















