ನವದೆಹಲಿ: ಪಾಟಿಯಾರ್ ಸಮುದಾಯದ ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಮುಖವಾಡ ಕಳಚಿದ್ದು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಆತ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾನೆ.
ಈ ಕುರಿತಂತೆ ಕಾಂಗ್ರೆಸ್ ಮೂಲಗಳ ಮಾಹಿತಿಯ ಅನ್ವಯ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಮಾರ್ಚ್ 12ರಂದು ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾನೆ. ಅಲ್ಲದೇ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಾಮಾನಗರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾನೆ ಎಂದು ಹೇಳಲಾಗಿದೆ.
ಪಾಟಿಯಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಹೋರಾಟ ಆರಂಭಿಸಿ, ಅದರಿಂದಲೇ ಹೆಸರು ಸಂಪಾದಿಸಿದ ಹಾರ್ದಿಕ್ ಪಟೇಲ್ ವಿರುದ್ಧ ಮೊದಲಿನಿಂದಲೂ ಆರೋಪಗಳ ಸಾಲು ಸಾಲುಗಟ್ಟಿ ನಿಂತಿವೆ. ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಾನೆ ಎಂಬ ಅನುಮಾನಗಳು ಆರಂಭದಿಂದಲೂ ಇತ್ತು. ಈಗ ಈ ಊಹೆ ಸತ್ಯವಾಗುತ್ತಿದ್ದು, ಮಾರ್ಚ್ 12ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವುದು ನಿಶ್ಚಿತವಾಗಿದೆ.

















