ಕೊಲಂಬೋ: ಭಯೋತ್ಪಾದಕರು ನಡೆಸಿದ ಭೀಕರ ದಾಳಿಗೆ ಶ್ರೀಲಂಕಾ ಅಕ್ಷರಶಃ ನಡುಗಿ ಹೋಗಿದ್ದು, ಭಾರೀ ಸ್ಫೋಟಕ್ಕೆ 129ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 300ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಸರಣಿ ದಾಳಿಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದ್ದು, ಕೊಲಂಬೋ ಸೇರಿದಂತೆ ಶ್ರೀಲಂಕಾದೆಲ್ಲೆಡೆ ಹೈ ಅಲರ್ಟ್ ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಮೂರು ಚರ್ಚ್‌ಗಳು ಮತ್ತು ಮೂರು ಪಂಚತಾರಾ ಹೊಟೇಲ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಕೊಲೊಂಬೊದಲ್ಲಿನ ಸೇಂಟ್ ಅಂತೋನಿ ಚರ್ಚ್, ಪಶ್ಚಿಮ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬ್ಯಾಟಿಕೊಲೊದಲ್ಲಿರುವ ಮತ್ತೊಂದು ಚರ್ಚ್‌ನಲ್ಲಿ ಸ್ಪೋಟ ಸಂಭವಿಸಿದೆ. ಅಲ್ಲದೆ ಪಂಚತಾರಾ ಹೋಟೆಲುಗಳಾದ ಶಾಂಗ್ರಿಲಾ, ಸಿನ್ನಮೋನ್ ಗ್ರಾಂಡ್ ಮತ್ತು ಕಿಂಗ್ಸ್ ಬರಿ ಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಲಾಗಿದೆ.
ಈಸ್ಟರ್ ಆಚರಣೆಗಾಗಿ ಭಾರೀ ಸಂಖ್ಯೆಯ ಜನರು ಚರ್ಚ್‌ನಲ್ಲಿ ಜಮಾವಣೆಗೊಂಡಿರುವುದನ್ನು ಗುರಿಯಾಗಿರಿಸಿಕೊಂಡು ಭೀಕರ ದಾಳಿ ನಡೆಸಲಾಗಿದೆ. ಕೊಲಂಬೋ ನಗರದಲ್ಲಿ ಸೇನಾ ಪಡೆಗಳ ತುಕಡಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಧಾನಿ ರಣಿಲ್ ವಿಕ್ರಮಸಿಂಘೆ ಅವರು ಭದ್ರತಾ ಸಮಿತಿಯ ತುರ್ತು ಸಭೆಯನ್ನು ಕರೆದು ಸ್ಫೋಟಗಳ ಬಗ್ಗೆ ವಿವರ ಕೇಳಿದ್ದಾರೆ.
Discussion about this post