ಕರಾವಳಿಯ ಬಾಲ ಪ್ರತಿಭೆ ಆಯುಷ್ ಎನ್ನುವ ಪುಟ್ಟ ಬಾಲಕನ ಬಗ್ಗೆ ನಿಮಗೆಷ್ಟು ತಿಳಿತಿದೆ. ಹದಿಮೂರರ ಹರೆಯದಲ್ಲಿ ಹತ್ತಾರು ಸಾಧನೆಯ ಶಿಖರವನ್ನೇರಿದ ಹಳ್ಳಿ ಹುಡುಗನ ಯಶಸ್ಸಿನ ನೈಜ ಕಥೆಯಿದು.
ಜಯರಾಮ್ ಶೆಟ್ಟಿ ಹಾಗೂ ರೇಷ್ಮಾ ಶೆಟ್ಟಿ ದಂಪತಿಗಳ ಮಗನಾಗಿ ಆಯುಷ್ 2005ರ ಆಗಸ್ಟ್ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ಜಯರಾಮ್ ಶೆಟ್ಟೆಯವರ ಜನ್ಮ ಭೂಮಿ ಪುತ್ತೂರಾದರು ಕರ್ಮಭೂಮಿ ಬೆಂಗಳೂರು.
ಸದ್ಯ ಉದ್ಯೋಗದ ನಿಮಿತ್ತ ಬೆಂಗಳೂರಿನ ಬನಶಂಕರಿ ಎಂಬಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಈ ದಂಪತಿಗಳ ಮುದ್ದಿನ ಮಗ ಆಯುಷ್ ಎನ್ನುವ ಪುಟ್ಟ ಬಾಲಕನ ಬಾಲ ಪ್ರತಿಭೆಯನ್ನು ಇಡೀ ಕರ್ನಾಟವೇ ಮೆಚ್ಚಿ ಹರಸಿದೆ. ಆಯುಷ್ ಕಲರ್ಸ್ ಸೂಪರ್ ಮಾಧ್ಯಮದಲ್ಲಿ ಬರುವ ಮಜಾ ಭಾರತ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತನ್ನ ಅಭಿನಯ ಹಾಗೂ ಮುಗ್ಧ ಮಾತುಗಳ ಮೂಲಕ ರಾಜ್ಯದಾದ್ಯಂತ ಜನರ ಅಪಾರ ಪ್ರೀತಿ ಗಳಿಸಿದ್ದಾನೆ. ತನ್ನ ಪ್ರತಿಭೆ ಹಾಗೂ ಮುಗ್ಧ ಮಾತುಗಳಿಂದ ರಾಜ್ಯದಾದ್ಯಂತ ಮನೆಮಾತಾಗಿರುವ ಆಯುಷ್ ಬೆಂಗಳೂರಿನ ಬನಶಂಕರಿ ಸಮೀಪದ ಬಿ ಎನ್.ಎಂ ಪಬ್ಲಿಕ್ ಸ್ಕೂಲ್’ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಮೊದಲ ಬಾರಿಗೆ ಆಯುಷ್ ಜೆ ಶೆಟ್ಟಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಮನ್ನಣೆ ಪಡೆದ ಕಿನ್ನರಿ ಧಾರಾವಾಹಿಯಲ್ಲಿ ಲೋಕಿ ಎನ್ನುವ ಪಾತ್ರದಲ್ಲಿ ಮನೆ ಮಾತಾಗಿದ್ದರು. ಮಣಿ ಮತ್ತು ಲೋಕಿ ಜೋಡಿಯ ಅಭಿನಯ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಈ ಧಾರಾವಾಹಿಯಲ್ಲಿ ಆಯುಷ್ ಅಭಿನಯವನ್ನು ಮೆಚ್ಚಿಕೊಂಡ ಜನರು ರಸ್ತೆಯಲ್ಲಿ ಹೋಗುವಾಗ ಹೇ ಲೋಕಿ ಮಣಿಯನ್ನು ಚನ್ನಾಗಿ ನೋಡಿಕೋ ಅವಳಿನ್ನು ಚಿಕ್ಕವಳು ಎನ್ನುತಿದ್ದರು.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಮಜಾ ಭಾರತ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಆಯುಷ್ 8 ರಿಂದ 9 ತಿಂಗಳು ಭಾಗವಹಿಸಿದ್ದರು. ಮಜಾ ಭಾರತ್ ಶೋ ನಲ್ಲಿ ಆಯುಷ್ ಮಾಡಿರುವ ಅತ್ತೆಯ ಪಾತ್ರಕ್ಕೆ ಬೆಸ್ಟ್ ಪರ್ಫೋರ್ಮನ್ಸ್ ಆಫ್ ದಿ ಡೇ ಹೆಗ್ಗಳಿಕೆ ಕೂಡ ದೊರಕಿದೆ. ಇದುವರೆಗೆ ಆಯುಷ್ ಜೆ ಶೆಟ್ಟಿ ಅವರು ಗಾಂಧಾರಿ, ಮನೆ ದೇವರು, ರಾಗ ಅನುರಾಗ, ಅವನು ಮತ್ತು ಶ್ರಾವಣಿ ಎನ್ನುವ ಸೀರಿಯಲ್ ನಲ್ಲಿ ಬಾಲ ನಟನಾಗಿ ನಟಿಸಿದ್ದಾರೆ.
ಧಾರಾವಾಹಿಗಳಲ್ಲಿ ಆಯುಷ್ ಜೆ. ಶೆಟ್ಟೆಯವರ ಅಭಿನಯವನ್ನು ಗುರುತಿಸಿದ ನಿರ್ಮಾಪಕಿ ಶ್ವೇತಾ ಎನ್. ಶೆಟ್ಟಿ ಅವರು ಆಯುಷ್ ಜೆ ಶೆಟ್ಟಿ ಅವರನ್ನು ಮುಖ್ಯ ಬಾಲನಟನಾಗಿ ಇಟ್ಟುಕೊಂಡು 1098 ಎನ್ನುವ ಚಲನ ಚಿತ್ರ ನಿರ್ಮಾಣ ಮಾಡುತ್ತಾರೆ. ಈ ಚಲನಚಿತ್ರ ಕೇವಲ ಮನೋರಂಜರನೆಗೋಸ್ಕರ ಮಾಡಿದ ಚಿತ್ರವಲ್ಲ. ಬಾಲಕಾರ್ಮಿಕರ ಜೀವನದ ಒಂದೊಂದು ಮಜಲುಗಳನ್ನು ಇಲ್ಲಿ ಎಳೆ ಎಳೆಯಾಗಿ ತೋರಿಸಲಾಗಿದೆ.
ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಾನ್ಯ ಎನ್. ಮಹೇಶ್ ಅವರು ಅತಿಯಾಗಿ ಮೆಚ್ಚಿಕೊಂಡ ಚಿತ್ರವಿದು. ಈ ಚಿತ್ರವನ್ನು ನೋಡಿದ ಸಚಿವರು ಕರ್ನಾಟಕದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಈ ಚಿತ್ರವನ್ನು ನೋಡಲು ಅವಶ್ಯವಿರುವ ಸಹಾಯನ್ನು ನಾನು ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದ್ದರು. ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಮಕ್ಕಳ ವ್ಯಕ್ತಿತ್ವ ವಿಕಸನದ ದೃಷ್ಟಿಕೋನವನ್ನು ಇಟ್ಟುಕೊಂಡು ಈ ಚಿತ್ರವನ್ನು ತೋರಿಸಲಾಗುತ್ತಿದೆ.
ಕೆ. ಶಿವರುದ್ರಯ್ಯ ಅವರ ನಿರ್ದೇಶನದಲ್ಲಿ ಸೊಗಸಾಗಿ ಮೂಡಿಬಂದ ರಾಮನ ಸವಾರಿ ಎನ್ನುವ ಸಿನಿಮಾದಲ್ಲಿ ಆಯುಷ್ ಜೆ ಶೆಟ್ಟಿಯವರು ಬಾಲ ನಟನಾಗಿ ಅಭಿನಯಿಸಿದ್ದರು. ಗಂಡ ಹೆಂಡಿರ ಜಗಳದಲ್ಲಿ ಮಕ್ಕಳ ಭವ್ಯ ಭವಿಷ್ಯತ್ತಿಗೆ ಹೇಗೆ ಕೊಡಲಿ ಏಟು ಬೀಳುತ್ತದೆ ಎನ್ನುವ ಸಂದೇಶವನ್ನು ಅತ್ಯಂತ ಮಾರ್ಮಿಕವಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ರಾಮನ ಸವಾರಿ ಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ದೊರಕಿರುವುದು ನಾವು ಅತ್ಯಂತ ಸಂತೋಷ ಪಡುವ ವಿಷಯ.
ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ತೆಗೆದ ಒಂದು ಶಾರ್ಟ್ ಮೂವಿಯಲ್ಲಿ ಆಯುಷ್ ಜೆ. ಶೆಟ್ಟಿ ಅವರು ಅಭಿನಯಿಸಿದ್ದಾರೆ. ಕಿರಿಕ್ ಲವ್ ಸ್ಟೋರಿ, ಯದಾಯ-ಯದಾಯ ಧರ್ಮಸ್ಯ ಎನ್ನುವ ವಿಜಯ ರಾಘವೇಂದ್ರ ನಟಿಸಿರುವ ಚಿತ್ರ, ದುನಿಯಾ ವಿಜಯ್ ಅವರು ಬಾಲಕನಾಗಿರುವ ಸನ್ನಿವೇಶಕ್ಕೆ, ಕನ್ನಡ ಚಿಂಟು ಚಾನಲ್’ನಲ್ಲಿ ಬರುವ ಪಾತ್ರಗಳಿಗೆ ಆಯುಷ್ ಜೆ. ಶೆಟ್ಟಿ ತಮ್ಮ ಧ್ವನಿಯನ್ನು ನೀಡಿದ್ದಾರೆ.
ಇದುವರಿಗೆ 100 ಕ್ಕೂ ಅಧಿಕ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರಚುರಪಡಿಸಿದ ಹೆಮ್ಮೆ ಆಯುಷ್ ಅವರದ್ದು. ಆಯುಷ್ ಮಾಡಿರುವ ಮೋಕೆದ ತುಡರ್ ಎನ್ನುವ ಆಲ್ಬಮ್ ಸಾಂಗ್ ಕರಾವಳಿಗರ ಮನಸ್ಸು ಸೂರ್ಯಗೊಂಡಿದೆ. ಆಯುಷ್ ಅವರ ಬಹುಮುಖ ಪ್ರತಿಭೆಗೆ ಇದು ಕನ್ನಡಿಯಂತಿದೆ.
ಎಲ್ಲಿ ಪ್ರತಿಭೆ ಇದೆಯೋ ಅಲ್ಲಿಗೆ ಪುರಸ್ಕಾರಗಳು ಅರಸಿ ಬರುವುದು ಸ್ವಾಭಾವಿಕ ಆಯುಷ್ ಜೆ. ಶೆಟ್ಟಿ ತನ್ನ ಎಳೆಯ ಪ್ರಾಯದಲ್ಲಿ ಮಾಡಿರುವ ಬಹುದೊಡ್ಡ ಸಾಧನೆಯನ್ನು ಗುರುತಿಸಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಕರ್ನಾಟಕದ ಮೂಲೆ-ಮೂಲೆಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.
ಕರಾವಳಿ ಯಕ್ಷ ಮಿತ್ರರು ಹಾಗೂ ಬಹುಮುಖ ಪ್ರತಿಭೆಗಳ ಸಂಗಮ ಇವರು ಕರಾವಳಿ ಸಿರಿ ಎಂಬ ಬಿರುದು ನೀಡಿ ಗೌರವಿಸಿದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಇವರಿಂದ ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನವ ಕರ್ನಾಟಕ ಯುವಶಕ್ತಿ ಅವರಿಂದ ಕುವೆಂಪು ಉತ್ಸವ ಅವಾರ್ಡ್ ನೀಡಿ ಪ್ರತಿಭೆಗೆ ಬೆಂಬಲ ನೀಡಲಾಯಿತು. ಆಯುಷ್ ಅವರ ಬಾಲ ಪ್ರತಿಭೆಯನ್ನು ಗುರುತಿಸಿ 50 ರಿಂದ 60 ಕಡೆ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.
ಪಠ್ಯೇತರ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಆಯುಷ್ ಪಠ್ಯದಲ್ಲಿಯೂ ಕಡಿಮೆ ಇಲ್ಲ. ಒಂದರಿಂದ ಹತ್ತನೆಯ ತರಗತಿ ಒಳಗಿನ ಮಕ್ಕಳ ರಾಷ್ಟ್ರ ಮಟ್ಟದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಸತತ 4 ಬಾರಿ ರಾಂಕ್ ಪಡೆದುಕೊಂಡಿದ್ದಾನೆ. ಪ್ರತಿ ವರ್ಷ ತರಗತಿಯಲ್ಲಿ 90% ಅಧಿಕ ಅಂಕವನ್ನು ಪಡೆದು ತೇರ್ಗಡೆಯನ್ನು ಹೊಂದುತ್ತಿದ್ದಾನೆ.
ನನ್ನ ಮಗ ಡಾಕ್ಟರ್ ಆಗ್ಬೇಕು, ನನ್ನ ಮಗ ಇಂಜಿನಿಯರ್ ಆಗ್ಬೇಕು ಎಂದು ಕೇವಲ ಓದು ಬರಹಗಳಿಗೆ ಮಹತ್ವವನ್ನು ಕೊಡುವ ತಂದೆ ತಾಯಿಗಳ ನಡುವೆ ನನ್ನ ಮಗ ಕಲಾವಿದನಾಗಬೇಕು ಎಂದು ಪಠ್ಯದ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಬೆಂಬಲ ನೀಡುವ ಪೋಷಕರು ದೊರಕುವುದು ಬಹಳ ವಿರಳ.
ಆಯುಷ್ ಚಿಕ್ಕ ಪ್ರಾಯದಲ್ಲಿರುವಾಗ ಆತನ ಆಸಕ್ತಿಯನ್ನು ಗಮನಿಸಿ ಗುರುತಿಸಿ ಬೆಂಬಲವನ್ನು ನೀಡಿರುವುದರಿಂದ ಇಂದು ರಾಜ್ಯ ಮಟ್ಟದ ಬಾಲ ಪ್ರತಿಭೆಯೊಂದನ್ನು ನಾವು ನೋಡುವುದಕ್ಕೆ ಸಾಧ್ಯವಾಗಿದೆ. ಪ್ರತಿಭೆ ಪ್ರತಿಯೊಬ್ಬರ ಬಳಿಯೂ ಇರುತ್ತದೆ ಆದರೆ ಪ್ರತಿಭೆಯನ್ನು ಗುರುತಿಸಿ ಬೆಂಬಲಿಸುವ ತಂದೆತಾಯಿಗಳು ಎಲ್ಲಾ ಮಕ್ಕಳಿಗೂ ದೊರಕುವುದಿಲ್ಲ. ಆ ವಿಚಾರದಲ್ಲಿ ಆಯುಷ್ ನಿಜವಾಗಿಯೂ ಅದೃಷ್ಟವಂತನೇ ಸರಿ.
ಅನೇಕ ಮಂದಿ ಕಲಾವಿದರನ್ನು ಸಾಹಿತಿಗಳನ್ನು, ಚಲನಚಿತ್ರ ನಟರನ್ನು ನೀಡಿದ ಹೆಮ್ಮೆ ನಮ್ಮ ಕರಾವಳಿಯದ್ದು. ಇಗ ಆಯುಷ್ ಎನ್ನುವ ಬಾಲ ಪ್ರತಿಭೆ ಕರ್ನಾಟಕದಲ್ಲಿ ಪ್ರಜ್ವಲಿಸುತ್ತಿದೆ. ಆದರೆ ಆ ಪ್ರತಿಭೆಯ ತಾಯಿ ಬೇರು ನಮ್ಮ ಕರಾವಳಿ ಎಂದು ಹೇಳುವುದಕ್ಕೆ ಅಪಾರವಾದ ಹೆಮ್ಮೆಯಾಗುತ್ತಿದೆ. ಆಯುಷ್ ತನ್ನ ಎಳೆಯ ಪ್ರಾಯದಲ್ಲೇ ಮುಂದಿನ ಗುರಿಯನ್ನು ನಿರ್ಧರಿಸಿಕೊಂಡಿದ್ದಾನೆ. ಸಮಾಜದಲ್ಲಿ ಒಂದು ಹೊತ್ತಿನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿ ಇರುವ ಬಡವರಿಗೆ ಸಹಾಯ ಮಾಡುವ ಒಬ್ಬ ಸಮಾಜ ಸೇವಕನಾಗಬೇಕು ಎನ್ನುವುದು ಈ ಬಾಲಕನ ಜೀವನ ಪರಮೋಚ್ಚ ಕನಸಂತೆ.
ಆಯುಷ್ ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ, ಭಗವಾನ್ ಭಾಸ್ಕರನಂತೆ ಅನುಗಾಲವೂ ಪ್ರಜ್ವಲಿಸುತ್ತಿರಲಿ. ನಿಮ್ಮ ಸಾಧನೆಯ ಮಾರ್ಗ ಸುಖಕರವಾಗಲಿ. ಮುಂದೊಂದು ದಿನ ಜಗಮೆಚ್ಚುವ ಕಲಾವಿದನಾಗಿ ಹೆತ್ತ ತಾಯಿಗೆ ಹೊತ್ತ ಭೂಮಿಗೆ ಕೀರ್ತಿ ತರುವ ವ್ಯಕ್ತಿ ನೀವಾಗಿ. ಆ ಭಾಗವನಂತ ನಿಮಗೆ ಅರೋಗ್ಯ ಭಾಗ್ಯವನಿತ್ತು ಸದಾ ಹರಸಲಿ ಇದು ನಮ್ಮೆಲ್ಲರ ಕೋರಿಕೆ.
ಲೇಖನ-ಬರವಣಿಗೆ: ಗೌರೀಶ್ ಆವರ್ಸೆ
ಸಲಹೆ-ಸೂಚನೆ-ಚಿತ್ರಕೃಪೆ-ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post