ಭದ್ರಾವತಿ: ನಗರದ ಪ್ರತಿಷ್ಟಿತ ವಿಐಎಸ್‌ಎಲ್ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ರಮಣದುರ್ಗ ಪ್ರದೇಶದಿಂದ 150 ಎಕರೆ ಅದಿರು ಗಣಿ ಪ್ರದೇಶವನ್ನು ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಕೇಂದ್ರ ಸರಕಾರಕ್ಕೆ ರವಾನಿಸಲಾಗಿದೆ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಿರು ಗಣಿ ದೊರೆತಿರುವ ಸಂತಸದಲ್ಲಿದ್ದರೂ ಕಾರ್ಖಾನೆಗೆ ಬಂಡವಾಳದ ಕೊರತೆ, ಬಂಡವಾಳ ಹಿಂತೆಗೆತದ ಭಯ ಕಾಡುತ್ತಿದೆ. ಕೇಂದ್ರ ಸಚಿವರು ಹಾಗೂ ಸಂಸದರು ಕಾರ್ಖಾನೆಗೆ ಈ ಹಿಂದೆ ಭೇಟಿ ನೀಡಿ ರಾಜ್ಯ ಸರಕಾರದಿಂದ ಗಣಿ ಮಂಜೂರಾತಿ ದೊರೆತಲ್ಲಿ ಸಾವಿರ ಬಂಡವಾಳ ಹೂಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಬಳ್ಳಾರಿ ಜಿಲ್ಲೆ ರಮಣದುರ್ಗ ಪ್ರದೇಶದಲ್ಲಿ 150 ಎಕರೆ ಗಣಿ ಪ್ರದೇಶವನ್ನು ಮೀಸಲಿರಿಸಿದ್ದು ಕೇಂದ್ರ ಸರಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದೆ.
ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಗಣಿ ಇಲಾಖೆಗೆ ಹಲವು ಸ್ಪಷ್ಟಿಕರಣ ಕೇಳಿದ್ದು ಎಲ್ಲ ಸ್ಪಷ್ಟಿÃಕರಣಗಳು ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ರವಾನೆಯಾಗಿರುವುದಾಗಿ ತಿಳಿಸಿದ ಅವರು ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಕೇಂದ್ರ ಸರಕಾರ ಮಂಜೂರಾತಿ ನೀಡಬೇಕೆಂದು ಒತ್ತಾಯಿಸಿದರು.
ಗಣಿ ಮಂಜೂರಾತಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಅನುಮೋದನೆ ನೀಡುವಂತೆ ಫೆ: 5 ರಂದು ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಕಾರ್ಮಿಕ ಮುಖಂಡರ ತಂಡವು ದೆಹಲಿಗೆ ನಿಯೋಗ ತೆರಳಿ ಕೇಂದ್ರ ಉಕ್ಕು ಸಚಿವ ಚೌದರಿ ಬಿರೇಂದ್ರ ಸಿಂಗ್ ಹಾಗೂ ಗಣಿ ಸಚಿವ ನರೇಂದ್ರ ಸಿಂಗ್ ತೋಮರ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚಿಸಲಾಗಿದೆ. ಅಲ್ಲದೆ ದಾಖಲೆಗಳನ್ನು ಪರಿಶೀಲಿಸಿರುವ ಸಚಿವರುಗಳು ಗಣಿ ಮಂಜೂರಾತಿಗೆ ಗಣಿ ಹಾಗೂ ಉಕ್ಕು ಸಚಿವಾಲಯ ಜಂಟಿಸಭೆ ನಡೆಸಿ ಅನುಮೋದನೆ ನೀಡುವುದಾಗಿ ಸ್ಪಷ್ಟ ಭರವಸೆ ನೀಡಿ ಕಾರ್ಖಾನೆಗೆ ಬಂಡವಾಳ ತೊಡಗಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರಕಾರವು ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸುವ ಸಂಪೂರ್ಣ ವಿಶ್ವಾಸ ನಮಗಿದೆ. ಕಾರ್ಖಾನೆ ಬಂಡವಾಳ ಹಿಂತೆಗೆತದ ಪಟ್ಟಿಯಿಂದ(ಡಿಸ್ ಇನ್ವೆಸ್ಟ್ಮೆಂಟ್) ಹೊರಬರಲಿದೆ. ಪ್ರಸ್ತುತ ದಿನಗಳಲ್ಲಿ ಸೈಲ್ 1696 ಕೋಟಿ ಲಾಭಾಂಶಗಳಿಸಿರುವ ಸೈಲ್ 6000 ಕೋಟಿ ಬಂಡವಾಳವನ್ನು ಕಾರ್ಖಾನೆಗೆ ತೊಡಗಿಸಿದಲ್ಲಿ ಖಂಡಿತವಾಗಿಯೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ಪಶ್ಚಿಮ ಬಂಗಾಳದ ಐಎಸ್‌ಪಿ ಕಾರ್ಖಾನೆ ಕಳೆದ 25 ವರ್ಷಗಳಿಂದ ಭಾರಿ ನಷ್ಟ ಅನುಭವಿಸುತ್ತಾ ಬಂದಿರುತ್ತದೆ. ಸೈಲ್ ಆಡಳಿತವು ಪ್ರಸ್ತುತ ಸಾಲಿನಲ್ಲಿ ಬಂಡವಾಳ ತೊಡಗಿಸುವ ಹಿನ್ನಲೆಯಲ್ಲಿ ಲಾಭಾಂಶದತ್ತ ಸಾಗಿದೆ. ಅದೇ ಮಾದರಿ ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸಿದ್ದಲ್ಲಿ ಲಾಭಾಂಶ ಗಳಿಸುವುದರಲ್ಲಿ ಅನುಮಾನವಿಲ್ಲ. ಕಾರ್ಖಾನೆಯಲ್ಲಿನ ಮೂರು ಘಟಕಗಳ ಉತ್ಪಾದನೆ ಆರಂಭಗೊಂಡಲ್ಲಿ ಮಾತ್ರ ಗುತ್ತಿಗೆ ಕಾರ್ಮಿಕರಿಗೆ 26 ದಿನಗಳ ಕೆಲಸ ನೀಡಲು ಸಾಧ್ಯವಾಗುತ್ತದೆ. ಖಾಸಗೀಕರಣ ಮಾಡುವ ಸಂದರ್ಭ ಎದುರಾದಲ್ಲಿ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಎಲ್ಲಾ ಪ್ರಕ್ರಿಯೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರಕ್ಕೆ ಕಾರಣಕರ್ತರಾದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸ್ಥಳೀಯ ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ.ಆನಂದ ಕುಮಾರ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್ ಹಾಗು ಸಹಕರಿಸಿದ ಎಲ್ಲರಿಗೂ ಕಾರ್ಮಿಕ ಸಂಘ ಅಭಿನಂದನೆ ವ್ಯಕ್ತಪಡಿಸುತ್ತದೆ ಎಂದರು.
ಬಿಜೆಪಿ ನಗರ ಹಾಗು ಗ್ರಾಮಾಂತರ ಘಟಕಗಳ ಅಧ್ಯಕ್ಷರುಗಳಾದ ಜಿ.ಆನಂದ ಕುಮಾರ್, ಮಂಗೋಟೆ ರುದ್ರೇಶ್, ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಬಸಂತಕುಮಾರ್, ಸಿ.ವಿ.ರಾಘವೇಂದ್ರ, ಅಮೃತ್‌ಕುಮಾರ್, ರಾಜೇಶ್, ಯೋಗೇಶ್, ರಾಜಣ್ಣ, ಮನೋಹರ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post