ಭದ್ರಾವತಿ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಐಎಸ್‌ಎಲ್ ಕಾರ್ಖಾನೆಗೆ 150 ಎಕರೆ ಅದಿರು ಗಣಿ ಪ್ರದೇಶವನ್ನು ಮಂಜೂರಾತಿ ನೀಡಿರುವ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪಣ ತೊಡಲಾಗಿದೆ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಾರ್ಖಾನೆಗೆ ಖಾಯಂ ಕಾರ್ಯಪಾಲಕ ನಿರ್ದೇಶಕರ ನೇಮಕ, ಅನೇಕ ಘಟಕಗಳನ್ನು ಪುನರಾರಂಭಗೊಳಿಸಲು ಶ್ರಮಿಸಲಾಗಿದೆ. ಉತ್ಪಾದನೆಗೆ 30 ಸಾವಿರ ಟನ್ ಕಚ್ಚಾ ವಸ್ತುಗಳು ಹಾಗೂ 600 ಟನ್ ಇಂಗಾಟ್ ಪೂರೈಸಲು ಕ್ರಮ, ಬ್ಲಾಸ್ಟ್ ಫರ್ನೇಸ್ ನವೀಕರಣಕ್ಕೆ ಒಪ್ಪಿಗೆ, ನಿವೃತ್ತ ಕಾರ್ಮಿಕರು ವಾಸವಿರುವ ಸಾವಿರಾರು ಮನೆಗಳ ಪರವಾನಿಗೆ ನವೀಕರಣ, ಗುತ್ತಿಗೆ ಕಾರ್ಮಿಕರು ಬೀದಿ ಪಾಲಾಗದಂತೆ ಪೂರ್ಣ ಪ್ರಮಾಣದಲ್ಲಿ ಕೆಲಸ, ಕಾರ್ಖಾನೆಗೆ ಬಂಡವಾಳ ಹೂಡಿಕೆಗೆ ಒತ್ತಾಯ, ಖಾಸಗೀಕರಣ ಪಟ್ಟಿಯಿಂದ ಹೊರತರುವ ಪ್ರಾಮಾಣಿಕ ಪ್ರಯತ್ನ ಮುಂತಾದವುಗಳನ್ನು ಮಾಡಲಾದ ತೃಪ್ತಿ ನಮಗಿದೆ ಎಂದರು.
ಪ್ರಧಾನಿ ಮೋದಿಯವರು ನೀಡಿದ ಅನೇಕ ಯೋಜನೆಗಳಿಂದ ಸುಮಾರು 20 ಲಕ್ಷ ಕುಟುಂಬಗಳ ಫಲಾನುಭಗಳಿಗೆ ಅನುಕೂಲಕರವಾಗಿದೆ. ಈ ಯೋಜನೆಗಳನ್ನು ತಲುಪಿಸುವಲ್ಲಿ ಪಕ್ಷದ ಶಾಸಕರುಗಳ ಸಾಧನೆಯೆ ನಮಗೆ ಪ್ರಸ್ತುತ ನಡೆಯುವ ಚುನಾವಣೆಯಲ್ಲಿ ಆಶೀರ್ವಾದವಾಗಿ ಪರಿವರ್ತನೆಯಾಗಿದೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಬೂತ್ ಮಟ್ಟದಲ್ಲಿ ಕೇಂದ್ರ ಸಾಧನೆಗಳನ್ನು ಜನರಿಗೆ ಅರಿವು ಮೂಡಿಸಿರುವುದು ವರದಾನವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 75 ಸಾವಿರ ಶ್ರಮಿಕ ಕಾರ್ಮಿಕರು ಹಾಗೂ ಅವಲಂಭಿತರು ಇಎಸ್‌ಐ ವ್ಯಾಪ್ತಿಗೆ ಒಳಪಡಲಿದ್ದಾರೆ. ಈ ಶ್ರಮಿಕರಿಗಾಗಿ ನೂರು ಹಾಸಿಗೆಯ ಇಎಸ್‌ಐ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಸಾಗರ ಕ್ಷೇತ್ರದಲ್ಲಿ ಅನೇಕ ಶಾಸಕರು, ಮಂತ್ರಿಗಳು ಸಿಗಂಧೂರು ಶ್ರೀ ಚೌಡೇಶ್ವರಿ ದೇವಾಲಯ ಮಾತ್ರವಲ್ಲದೇ ದಕ್ಷಿಣ ಕನ್ನಡ ಹಾಗೂ ಮಲೆನಾಡು ಭಾಗಗಳ ಸಂಪರ್ಕ ಮಾರ್ಗಕ್ಕೆ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡದೆ ಕೇವಲ ಕಾಲಹರಣ ಮಾಡಿದ್ದಾರೆ. ಶರಾವತಿ ಕಣಿವೆ ಪ್ರದೇಶದ ಜನರು ನಾಡಿಗೆ ವಿದ್ಯುತ್ ನೀಡಿದ್ದರೂ, ಆ ಜನಗಳು ಕತ್ತಲಲ್ಲಿ ಬದುಕು ನಡೆಸುವಂತಾಗಿದೆ. ಅವರಿಗೆ ಬೆಳಕಾಗಲು 476 ಕೋಟಿ ರೂ. ವೆಚ್ಚದಲ್ಲಿ ಸಿಗಂಧೂರು ಸೇತುವೆ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ಕ್ರಮ ಜರುಗಿಸಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಲಿಂಗನಮಕ್ಕಿ ಹಿನ್ನೀರಿನ ವ್ಯಾಪ್ತಿಯಲ್ಲಿ ಮನರಂಜನೆಗಾಗಿ ಕ್ರೂಸ್‌ಗಳನ್ನು ನಿರ್ಮಿಸುವ, ಜೋಗ್ ಪಾಲ್ಸ್ ಅಭಿವೃದ್ದಿ ಪಡಿಸಿ ವರ್ಷವಿಡಿ ಜಲಧಾರೆ ಹರಿಯ ಬಿಡುವ ಯೋಜನೆ ರೂಪಿಸಲು ಮುಂದಾಗಿ ಪ್ರವಾಸಿಗರಿಗೆ ಅನುಕೂಲ ಸಿಂಧು ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಾಗರ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಐಟಿ ಪಾರ್ಕ್ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದರು.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ತಾವರೆಕೊಪ್ಪದ ಸಿಂಹಧಾಮದ ಅಭಿವೃದ್ದಿಗೆ 40 ಕೋಟಿ ರೂ. ಪ್ರಾಣಿ ಪಕ್ಷಿಗಳನ್ನು ಹೆಚ್ಚಾಗಿ ತರುವುದಕ್ಕೆ ಕೇಂದ್ರದ ಮಂಜೂರಾತಿ ಪಡೆಯಲಾಗಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ಅಸ್ತು, ಯುವ ಶಕ್ತಿಗೆ ಹೆಚ್ಚು ಪ್ರೋತ್ಸಾಹ ನೀಡಲು ಹಾಗೂ ನಿರುದ್ಯೋಗಿತನ ಹೋಗಲಾಡಿಸಲು ಶಾಹಿ ಗಾರ್ಮೆಂಟ್ಸ್ ಮತ್ತಿತರೆ ಕೈಗಾರಿಕೆಗಳನ್ನು ಸ್ಥಾಪಿಸಿ ಜಿಲ್ಲೆಯ ಸಹಸ್ರಾರು ನಿರುದ್ಯೋಗಿ ಯುವಕ, ಯುವತಿಯರಿಗೆ ಆಸರೆಯಾಗುವಂತಹ ಕೆಲಸ ಮಾಡಲಾಗಿದೆ. ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಜನ ಸಾಮಾನ್ಯರು ಕೂಡ ಕನಿಷ್ಟ ದರದಲ್ಲಿ ಶಿವಮೊಗ್ಗದಿಂದ ದೇಶದ ವಿವಿಧ ಸ್ಥಳಗಳಿಗೆ ವಿಮಾನ ಪ್ರಯಾಣ ಮಾಡುವ ಯೋಜನೆ ಜಾರಿಗೆ ತರಲಾಗುವುದು. ಮುಖ್ಯವಾಗಿ ರೈತರು, ಕೂಲಿ ಕಾರ್ಮಿಕರು ಮಳೆಯರಿಗೆ ಅನುಕೂಲವಾಗುವಂತಹ ರಾಜ್ಯ ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ, ಉಚಿತ ಸೈಕಲ್ ತರಣೆ, ದೇಶದಲ್ಲಿ ಪ್ರಥಮ ಪ್ರತ್ಯೇಕ ಕೃಷಿ ಬಜೆಟ್, ರೈತರ ಸಾಲಮನ್ನಾ, ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ, ನೀರಾವರಿ ಯೋಜನೆಗಳ ಅನುಷ್ಟಾನ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧ, ಯಶಸ್ವಿನಿ, ಮಡಿಲು ಯೋಜನೆ, ನಗರೋತ್ಥೋನಾ ಹಾಗೂ ಗ್ರಾಮ ವಿಕಾಸ ಯೋಜನೆಗಳು, ವಿವಿಧ ಸಮುದಾಯಗಳಿಗೆ ಪ್ರತ್ಯೇಕ ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಪಕ್ಷದ್ದಾಗಿದೆ. ನಗರ ಅಭಿವೃದ್ದಿಗೆ ಕೇಂದ್ರದಿಂದ ಅಮೃತ್ ಯೋಜನೆಯಡಿ 150 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಸುಂದರ ನಗರಕ್ಕೆ ಒತ್ತು ನೀಡಲಾಗಿದೆ ಎಂದರು.
ಹೊಸ ರೈಲುಗಳ ಪ್ರಾರಂಭ:
ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸಿಗರು ರೈಲು ಇಲ್ಲದೆ ಹಳಿ ಬಿಡುತ್ತಿದ್ದರು. ಆದರೆ ನಾವು ಪ್ರಯಾಣಿಕರಿಗೆ ಸ್ಪಂಧಿಸಲು ಹೊಸದಾಗಿ ಹಳೆ ಮೇಲೆ ನಿಜವಾದ ಜನಶತಾಬ್ದಿ ರೈಲನ್ನು ಬಿಟ್ಟು ಜನತೆಗೆ ಅನುಕೂಲ ಕಲ್ಪಿಸಲು ನಿಲುಗಡೆಗೂ ಅವಕಾಶ ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಚೆನೈ ಹಾಗೂ ಶಿವಮೊಗ್ಗ-ಮಂಗಳೂರು ಮಾರ್ಗಗಳಿಗೆ ಹೊಸ ರೈಲುಗಳನ್ನು ಮಂಜೂರು ಮಾಡಿಸಿದ್ದೇವೆ. ರೈಲು ನಿಲುಗಡೆಗಾಗಿ ಶಿವಮೊಗ್ಗದ ಕೋಟೆ ಗಂಗೂರು ಬಳಿ ಸ್ಯಾಟ್‌ಲೈಟ್ ರೈಲು ಜಂಕ್ಷನ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ನಗರದ ಕಡದಕಟ್ಟೆ ಬಳಿ ರೈಲ್ವೆ ಗೇಟಿಗೆ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ 4 ರಿಂದ 8 ಲೈನುಗಳ ರಸ್ತೆ ನಿರ್ಮಾಣಕ್ಕೆ 4,800 ಕೋಟಿ ರೂ. ಮಂಜೂರಾತಿ ಪಡೆಯಲಾಗಿ ಪ್ರತಿನಿತ್ಯ 27 ಕಿಮೀ ರಸ್ತೆ ಅಭಿವೃದ್ದಿ ಮಾಡುವ ತ್ವರಿತಗತಿಯ ಪ್ರಧಾನಿ ಮೋದಿ ಸರಕಾರದ ವಿಶೇಷತೆಗಳಲ್ಲಿ ಒಂದಾಗಿದೆ ಎಂದರು.
ಎಂಪಿಎಂ ಕಾರ್ಖಾನೆಗೆ ಮೊಳೆ ಹೊಡೆದ ಸಿದ್ದರಾಮಯ್ಯ:
ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಂಪಿಎಂ ಕಾರ್ಖಾನೆಗೆ ಅಂತಿಮ ಮೊಳೆ ಹೊಡೆದು ಹಾಳು ಗೆಡವಿದ್ದಾರೆ. ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ. ಸಂಪೂರ್ಣವಾಗಿ ಮುಚ್ಚಿದ ಕಾರ್ಖಾನೆಯ ಯಂತ್ರಗಳು ತುಕ್ಕು ಹಿಡಿಯುತ್ತಿದೆ. ಕಾರ್ಮಿಕರನ್ನು ಹೊರಹಾಕಿ ಅವರಿಗೆ ನ್ಯಾಯ ಸಮ್ಮತವಾಗಿ ನೀಡಬೇಕಾದ ಹಣವನ್ನು ನೀಡದೆ ಸತಾವಣೆ ಮಾಡುತ್ತಿದೆ ಎಂದು ಆರೋಪಿಸಿದ ಅಭ್ಯರ್ಥಿ ರಾಘವೇಂದ್ರ ವಿಐಎಸ್‌ಎಲ್ ಕಾರ್ಖಾನೆಯ ರ್ಕಾುಕ ಮುಖಂಡರ ಹಾಗೂ ಪಕ್ಷದ ಮುಖಂಡರ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಮಗ್ರ ಅಭಿವೃದ್ದಿಗೆ ಭರವಸೆ ಪಡೆಯಲಾಗಿದೆ ಎಂದು ಹೇಳಿ ಎಂಪಿಎಂ ಕಾರ್ಖಾನೆಯ ಏಳಿಗೆಗೂ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ದತ್ತಾತ್ರಿ, ಪ್ರವೀಣ್ ಪಾಟೀಲ್, ಕದಿರೇಶ್, ಎಸ್.ಎನ್. ಬಾಲಕೃಷ್ಣ, ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಧರ್ಮ ಪ್ರಸಾದ್, ಕೆ.ಮಂಜುನಾಥ್, ಮಂಜಪ್ಪ, ರಾಮಣ್ಣ, ಸುನಿತಾ, ಎನ್. ವಿಶ್ವನಾಥರಾವ್, ಸುರೇಶಪ್ಪ, ಎಂ. ಮಂಜುನಾಥ್, ಕೂಡ್ಲಿಗೆರೆ ಹಾಲೇಶ್, ರಾಮಲಿಂಗಯ್ಯ, ಕರೀಗೌಡ ಮುಂತಾದವರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post