ಭದ್ರಾವತಿ: ವಿಶ್ವ ಶಾಂತಿಯ ದೂತ ಭಗವಾನ್ ಬುದ್ದರ ಬುದ್ದಪೂರ್ಣಿಮೆ ಜಯಂತಿ ಕಾರ್ಯಕ್ರಮ ಮೇ: 18 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ದಸಂಸ ಜಿಲ್ಲಾ ಶಾಖೆ ವತಿಯಿಂದ ಪ್ರಥಮ ಭಾರಿಗೆ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹೇಳಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ವಿಶ್ವ ಶಾಂತಿಯ ದೂತ, ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ ಭಗವಾನ್ ಬುದ್ದರು ಅಸಾಮಾನ್ಯ ಮಾನವರಾಗಿ ಈ ಜಗತ್ತಿನಲ್ಲಿ ಜನಿಸಿ ಸರ್ವರ ಹಿತ, ಸುಖಕ್ಕಾಗಿ ಜಗದ ಮೇಲಿನ ಅನುಕಂಪದಿಂದಾಗಿ ಉದಯಿಸಿ ಸರ್ವಲೋಕವನ್ನು ತಿಳಿದು ಶ್ರೇಷ್ಟರಾಗಿ ಅನುಪಮರು ಪ್ರಜ್ಞಾ ಮತ್ತು ಕರುಣೆಯ ಸಂಗಮದ ಸಾಕ್ಷತ್ ಜ್ಞಾನದಯ ಸಾಗರವಾಗಿದ್ದಾರೆ ಎಂದರು.
ಪ್ರಪಂಚದಲ್ಲಿ ಅನೇಕ ಧರ್ಮಗಳ ಬೆಳವಣಿಯಲ್ಲಿ ಬೌದ್ದ ಧರ್ಮ ಬೆಳೆಯಲು ಚಿಂತನೆ ಮಾಡಿದ್ದರು. ಜ್ಞಾನದ ಸಂಕೇತವಾಗಿರುವ ಬುದ್ದರು ಸರ್ವ ಜೀವಿಗಳ ಹಿತಕ್ಕಾಗಿ ಜೀವಿಸಿದಂತಹ ಏಕೈಕ ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದ ಇವರು ಎಂದಿಗೂ ತಮ್ಮನ್ನು ಪೂಜಿಸಿ ಎಂದು ಹೇಳಿದವರಲ್ಲ. ಬೌದ್ದರ ಬುದ್ದ ಧ್ಯಾನವು ಅನ್ಯ ಧರ್ಮೀಯರಂತೆ ಅಂಧವಿಶ್ವಾಸ ಮೂಡಿಸದೆ ನಿಬ್ಬಾಣಕ್ಕೆ ಸಹಕಾರಿಯಾಗಿದೆ. ಎಲ್ಲೆಲ್ಲಿ ಬುದ್ದರ ಬೋಧನೆಯು ಏಳಿಗೆಯಲ್ಲಿರುತ್ತದೆಯೋ ಅಲ್ಲಲ್ಲಿ ಶಾಂತಿ, ಸುಭಿಕ್ಷತೆ ಮತ್ತು ಆನಂದ ನೆಲೆಸಿರುತ್ತದೆ ಎಂದು ತಿಳಿಸಿ ವಿಶ್ವಕ್ಕೆ ಶಾಂತಿ ಸಾರಿದ ಬುದ್ದರ ಸ್ಮರಣಾ ದಿನಾಚರಣೆಗೆ ರಾಜ್ಯದ ವಿವಿಧ ಭಾಗಗಳಿಂದ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ ದಸಂಸ, ದಲಿತ ನೌಕರರ ಒಕ್ಕೂಟ, ವಿದ್ಯಾರ್ಥಿ ಒಕ್ಕೂಟ, ಮಹಿಳಾ ಒಕ್ಕೂಟ ಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಧ್ಯಕ್ಷ ಸಿ.ಜಯಪ್ಪ ಮಾತನಾಡಿ ಮೊದಲು ಮಾನವನಾಗಬೇಕು, ಮಾನವ ಧರ್ಮವಾಗಬೇಕು, ಪ್ರೀತಿ ವಿಶ್ವಾಸದಿಂದ ಗೆಲ್ಲುವಂತಾಗಬೇಕು. ಸಮಾನತೆ ಕಾಣಲು ಬೌದ್ದ ತತ್ವದ ಗುರಿಗಳನ್ನು ಅಳವಡಿಸಿಕೊಳ್ಳುವಂತಾಗಬೇಕು. ಅಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರು ಸಹ ಇಂತಹ ಸಂದೇಶಗಳನ್ನು ನೀಡಿದ್ದರು. ದಲಿತ ನೌಕರರಿಗೆ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಅಸ್ತು ನೀಡಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಕನಸಿನ ಕೂಸಾದ ಬಡ್ತಿ ಮೀಸಲಾತಿ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸಲು ಪ್ರಯತ್ನಿಸಿದ್ದರು. ಇಂದಿನ ಮುಖ್ಯಮಂತ್ರಿಗಳು ಯಥಾವತ್ತಾಗಿ ಜಾರಿಗೊಳಿಸುವಂತಾಗಬೇಕು ಎಂದರು.
ಕನಿಷ್ಟ 10 ವರ್ಷ ಮೇಲ್ಪಟ್ಟು ಸರಕಾರಿ ಸೇವೆಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಖಾಯಂಗೊಳಿಸುವಂತಗಾಬೇಕು. ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳಿಗೆ ನೌಕರರನ್ನು ಏಜನ್ಸಿ ಮೂಲಕ ನೇಮಕ ಮಾಡದೆ ನೇರ ನೇಮಕಾತಿ ಮಾಡುವಂತಾದಲ್ಲಿ ನಿರುದ್ಯೋಗಿಗಳಿಗೆ ಆಶಾಕಿರಣವಾಗಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ದಲಿತ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ಉಮಾ, ದಸಂಸ ವಿಕಲಾಂಗ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‍ರಾಜ್, ಮುಖಂಡರಾದ ಈಶ್ವರಪ್ಪ, ಶಿವಶಂಕರ್, ಶಾಂತಿ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post