ಭದ್ರಾವತಿ: ನ್ಯೂಟೌನ್ ಸರ್.ಎಂ. ವಿಶ್ವೇಶ್ವರಯ್ಯ ಸರಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಲವು ವೈಶಿಷ್ಟ್ಯತೆಗಳಿಗೆ ಕಾರಣವಾಯಿತು.
ಒಂದೆಡೆ ಜೋಡೆತ್ತಿನ ಸದ್ದು, ಮತ್ತೊಂದೆಡೆ ಜಾನಪದ ನೃತ್ಯ, ಇನ್ನೊಂದೆಡೆ ಬಗೆ ಬಗೆಯ ತಿಂಡಿ ತಿನಿಸುಗಳ ಮಾರಾಟ. ಅಕ್ಷರ ಕಲಿಕೆ ನೆಲದಲ್ಲಿ ಹಳ್ಳಿ ಸೊಗಡು ನೋಡುಗರನ್ನು ವಿಸ್ಮಯಗೊಳಿಸಿತು.
ಬಹುತೇಕ ಕಡೆ ಮಹಿಳಾ ದಿನಾಚರಣೆಯನ್ನು ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸುವುದನ್ನು ಕಾಣುತ್ತೇವೆ. ಆದರೆ ಕಾಲೇಜಿನ ಉಪನ್ಯಾಸಕಿಯರು, ವಿದ್ಯಾರ್ಥಿನಿಯರು ಹೊಸತನದಲ್ಲಿ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಬೆರಗುಗೊಳಿಸಿದ್ದಾರೆ.
ಕಾಲೇಜಿನ ಎಲ್ಲಾ ಪುರುಷ ಮತ್ತು ಮಹಿಳಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾರತೀಯ ಸಾಂಪ್ರಾದಾಯಿಕ ವಿಭಿನ್ನ ಉಡುಗೆಗಳೊಂದಿಗೆ ಕಾಣಿಸಿಕೊಂಡಿದ್ದು ವಿಶೇಷ ಎನಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿನಿಯರು ಜಾನಪದ ನೃತ್ಯದ ಮೂಲಕ ಬೆರಗುಗೊಳಿಸಿ ಜಾನಪದ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರೇ ತಯಾರಿಸಿದ ಬಗೆ ಬಗೆ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದರು. ವಿದ್ಯಾರ್ಥಿ ಸಂತೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರದ್ದೆ ಜನಜಂಗುಳಿ. ವಿದ್ಯಾರ್ಥಿಗಳಿಂದ ತಯಾರಿಸಿದ ಕರಕುಶಲ ವಸ್ತುಗಳು ಪ್ರದರ್ಶನ ಸಹ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ತರೀಕೆರೆ ಸರಕಾರಿ ಕಾಲೇಜಿನ ಉಪನ್ಯಾಸಕಿ ಡಾ. ಸಬಿತಾ ಬನ್ನಾಡಿ, ಡಾ. ವಿದ್ಯಾ ಮರಿಯಾ ಜೋಸೆಫ್, ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಉಮಾಶಂಕರ್, ಕಾರ್ಯಕ್ರಮ ಸಂಚಾಲಕಿ ಪ್ರೊ. ಸುಮಾ ಕಾರ್ಯಕ್ರಮ ಉದ್ಘಾಟಿಸಿದರು.
ಉಪನ್ಯಾಸಕರಾದ ಡಾ. ಮಂಜುನಾಥ್, ಡಾ. ಧನಂಜಯ, ಡಾ. ಸಕ್ರ್ಯಾನಾಯ್ಕ, ಪ್ರೊ. ಎಂ.ಎನ್. ಚಂದ್ರಪ್ಪ, ಡಾ. ರಂಗನಾಥ್, ಡಾ. ಶಿವಲಿಂಗೇಗೌಡ, ಡಾ. ಎಲ್. ಪ್ರಕಾಶ್, ಡಾ. ಸುಧಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಕರಿಸಿದ್ದಪ್ಪ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಜಯ್ ಮತ್ತಿತರರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post