ಕಾಂಚಿ: ಕಾಂಚೀ ಕಾಮಕೋಟಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಗೋಕರ್ಣ ಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಶ್ರೀಗಳು ಕಾಂಚೀಮಠದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಕಾಂಚೀ ಶಂಕರಾಚಾರ್ಯರ ವಿಶೇಷ ಆಮಂತ್ರಣದ ಮೇರೆಗೆ ಕಾಂಚೀಪುರಂನಲ್ಲಿರುವ ಮಠಕ್ಕೆ ಭೇಟಿ ನೀಡಿದ ರಾಘವೇಶ್ವರ ಶ್ರೀಗಳನ್ನು ಕಾಂಚೀ ಮಠದಿಂದ ವಿಶೇಷವಾಗಿ ಗೌರವಿಸಿ ಸ್ವಾಗತಿಸಿದರು. ಆನಂತರ ಪೂಜ್ಯ ಶ್ರೀಗಳು ಕಾಂಚೀ ಮೀನಾಕ್ಷಿ ದೇವಿಗೆ ವಿಶೇಷ ಫಲಪಂಚಾಂಮೃತ ಅಭಿಷೇಕವನ್ನು ನೆರವೇರಿಸಿ, ಕಂಚಿಯ ಬ್ರಹ್ಮೈಕ್ಯ ಪರಮಾಚಾರ್ಯರು ಹಾಗೂ ಬ್ರಹ್ಮೈಕ್ಯ ಜಯೇಂದ್ರ ಸರಸ್ವತಿಗಳ ವೃಂದಾವನವನ್ನು ಸಂದರ್ಶಿಸಿದರು.
ಆನಂತರ ಕಾಂಚೀ ಹಾಗೂ ಶ್ರೀರಾಮಚಂದ್ರಾಪುರ ಮಠ ಉಭಯ ಶಂಕರಪೀಠಗಳ ಸಮಾಗಮ ನಡೆಯಿತು. ಈ ಸಂದರ್ಭದಲ್ಲಿ ಧರ್ಮ ಸಂರಕ್ಷಣೆ ಹಾಗೂ ಅನೇಕ ಸಮಕಾಲೀನ ವಿದ್ಯಮಾನಗಳ ಕುರಿತಾಗಿ ಗಂಟೆಗೂ ಅಧಿಕ ಕಾಲ ಪರಸ್ಪರ ಮಹತ್ತರ ವಿಚಾರ ವಿನಿಮಯ ನಡೆದವು.
ಭೇಟಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕಾಂಚೀ ಶಂಕರಾಚಾರ್ಯರು, ನಮ್ಮ ಈ ಭೇಟಿ ಧರ್ಮ-ಧರ್ಮಗಳ ಸಮ್ಮಿಲನದಂತಾಗಿದ್ದು ಧರ್ಮ ಬೆಳವಣಿಗೆಗೆ ಕಾರಣವಾಗುವಂತಾಗಿದೆ. ನಮ್ಮ ಮಠಗಳ ನಡುವೆ ಪರಂಪರೆಗತವಾಗಿ ಮೊದಲಿಂದಲೂ ಇದ್ದ ವಿಶ್ವಾಸ – ಒಡನಾಟಗಳು ಮತ್ತಷ್ಟು ವೃದ್ಢಿಸುವಂತಾಗಿದೆ. ನಿಮ್ಮ ಎಲ್ಲಾ ಕಾರ್ಯಗಳ ಜೊತೆಗೆ ಕಾಂಚೀ ಮಠದ ಸಂಪೂರ್ಣ ಸಹಕಾರ ಸದಾ ಇರಲಿದೆ ಎಂದರು.
ಈ ಕುರಿತಾಗಿ ರಾಘವೇಶ್ವರ ಭಾರತೀ ಸ್ವಾಮಿಗಳು ಟ್ವೀಟ್ ಮಾಡಿ ಹರ್ಷವ್ಯಕ್ತಪಡಿಸಿದ್ದು ‘ಕಾಂಚೀ-ಕಾಮಕೋಟಿಯ ಶಂಕರಾಚಾರ್ಯರ ವಿಶೇಷ ನಿಮಂತ್ರಣದ ಮೇರೆಗೆ ಇಂದು ಕಾಂಚೀ ಮಠಕ್ಕೆ ತೆರಳಿದಾಗ ಘಟಿಸಿತು ಉಭಯ ಪೀಠಗಳ ಅದ್ವೈತದ ಪುನರವತರಣ!
ಬೆಳಕಿಗೆ ಬೆಳಕು ಸೇರಿದರೆ ಕೊಳಕಿಗೆ ಇನ್ನು ಸ್ಥಳವೆಲ್ಲಿ!?’ ಎಂದಿದ್ದಾರೆ.
ಕಾಂಚೀ-ಕಾಮಕೋಟಿಯ ಶಂಕರಾಚಾರ್ಯರ ವಿಶೇಷ ನಿಮಂತ್ರಣದ ಮೇರೆಗೆ ಇಂದು ಕಾಂಚೀ ಮಠಕ್ಕೆ ತೆರಳಿದಾಗ ಘಟಿಸಿತು ಉಭಯ ಪೀಠಗಳ ಅದ್ವೈತದ ಪುನರವತರಣ!
ಬೆಳಕಿಗೆ ಬೆಳಕು ಸೇರಿದರೆ ಕೊಳಕಿಗೆ ಇನ್ನು ಸ್ಥಳವೆಲ್ಲಿ!? pic.twitter.com/TlFKKoXoGX
— RaghaveshwaraBharati (@SriSamsthana) March 25, 2019
ಈ ಸಂದರ್ಭದಲ್ಲಿ ನಿತ್ಯಾಗ್ನಿಹೋತ್ರಿ ವೇ.ಬ್ರ. ಜಂಬೂನಾಥ ಘನಪಾಠಿಗಳು, ವೇ.ಬ್ರ ಪಳ್ಳತ್ತಡ್ಕ ಶಂಕರನಾರಾಯಣ ಭಟ್ ಘನಪಾಠಿಗಳು, ವೇ.ಬ್ರ ಮಹಾಬಲೇಶ್ವರ ಘನಪಾಠಿಗಳು, ವೇ.ಬ್ರ ಗಜಾನನ ಘನಪಾಠಿಗಳು , ವೇ.ಬ್ರ ಮಂಜುನಾಥ ಘನಪಾಠಿಗಳು ಹಾಗೂ ಕಾಮಾಕ್ಷಿ ದೇವಾಲಯದ ಪ್ರಧಾನ ಅರ್ಚಕರಾದ ವೇ.ಬ್ರ ವಿಶ್ವನಾಥ ಶಾಸ್ತ್ರಿಗಳು ಉಪಸ್ಥಿತರಿದ್ದು ಪೂಜ್ಯ ಶಂಕರಾಚಾರ್ಯ ರಾಘವೇಶ್ವರಭಾರತೀ ಸ್ವಾಮಿಗಳಿಂದ ಆಶೀರ್ವಾದ ಪಡೆದರು.
Discussion about this post