ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ವಿಶಿಷ್ಟ ಆಚಾರವಿಚಾರಗಳಿಗೆ ಸಾಕ್ಷಿಯಾಗಿರುವ ಜಿಲ್ಲೆ. ಇಲ್ಲಿ ನೆಲೆಸಿರುವ ಅದೇಷ್ಟೋ ಲಂಬಾಣಿ ಬುಡಕಟ್ಟು ಜನಾಂಗದವರು ಸದಾ ಬರದಿಂದ ಕಂಗ್ಗೆಟ್ಟಿರುವ ಜಿಲ್ಲೆಯಲ್ಲಿ ಮಳೆ ಬಂದು ಸಮೃದ್ಧಿ ನೆಲೆಸಲೆಂದು ತೀಜ್ (ಗೋಧಿ ಹಬ್ಬ) ಎಂಬ ಹಬ್ಬವೊಂದನ್ನು ಆಚರಣೆ ಮಾಡಿದ್ದಾರೆ.
ಜಿಲ್ಲೆಯ ಕೂಗಳತೆಯಲ್ಲಿರುವ ಪಂಡರಹಳ್ಳಿಯಲ್ಲಿ ಈ ತೀಜ್ ಹಬ್ಬವನ್ನು ಇಡೀ ಗ್ರಾಮದ ಜನರು ಒಗ್ಗಟ್ಟಾಗಿ ಆಚರಣೆ ಮಾಡಿದರು. ಗ್ರಾಮದೇವರುಗಳಾದ ಸೇವಾಲಾಲ್ ಹಾಗೂ ಮಾರಿಯಮ್ಮ ದೇವಿಗೆ ಬೇಟೆ ಕಡಿದು ವಿಶೇಷ ಪೂಜೆ ಸಲ್ಲಿಸಿದರು.
ನಂತರ ಗ್ರಾಮ ಹಾಗೂ ಜಿಲ್ಲೆಯಲ್ಲಿ ಮಳೆ ಬೆಳೆ ಬರಲಿ ತಮ್ಮ ಸಮುದಾಯಕ್ಕೆ ಒಳ್ಳೆದಾಗಲಿ ಎಂಬ ಉದ್ದೇಶದಿಂದ ಈ ತೀಜ್ ಹಬ್ಬವನ್ನು ಆಚರಣೆ ಮಾಡಿದರು. ಗೋಧಿ ಹಬ್ಬ ಎಂದೇ ಖ್ಯಾತಿಗಳಿಸಿರುವ 09 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಊರಿನ ಹೆಣ್ಣುಮಕ್ಕಳು ತಮ್ಮ ಸಮುದಾಯದ ವಿಭಿನ್ನವಾದ ಉಡುಗೆ ತೊಡುಗೆಗಳನ್ನು ತೊಟ್ಟು ಹಬ್ಬವನ್ನು ಆಚರಣೆ ಮಾಡುತ್ತಾರೆ. ಊರಿಗೆ ಒಳ್ಳೆದಾಗಲೆಂದು ಒಂಬತ್ತು ದಿನಗಳ ಕಾಲ ನೀರು ಗೊಬ್ಬರ ಹಾಕಿ ಬೆಳೆದಿರುವ ಗೋದಿಯ ಬಿದಿರಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮೂಲಕ ಗಂಗಾ ಪೂಜೆ ಮಾಡಿ ಹಬ್ಬಕ್ಕೆ ನಾಂದಿ ಹಾಡಲಾಗುತ್ತದೆ.
ತೀಜ್ ಹಬ್ಬವನ್ನು ಆಚರಿಸಲು ದೂರದ ಊರುಗಳಿಂದ ಸಂಬಂಧಿಕರು ಆಗಮಿಸಿ ಈ ಹಬ್ಬದಲ್ಲಿ ಪಾಲ್ಗೊಂಡು ಗೋಧಿ ಬುಟ್ಟಿಯನ್ನು ತಲೆ ಮೇಲೆ ಹೊತ್ತು ದೇವರಿಗೆ ಭಕ್ತಿಯ ಪರಕಾಷ್ಟೆ ಮೆರೆಯುತ್ತಾರೆ. ಗ್ರಾಮದ ಕೂಗಳತೆಯಲ್ಲಿರುವ ಅಂಕಳಿ ಎಂಬ ಸ್ಥಳದಲ್ಲಿ ಹೊತ್ತು ತಂದ ಗೋಧಿ ಬೆಳೆದ ಬುಟ್ಟಿಯನ್ನು ಇರಿಸುವ ಮೂಲಕ ಗಂಗಾ ಪೂಜೆ ಸಲ್ಲಿಸಲಾಗುತ್ತದೆ.
ನಂತರ ಬುಟ್ಟಿಯಲ್ಲಿ ಬೆಳೆದ ಗೋಧಿಯ ಗಿಡಗಳನ್ನು ಒಳ್ಳೆದಾಗಲಿ ಎಂಬ ದೃಷ್ಟಿಯಲ್ಲಿ ಹಬ್ಬಕ್ಕೆ ಆಗಮಿಸಿದ್ದ ಸಂಬಂಧಕರ ಕೈ ಇಡಲಾಗುತ್ತದೆ. ಪ್ರತಿ ಮೂರು ವರ್ಷಕ್ಕೆ ಆಚರಣೆ ಮಾಡಲಾಗುತ್ತಿದ್ದ ತೀಜ್ ಹಬ್ಬಕ್ಕೆ ಮಳೆ ಬೆಳೆ ಇಲ್ಲದೆ ರೋಸಿಹೋಗಿದ್ದ ಗ್ರಾಮದ ಜನರು ಹಬ್ಬವನ್ನು ಸ್ಥಗಿತಗೊಳಿಸಿದ್ದರು. ಅದರೆ ಈ ಬಾರಿಯಾದರೂ ಮಳೆರಾಯ ಕೃಪೆ ತೋರುತ್ತಾನೆಂದು ನಂಬಿಕೆ ಇಟ್ಟ ಗ್ರಾಮದ ಮುಖಂಡರು ಆರು ವರ್ಷದ ಬಳಿಕ ಹಬ್ಬವನ್ನು ಆಚರಿಸಿದ್ದಾರೆ.
ಸಖತ್ ಸ್ಟೆಪ್ ಹಾಕಿದ ಯುವಕ ಯುವತಿಯರು
ಹಬ್ಬದ ಪ್ರಯುಕ್ತ ಊರಿನ ಹೆಣ್ಣುಮಕ್ಕಳು ಹಾಗೂ ಯುವಕರು ಡಿಜೆಗೆ ಕುಣಿದು ಕುಪ್ಪಳಿಸಿದರು. ಒಳ್ಳೆದಾಗಲಿ ಎಂಬ ದೃಷ್ಟಿಯಿಂದ ಬೆಳೆದ ಗೋಧಿಯನ ಬುಟ್ಟಿಗಳನ್ನು ತಲೆಮೇಲೆ ಹೊತ್ತು ಹಾಡಿಗೆ ತಕ್ಕಂತೆ ಹೆಣ್ ಹೈಕ್ಳು ಸ್ಟೆಪ್ ಹಾಕಿದ್ದು, ನೋಡುಗರನ್ನು ಆಕರ್ಷಿಸುತ್ತಿತ್ತು. ಇದಕ್ಕೇನು ನಾವೇನು ಕಮ್ಮಿ ಇಲ್ಲ ಎಂಬಂತೆ ಗಂಡ್ ಹೈಕ್ಳು ಕೂಡ ಕುಣಿಯುವ ಮೂಲಕ ಹೆಣ್ ಹೈಕ್ಳಿಗೆ ಸೆಡ್ ಹೊಡೆದರು.
ಒಟ್ಟಾರೆ ಸದಾ ಬರಗಾಲದಿಂದ ಬಳಲುತ್ತಿರುವ ಚಿತ್ರದುರ್ಗ ಜಿಲ್ಲೆಗೆ ಮಳೆರಾಯ ಕೃಪೆ ತೋರಲಿ ಸಮೃದ್ದಿ ಬೆಳೆ ಬೆಳೆಯಲಿ ಎಂಬ ದೃಷ್ಟಿಯಿಂದ ಹಬ್ಬವನ್ನು ಆಚರಿಸಲಾಗಿದೆ.
(ವರದಿ: ಸುರೇಶ್ ಬೆಳಗೆರೆ)
Discussion about this post