ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದ ಪರಿಣಾಮ ಸಾವಿಗೀಡಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ ಏರಿಕೆಯಾಗುವ ಆತಂಕವಿದೆ ಎನ್ನಲಾಗಿದೆ.
ಕುಸಿತಗೊಂಡ ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟಿರುವ ಕುಟುಂಬಗಳ ಅವಲಂಬಿತರಿಗೆ ತಕ್ಷಣ ತಲಾ 2 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಗಾಯಾಳುಗಳಿಗೆ ಹಾಗೂ ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಒದಗಿಸಲು ಕೋರಿ ಈಗಾಗಲೇ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.
ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿರುವ ಮೂವರು ಜೀವಂತವಾಗಿರುವ ಮಾಹಿತಿ ರಕ್ಷಣಾ ತಂಡಗಳಿಗೆ ಸಿಕ್ಕಿದೆ. ದಿಲೀಪ್, ಸೋಮು ಮತ್ತು ಸಂಗೀತ ಎನ್ನುವರರು ಜೀವಂತವಾಗಿ ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಮೂವರು ಪಾರ್ಕಿಂಗ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಬದುಕುಳಿದ ಮೂವರ ಪೈಕಿ ದಿಲೀಪ್ ಎಂಬುವವರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಅವರಿಗೆ ಆಕ್ಸಿಜನ್ ಪೂರೈಕೆ ಮಾಡಿದೆ. ಅವರು ಇರುವ ಸ್ಥಳವನ್ನು ಪ್ರವೇಶಿಸಲು ಎನ್’ಡಿಆರ್’ಎಫ್ ಮತ್ತು ಎಸ್’ಡಿಆರ್ ಎಫ್ ಸಿಬ್ಬಂದಿ ಪ್ರಯತ್ನವನ್ನು ಮುಂದುವರೆಸಿದೆ.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ: ಮುಖ್ಯಮಂತ್ರಿ ಕುಮಾರಸ್ವಾಮಿ
ಇಂತಹ ಘೋರ ದುರಂತಕ್ಕೆ ಕಾರಣವಾದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಧಾರವಾಡ ಕಟ್ಟಡ ಕುಸಿತ ದುರಂತ ಸಂಬಂಧ ಮ್ಯಾಜಿಸ್ಟ್ರೇಟ್ ಹಂತದ ತನಿಖೆ ನಡೆಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಉನ್ನತ ತನಿಖೆ ನಡೆಸಲೂ ಸಹ ಸಿದ್ಧ. ಧಾರವಾಡದಲ್ಲಿ ಸಂತ್ರಸ್ತರ ಬಂಧುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. pic.twitter.com/TNTvgRbBcT
— H D Kumaraswamy (@hd_kumaraswamy) March 22, 2019
ಧಾರವಾಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಕಟ್ಟಡಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಕಟ್ಟಡ ಕುಸಿಯಲು ಕಾರಣವಾಗಿರಬಹುದು ಎಂದು ತಮಗೆ ಮಾಹಿತಿ ಬಂದಿದೆ. 5 ಹಂತದ ನಿರ್ಮಾಣ ಕಟ್ಟಡ ಕುಸಿದಿದೆ ಎಂದು ಮುಖ್ಯ ಕಾರ್ಯದರ್ಶಿಗಳು ನನಗೆ ಮಾಹಿತಿ ನೀಡಿದಾಗ ನಾನು ಆಶ್ಚರ್ಯಪಟ್ಟೆ. ಕೂಡಲೇ ಜಿಲ್ಲಾಡಳಿತವನ್ನು ಸಂಪರ್ಕಿಸಿ ತಕ್ಷಣ ತುರ್ತು ಪರಿಹಾರ ಕಾಮಗಾರಿ ನಡೆಸುವಂತೆ ಸೂಚಿಸಿದೆನು. ಜಿಲ್ಲಾಡಳಿತ ಸರಿಯಾದ ಕೆಲಸ ಮಾಡುತ್ತಿದೆ ಎಂದರು.
ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪರಿಹಾರನವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಲಿಲ್ಲ.
Discussion about this post