ಗೌರಿಬಿದನೂರು: ಮನುಕುಲದ ಮುಂದಿನ ಪೀಳಿಗೆಯ ಅಸ್ಥಿತ್ವ ಹಾಗೂ ಉಳಿವಿಗಾಗಿ ಮರಗಿಡಗಳ ಪಾತ್ರ ಅಮೂಲ್ಯವಾದುದು, ಹೆಚ್ಚಾಗಿ ಅವುಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ಎಲ್ಲರೂ ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಗಿರಿಜಾ ಶಂಕರ್ ಹೇಳಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಹಸಿರು ಕರ್ನಾಟಕ ಹಾಗೂ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಕೋಟಿ ನಾಟಿ ಯೋಜನೆಯ ಬಗ್ಗೆ ಗ್ರಾಮೀಣ ಭಾಗದಲ್ಲಿ ಜನ ಜಾಗೃತಿ ಮೂಡಿಸುವ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬಹುತೇಕರು ತಮ್ಮ ಸ್ವಾರ್ಥಕ್ಕಾಗಿ ಸ್ಥಳೀಯವಾಗಿರುವ ಗಿಡಮರಗಳನ್ನು ನಾಶ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ನೈಜ ವಾತಾವರಣ ಬದಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಪ್ರಮಾದವನ್ನು ಎದುರಿಸಬೇಕಾಗಿತ್ತದೆ. ಆದ್ದರಿಂದ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಗಿಡಮರಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದು ಹೇಳಿದರು.
ಕೋಟಿ ನಾಟಿ ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ಮುನಿರಾಜು ಮಾತನಾಡಿ, ಮುಂಗಾರು ಆರಂಭದ ದಿನಗಳಲ್ಲಿ ಎಲ್ಲೆಡೆ ಗಿಡಗಳನ್ನು ನೆಟ್ಟು ಬೆಳೆಸುವಂತಹ ಕಾರ್ಯ ಮಾಡಬೇಕಾಗಿದೆ. ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಮಾತ್ರವಲ್ಲದೆ ಸ್ಥಳೀಯ ಸಮುದಾಯದ ಸಹಕಾರದಿಂದ ರುದ್ರಭೂಮಿ, ರಸ್ತೆ ಬದಿಗಳಲ್ಲಿ, ಶಾಲಾ ಕಾಲೇಜುಗಳ ಸಮೀಪದಲ್ಲಿ, ಕೆರೆಯಂಗಳ, ಸರ್ಕಾರಿ ಜಮೀನಿನಲ್ಲಿ, ಗುಂಡುತೋಪು ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಸಸಿ ನೆಡುವ ಬೃಹತ್ ಯೋಜನೆಯನ್ನು ಕೈಗೊಳ್ಳಬೇಕಾಗಿದೆ. ಇದರಿಂದ ಎಲ್ಲೆಡೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಯೋಜನೆಯ ತಾಲೂಕು ಸಮನ್ವಯಾಧಿಕಾರಿ ಪದ್ಮಪ್ರಕಾಶ್, ಸಹಾಯಕ ನಿರ್ದೇಶಕ ಚನ್ನಕೃಷ್ಣಪ್ಪ, ಸಹಾಯಕ ಇಂಜಿನಿಯರ್ ಆದಿ ನಾರಾಯಣಪ್ಪ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಪಿ. ಚಿನ್ನಪ್ಪ, ಕೃಷಿ ಇಲಾಖೆಯ ಎಸ್.ಎನ್. ಮಂಜುನಾಥ್, ಅರಣ್ಯ ಇಲಾಖೆಯ ಮುದ್ದುರಾಜ್, ತೋಟಗಾರಿಕೆ ಇಲಾಖೆಯ ಎಸ್. ರವಿಕುಮಾರ್, ರೇಷ್ಮೆ ಇಲಾಖೆಯ ಮುರಳೀಧರ್ ಭಾಗವಹಿಸಿದ್ದರು.
(ವರದಿ: ಅಜಯ್ ಬಿ.ಎಂ., ಗೌರಿಬಿದನೂರು)
Discussion about this post