ಶಿವಮೊಗ್ಗ ಲೋಕಸಭಾ ಕ್ಷೇತ್ರ ಅತ್ಯಂತ ಆಯಕಟ್ಟಿನ ರಾಜಕಾರಣ ಹೊರಳಾಡುತ್ತಿರುವ ಅಂಗಳ. ಇಲ್ಲಿ ಬಂಗಾರಪ್ಪ, ಯಡ್ಯೂರಪ್ಪ ಅವರ ಪ್ರಭಾವವಿದೆ. ಅಲ್ಲದೇ ಬಹಳಸಲ ಕಾಂಗ್ರೆಸ್’ಗೆ ಮಣೆಹಾಕಿದ ಸಾಂಪ್ರದಾಯಿಕ ಮತದಾರರೂ ಇದ್ದಾರೆ.
ಈಗಾಗಲೇ ಸಂಸದರಾಗಿ ಜನಮನ ಸೆಳೆಯುವಲ್ಲಿ ಯಶಸ್ವಿಯಾದ ಬಿ.ವೈ. ರಾಘವೇಂದ್ರ, ಶಾಸಕರಾಗಿ ಅನುಭವವಿರುವ ಮಧು ಬಂಗಾರಪ್ಪ ಇವರ ನೇರ ಪೈಪೋಟಿ, ಕಳೆದ ಉಪಚುನಾವಣೆಯದ್ದೇ ದೃಶ್ಯ ಮತ್ತೆ ಎದುರಾಗಿದೆ.
ತುಸು ಕಾಂಗ್ರೆಸ್ ನಸಯಕರು ಅಸಮಾಧಾನ ಪಟ್ಟುಕೊಂಡಿದ್ದರೂ ಸಹಜವೇ. ಏಕೆಂದರೆ ಶಿವಮೊಗ್ಗ ಯಾವತ್ತೂ ಬಿಜೆಪಿ ಮತ್ತು ಕಾಂಗ್ರೆಸ್’ಗೇ ಆಡುಂಬೊಲ. ಆದರೆ ಬಹಳ ಸೂಕ್ಷ್ಮವಾಗಿ ಅವಲೋಕಿಸಿದಾಗ ಜೆಡಿಎಸ್ ತನ್ನ ಬೇರನ್ನು ಇಲ್ಲಿ ಇಳಿಬಿಡುವ ಸನ್ನಾಹ ಢಾಳಾಗಿದೆ. ಆದರೆ ಜಿಲ್ಲೆಯ ಇತಿಹಾಸದಲ್ಲಿ ಸಾಂಪ್ರದಾಯಿಕವಾಗಿ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಬಿಟ್ಟುಕೊಡಬೇಕಲ್ಲ ಎಂಬ ಒಳನೋವಿನಲ್ಲಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಈ ತುಡಿತ ರಾಜ್ಯ ನಾಯಕರಿಗೆ ಮುಟ್ಟಿಲ್ಲ. ಆದರೂ ಶಿವಮೊಗ್ಗ ಕ್ಷೇತ್ರವನ್ನು ಬಿಜೆಪಿಗೆ ಸುಲಭದ ತುತ್ತಾಗಿ ಹಿಂದಿನ ಎರಡೂ ಲೋಕಸಭಾ ಚುನಾವಣೆಯಲ್ಲಿ ಮಾಡಲಾಗಿದೆ.
ಕೇವಲ ಕಳೆದ ಉಪಚುನಾವಣೆಯಲ್ಲಿ ಅಲ್ಪ ಬಹುಮತದಿಂದ ಬಿಜೆಪಿ ಜಯ ಪಡೆಯಿತು. ಇದು ಬಿಜೆಪಿಗೆ ಅಪಾಯದ ಗಂಟೆ. ಆದರೆ ಜೆಡಿಎಸ್’ಗೆ ಇದು ತೃಪ್ತಿಕರ ಸಾಧನೆ. ಈ ಎರಡೂ ಪಕ್ಷಗಳಿಗೆ ಪ್ರಸ್ತುತ ಚುನಾವಣೆ ಸರಳ ಗಣಿತವಾಗಿಲ್ಲ. ಏಕೆಂದರೆ ಮೈತ್ರಿ ಸರ್ಕಾರ ತನ್ನ ಆಡಳಿತ ಯಂತ್ರವನ್ನು ಸಮರ್ಥವಾಗಿ ಬಳಸಿ ಫಲಿತಾಂಶವನ್ನು ತನ್ನಪರ ಮಾಡಿಕೊಳ್ಳಲೂ ಸಾಧ್ಯವಿದೆ.
ಕಳೆದ ಉಪಚುನಾವಣೆಯಲ್ಲಿ ಶಿವಮೊಗ್ಗ ಬಿಟ್ಟು ಉಳಿದ ಲೋಕಸಭೆ ಮತ್ತು ವಿಧಾನಸಭೆಯ ಸ್ಥಾನಗಳನ್ನು ಈ ಮೈತ್ರಿ ಬಾಚಿಕೊಂಡಿದ್ದು ಒಂದು ಬಿಜೆಪಿಗೆ ನಡುಕ ತರುವ ಉದಾಹರಣೆ.
ಶಿವಮೊಗ್ಗ ಕ್ಷೇತ್ರದಲ್ಲಿ ಸುಮಾರು ಎರಡರಿಂದ ಮೂರುಲಕ್ಷ ಯುವಜನ ಮತದಾರರಿದ್ದಾರೆ ಎಂಬುದು ಬಲ್ಲವರ ಲೆಕ್ಕ. ಅದರಂತೆ ಸದ್ಯ ಮೋದಿಯವರು ಯುವಜನರನ್ನು ಒಲಿಸಿಕೊಳ್ಳುವಲ್ಲಿ ಈಗಾಗಲೇ ಸಫಲತೆ ಸಾಧಿಸಿದ್ದಾರೆ. ಈ ದೃಷ್ಟಿಯಿಂದ ಬಿಜೆಪಿ ನಿಟ್ಟುಸಿರು ಬಿಡಬಹುದು.
ಇನ್ನೂ ಒಂದು ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯಿದೆ. ಅದೆಂದರೆ, ಬಿಜೆಪಿ ತನ್ನ ಮುಖಘೋಷಣೆಯನ್ನು ಬದಲಿಸಿಕೊಂಡಿರುವುದು. ಈ ಬದಲಾವಣೆ ಬಹಳ ನಾಜೂಕಿನದಾಗಿದೆ. ಬಿಜೆಪಿ ಹಲವು ತಪ್ಪು ನಡೆಗಳಿಂದ ಕೆಲವು ರಾಜ್ಯದ ವಿಧಾನಸಭೆಯ ಚುನಾವಣೆಗಳಲ್ಲಿ ಅಧಿಕಾರ ಕಳೆದುಕೊಂಡಿತು. ಈ ಹಿನ್ನೆಲೆಯಲ್ಲಿ ಅಬ್ ಕಿ ಬಾರ್ ಬಿಜೆಪಿ ಸರ್ಕಾರ್ ಬದಲಿಗೆ ಚಾಣಾಕ್ಷವಾಗಿ ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂದು ನುಗ್ಗಿದೆ. ಈಗ ಕೇವಲ ಮೋದಿಯನ್ನೇ ನೆಚ್ಚಿಕೊಂಡಿರುವ ಬಿಜೆಪಿ ನಿರಾಶೆಗೊಳ್ಳದು ಎಂಬುದು ಮುತ್ಸದ್ದಿಗಳ ಅಂಬೋಣ.
ರಾಷ್ಟ್ರೀಯ ಮಟ್ಟದಲ್ಲಿ ರಫೇಲ್, ಕಪ್ಪುಹಣ, ನೋಟುಬಂದಿ… ಮುಂತಾದ ಇಷ್ಯೂಗಳನ್ನು ಹಿಂದಿನ ಬೊಫೋರ್ಸ್ ಹಗರಣದಂತೆ ಜನತೆಯ ಮುಖಕ್ಕೆ ರಾಚಿ ಹೇಳುವ ನಾಯಕರ ಕೊರತೆ ಕಾಂಗ್ರೆಸ್’ನಲ್ಲಿದೆ. ಅದರಲ್ಲೂ ಸತ್ಯ ಮಿಥ್ಯ ಎರಡೂ ಸ್ಪಷ್ಟವಾಗಿಲ್ಲ.
ಜನತೆ ಮೋದಿಯ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನು ಮಾಧ್ಯಮಗಳು ಬಿಂಬಿಸಿವೆ. ಆದರೂ ರಾಜಕೀಯ ಟೆನ್ಷನ್ ಮೌಂಟ್ ಆಗುವಲ್ಲಿ ಮುಂದೆ ಏನಾಗುವುದೋ ಗೊತ್ತಿಲ್ಲ. ಮತದಾರ ಬಹಳ ಚಾಣಾಕ್ಷ.
ಹೀಗಾಗಿ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗು ಮಾಡುವಂತಹ ಫಲಿತಾಂಶ ಹೊರಹೊಮ್ಮಿದರೂ ಅಚ್ಚರಿಯಿಲ್ಲ.
Please Vote…
Our Right…Our Choice…Our Voice
ಲೇಖನ: ಡಾ.ಸುಧೀಂದ್ರ
Discussion about this post