ಶಿವಮೊಗ್ಗ: ಸಾಹಿತ್ಯಕ್ಕೆ ವ್ಯಕ್ತಿತ್ವವನ್ನೇ ಬದಲಾವಣೆ ಮಾಡುವ ಶಕ್ತಿಯಿದೆ. ಹೀಗಾಗಿ, ಪ್ರತಿಯೊಬ್ಬರೂ ಪುಸ್ತಕ ಹಾಗೂ ಸಾಹಿತ್ಯವನ್ನು ಓದು ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ.ನಾ. ಡಿಸೋಜಾ ಕರೆ ನೀಡಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಿಂದ ಹೊರತಂದಿರುವ ಚರಕ ಮಾಸಿಕ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜೀವನದಲ್ಲಿ ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ಎಂತಹ ಕಷ್ಟವನ್ನೂ ಸಹಾ ಮರೆಯಬಹುದು. ಸಾಹಿತ್ಯ ಅಧ್ಯಾಯನದಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾಯಿಸುವ ಶಕ್ತಿ ಇದೆ. ಒಬ್ಬ ವ್ಯಕ್ತಿಯು ಎಷ್ಟು ಪುಸ್ತಕ ಓದುತ್ತಾನೋ ಅಷ್ಟು ಅವನ ಜೀವನದಲ್ಲಿ ಹೊಸ ಹುರುಪು ಮತ್ತು ಉತ್ಸಾಹ ಬೆಳೆಯುತ್ತಾ ಹೋಗುತ್ತದೆ. ಹೆಚ್ಚಾಗಿ ಓದುವ ಹಾಗೂ ಬರೆಯುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಆಗ ನಿಮ್ಮಲ್ಲಿರುವ ಮಾನಸಿಕ ದುಗುಡಗಳು ದೂರವಾಗಿ ನಿಮ್ಮ ಮನಸ್ಸು ಶುದ್ದವಾಗುತ್ತದೆ ಎಂದರು.
ಚರಕ ಮಾಸಿಕ ಪತ್ರಿಕೆಯನ್ನು ಬಹಳ ಸಂತೋಷದಿಂದ ಲೋಕಾರ್ಪಣೆಗೊಳಿಸಿದ್ದೇನೆ. ಕಾರಣವೆನೆಂದರೆ, ಚರಕ ಎಂಬ ಹೆಸರು ನಮ್ಮ ಪರಂಪರೆಯಿಂದ ಬಂದಿದೆ. ಕ್ರಿ.ಪೂ. 3ನೆಯ ಶತಮಾನದಲ್ಲಿ ತಕ್ಷಶಿಲೆಯಲ್ಲಿದ್ದ ಚರಕ ಮುನಿಗಳು ಆಧುನಿಕ ವೈದ್ಯರಿಗೆ ಸರ್ವಥಾ ಮಾದರಿ. ಇಂತಹ ಮಹಾನ್ ಪುರುಷನ ಹೆಸರನ್ನು ಪತ್ರಿಕೆಗೆ ಇಟ್ಟಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಚರಕ ಪತ್ರಿಕೆಯ ಚಿನ್ಹೆಯನ್ನು ಸಹ ಅತ್ಯುತ್ತಮವಾಗಿ ರಚಿಸಲಾಗಿದೆ. ಮನುಷ್ಯನನ್ನು ಕಾಡುವ ರೋಗವನ್ನು ಹಾವನ್ನಾಗಿ ಬಿಂಬಿಸಲಾಗಿದೆ ಅದನ್ನು ಗುಣಪಡಿಸುವ ಔಷಧಿಯನ್ನಾಗಿ ಪುರಾತನ ವೈದ್ಯಕೀಯ ಶಾಸ್ತ್ರದ ಚಿನ್ಹೆಯಾದ ಧಂಡವನ್ನಾಗಿ ರಚಿಸಲಾಗಿದೆ. ಹೃದಯ ಬಡಿತದ ಗ್ರಾಫನ್ನೂ ಇಲ್ಲಿ ಬಳಸಿರುವದನ್ನು ಗಮನಿಸಿದರೆ ಈ ಸಂಸ್ಥೆ ಆರೋಗ್ಯದ ಕುರಿತಾಗಿ ಎಂತಹ ಕಾಳಜಿನ ಮನೋಭಾವನೆಯನ್ನು ಹೊಂದಿದೆ ಎನ್ನುವುದು ತಿಳಿಯುತ್ತದೆ. ಒಟ್ಟಾರೆ ಪತ್ರಿಕೆ ವೈದ್ಯಕೀಯ ಜಗತ್ತಿನ ಪರ್ಯಾಟನೆ ಹಾಗೂ ಪ್ರಸ್ತುತ ಆವಿಷ್ಕಾರಗಳ ಅನಾವರಣ ಎನ್ನುವಂತಿದೆ.
-ಡಾ.ನಾ. ಡಿಸೋಜಾ, ಹಿರಿಯ ಸಾಹಿತಿ
ಚರಕ ಮುನಿಗಳು ಪ್ರಿವೆನ್ಷನ್ ಈಸ್ ಬೆಟರ್‌ದೆನ್ ಕ್ಯೂರ್ ಎನ್ನುವುದನ್ನು ಶತಮಾನಗಳ ಹಿಂದೆಯೇ ಸಾಬೀತು ಮಾಡಿದ್ದರು. ಇಂದಿನ ಆಧುನಿಕ ಯುಗದಲ್ಲಿ ಇಂಜೀನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಇಂಗ್ಲಿಷ್‌ನ ವ್ಯಾಮೋಹಕ್ಕೆ ಬಿದ್ದು ಕನ್ನಡವನ್ನೆ ಮರೆತು ಬಿಡುತ್ತಿದ್ದಾರೆ. ಇವರೆಲ್ಲರ ನಡುವೆ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯವು ಕನ್ನಡದಲ್ಲಿ ತನ್ನ ಮಾಸಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಎಲ್ಲಾ ಇಂಗ್ಲಿಷ್ ವ್ಯಾಮೋಹಿ ಕಾಲೇಜುಗಳಿಗೆ ಮಾದರಿಯಾಗಿದ್ದಾರೆ ಎಂದು ಪ್ರಸಂಶೆ ವ್ಯಕ್ತಪಡಿಸಿದರು.
ಇಂದು ಪುಸ್ತಕ ಹಾಗೂ ಪತ್ರಿಕೆಯನ್ನು ಓದುವ ಹವ್ಯಾಸ ಜನರಿಂದ ಮರೆಯಾಗುತ್ತಿದೆ. ಕೇವಲ ಆಧುನಿಕತೆಗೆ ಮೊರೆ ಹೋಗಿ ತನ್ನ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಚರಕ ಪತ್ರಿಕೆಯಲ್ಲಿ ಆರೋಗ್ಯದ ಕುರಿತು ಅಂಕಣಗಳಿದ್ದು ಜನಸಾಮಾನ್ಯರು ಇದನ್ನು ಓದಿದರೆ ಅನುಕೂಲವಾಗುತ್ತದೆ ಎಂದರು.
ಕಾಲೇಜಿನ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಕಡಿದಾಳು ಶಾಮಣ್ಣ, ರಾಷ್ಟ್ರಕವಿ ಕುವೆಂಪು ಅವರು ಈಗ ಸುಬ್ಬಯ್ಯ ವೈದ್ಯಕೀಯ ಕಾಲೇಜು ಇರುವ ಪುರಲೆ ಪ್ರದೇಶದೊಂದಿಗೆ ಹೊಂದಿದ್ದ ಭಾವನಾತ್ಮಕ ಸಂಬಂಧವನ್ನು ತಿಳಿಸಿದರು.
ಇದೇ ವೇಳೆ, ಪರಿಸರ ಉಳಿಸುವ ಕುರಿತಾಗಿ ಮಾತನಾಡಿದ ಅವರು, ಮರಗಳನ್ನು ಬೆಳೆಸುವಲ್ಲಿ ಕುವೆಂಪು ಅವರ ಕಾಳಜಿ ಹೇಗಿತ್ತು ಎಂಬ ಕುರಿತಾಗಿ ಸ್ವಾನುಭವವನ್ನು ನೆನೆದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ, ಡಾ.ಲತಾ ನಾಗೇಂದ್ರ, ಡಾ.ಆರ್.ಪಿ. ಪೈ, ಡಾ.ವಿನಯಾ ಶ್ರೀನಿವಾಸ್, ವೈದ್ಯಕೀಯ ಅಧೀಕ್ಷಕ ಡಾ. ಬಿ. ಶ್ರೀನಿವಾಸ್, ಪ್ರಾಂಶುಪಾಲ ಡಾ.ಎಸ್.ಎಂ. ಕಟ್ಟಿ, ಡಾ.ಬಿ.ಎಸ್. ಸುರೇಶ್ ವನಮಾಲಾ ಸತೀಶ್, ನಾ. ಡಿಸೋಜಾ ಅವರ ಧರ್ಮಪತ್ನಿ ಫಿಲೋಮಿನಾ ಡಿಸೋಜಾ ಹಾಗೂ ಕಡಿದಾಳು ಶಾಮಣ್ಣ ಅವರ ಧರ್ಮಪತ್ನಿ ಶ್ರೀದೇವಿ ಶಾಮಣ್ಣ, ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ ಡಾ.ಸುಧೀಂದ್ರ ಇನ್ನಿತರರು ಉಪಸ್ಥಿತರಿದ್ದರು.
Discussion about this post