ಶಿವಮೊಗ್ಗ: ಮಾಜಿ ಡಿಸಿಎಂ, ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಜೀವ ಬೆದರಿಕೆ ಕರೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಶನಿವಾರ ರಾತ್ರಿ ಈಶ್ವರಪ್ಪ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಿಂತಿರುಗುವ ವೇಳೆಯಲ್ಲಿ ಕರೆಯೊಂದು ಬಂದಿದ್ದು, ಕರೆ ಮಾಡಿದ ವ್ಯಕ್ತಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾರೆ.
ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ ಆತ ಬಿಜೆಪಿ ಸಂಸದ ಸ್ಥಾನಗಳಿಗೆ ಏಕೆ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ? ನಿಮಗೆ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅನಾಮಧೇಯ ವ್ಯಕ್ತಿ ಈಶ್ವರಪ್ಪ ಮೊಬೈಲ್’ಗೆ ಎರಡು ಬಾರಿ ಕರೆ ಮಾಡಿದ್ದ. ಅವಾಚ್ಯ ಶಬ್ದಗಳಿಂದ ಬೈದಿದ್ದ ಆ ವ್ಯಕ್ತಿಗೆ ಶಾಸಕ ಈಶ್ವರಪ್ಪ ಅವರೂ ಸಹ ಬೈಯ್ದಿದ್ದಾರೆ. ಆಗ ವ್ಯಕ್ತಿ ಕರೆಯನ್ನು ಕಟ್ ಮಾಡಿದ್ದಾನೆ.
ಅನಾಮಧೇಯ ಕರೆ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಈಶ್ವರಪ್ಪ ಈ ಸಂಬಂಧ ಸೂಕ್ತ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಜೀವ ಬೆದರಿಕೆ ಹಿನ್ನೆಲೆ ತಮಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೋರಿದ್ದಾರೆ.
Discussion about this post