ಒಂದು ನಂಬಿಕೆ ಇರುತ್ತದೆ. ಅದರಲ್ಲಿ ಮೋಸವಾದಾಗ ಅಪನಂಬಿಕೆ ಉಂಟಾಗುತ್ತದೆ. ಕೊನೆಗೆ ಇದುವೇ ಮೂಢನಂಬಿಕೆಯಾಗುತ್ತದೆ. ಆದರೆ ಇದು ಹೇಗೆ ಪ್ರಚಾರವಾಗುತ್ತದೆ ಎಂಬುದೂ ಮುಖ್ಯ.
ಕೆಲವು ದಿನಗಳ ಹಿಂದೆ ಶ್ರೀ ವಿನಯ್ ಗುರೂಜಿಯವರು ಯಾವುದೋ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗಾರಾಧನೆ- ಭೂತಾರಾಧನೆಯ ಬಗ್ಗೆ ಒಂದು ವಿವಾದಾಸ್ಪದ ಮಾತು ಹೇಳುತ್ತಾರೆ. ಇದರಲ್ಲಿರುವ ಸತ್ಯಾಸತ್ಯಗಳ ವಿಮರ್ಷೆ ಮಾಡುವ ಬದಲು ಜನರು ಒಂದು ನಿರ್ಣಯಕ್ಕೇ ಬಂದು ಬಿಡುತ್ತಾರೆ. ಈ ನಿರ್ಣಯವು ಗುರೂಜಿಯವರ ಪರವೂ ಇರಬಹುದು ಅಥವಾ ವಿರೋಧವಾಗಿಯೂ ಆಗಬಹುದು. ಅದು ಜನರ ವಿವೇಚನೆಗೆ ಬಿಟ್ಟದ್ದು.
ಇವರು ತೆಗೆದುಕೊಂಡ ವಿಚಾರ, ತುಳುನಾಡಿನ ನಾಗಾರಾಧನೆ ಮತ್ತು ಭೂತಾರಾಧನೆ, ಭೂತ ಕೋಲ. ನಾಗಾರಾಧನೆಗೆ ಕೋಟಿ ಖರ್ಚು ಮಾಡಿ, ನಾಗ ಪಾತ್ರಿಗಳು ಸುವರ್ಣಾಭರಣ ಭೂಷಿತರಾಗಿ ಸಾವಿರಾರು ಅಡಕೆ ಹಿಂಗಾರ ಹಾಳು ಮಾಡುತ್ತಾರೆ. ಒಂದು ಹಿಂಗಾರ ಬೆಳೆಯಲು ಆರು ತಿಂಗಳು ಬೇಕು ಎಂದು ಹೇಳುತ್ತಾ ತಮ್ಮ ವಿಚಾರ ಮುಂದುವರೆಸುತ್ತಾರೆ.
ಮತ್ತೊಮ್ಮೆ ಭೂತಾರಾಧನೆ, ಕೋಲ ವಿಚಾರದ ಬಗ್ಗೆಯೂ ಹೇಳುತ್ತಾರೆ. ಪಂಜುರ್ಲಿ ಭೂತಕ್ಕೆ ಶೆಟ್ರ ಮನೆಯಲ್ಲಿ ಕೋಳಿ, ಭಟ್ರ ಮನೆಯಲ್ಲಿ ಇಡ್ಲಿ ಸಾಂಬಾರು ಎಂದು ಅಪಹಾಸ್ಯದ ಮಾತನ್ನು ಆಡಿದ ವೀಡ್ಯೋ ನೋಡಿದೆ. ಇದರೊಳಗಿನ ಆಚರಣೆಯ ವಿಚಾರ ಸತ್ಯಾಸತ್ಯವಿದ್ದರೂ ಅದನ್ನು ಹೇಳಿದ ರೀತಿ ಒಬ್ಬ ಅನೇಕ ಅಭಿಮಾನಿಗಳನ್ನು ಹೊಂದಿದ ಗುರೂಜಿ ಎಂದು ಕರೆಸಿಕೊಂಡಂತಹ, ಅವಧೂತರೆಂದು ಕರೆಸಿಕೊಂಡಂತಹ ಗುರೂಜಿಯ ಅಪ್ರಬುದ್ಧತೆಯನ್ನು ಸೂಚಿಸುತ್ತದೆ.
ಒಂದು ವೇಳೆ ಈ ಜನಪದೀಯವಾದ ನಂಬಿಕೆಯ ಮೂಲ ವಿಚಾರವನ್ನು ಹೇಳಿ, ನಂತರ ಈಗ ನಡೆಯುವ ವಿದ್ಯಮಾನಗಳನ್ನು ಹೇಳುತ್ತಿದ್ದರೆ ಪ್ರಬುದ್ಧ ಭಾಷಣ ಎನ್ನಬಹುದಿತ್ತು. ಆದರೆ ಇಲ್ಲಿ ನೇರವಾಗಿ ಈಗಿನ ಆಚರಣೆಯನ್ನೇ ಕೈಗೆತ್ತಿಕೊಂಡು ಮಾತನಾಡಿದ್ದು ಸರಿಯಾಗಿದೆ ಎಂದು ಹೇಳಲಾಗದು. ಈವರೆಗೆ ಒಬ್ಬನೇ ಒಬ್ಬ ಮನುಷ್ಯ ಗುರೂಜಿಯವರನ್ನು ನಿಂದನೆ ಮಾಡಿದ್ದು ನಾನು ಕೇಳಲೂ ಇಲ್ಲ, ನೋಡಿದ್ದೂ ಇಲ್ಲ. ಯಾವಾಗ ಜನರ ಭಾವನೆಗಳಿಗೆ ಘಾಸಿ ಮಾಡಿದರೋ ಆಗ ಜನರು ಇವರ ಚರಿತ್ರೆಯನ್ನೇ ಬಗೆದು ನೋಡಿ, ವಿರುದ್ಧ ಮಾತನಾಡಲು ಶುರು ಮಾಡಿದರು. ಇದಕ್ಕೆ ಕಾರಣ ಸ್ವತಃ ಅವರ ಭಾಷಣವೇ ಹೊರತು, ಜನರ ಮತ್ಸರವಲ್ಲ. ಶತ ಶತಮಾನಗಳಿಂದ ನಡೆದು ಬಂದಂತಹ ನಾಗಾರಾಧನೆ, ಭೂತ-ಕೋಲಗಳ ಬಗ್ಗೆ ಕೇವಲ ಇಪ್ಪತ್ತೈದು ವರ್ಷಗಳ ತಿಳುವಳಿಕೆಯಲ್ಲಿ ಈ ರೀತಿ ಮಾತನಾಡುವುದು ತಪ್ಪಾಗುತ್ತದೆ. ನಡೆದು ಬಂದಂತಹ ಆಚರಣೆಗಳು ಎಲ್ಲೆ ಮೀರಿ ನಡೆದಾಗ ಅದಕ್ಕೆ ಸೂಕ್ತ ತಿಳುವಳಿಕೆ ನೀಡಿ, ಅದರ ಮಹತ್ವ ತಿಳಿಸಿ ಅದನ್ನು ಯೋಗ್ಯ ಕಾರ್ಯವನ್ನಾಗಿಸುವುದು ಪ್ರಾಜ್ಞರ ಕೆಲಸವೇ ವಿನಾ, ನಿಂದಿಸುವುದು ಶುದ್ಧ ತಪ್ಪು.
ನಾನು ಅನೇಕ ನಾಗ ಪುನಃಪ್ರತಿಷ್ಟೆ ಮಾಡಿಸಿದ್ದಿದೆ. ಅಲ್ಲಿ ಆ ಸಾನ್ನಿಧ್ಯಕ್ಕೆ ಆಡಂಬರದ ಶಿಲಾ ಮಂಟಪದ ಅವಸರದಲ್ಲಿದ್ದವರಿಗೆ, ನಾಗನ ಮಹತ್ವ ತಿಳಿಸಿ ಅದನ್ನು ನೈಸರ್ಗಿಕವಾಗಿ(Natural) ಮಾಡಿಸಿ, ವನಗಳ ನಿರ್ಮಾಣ ಮಾಡಿಸಿ ಪ್ರತಿಷ್ಟೆಗೆ ಚಾಲನೆ ಕೊಟ್ಟಿದ್ದೇನೆ. ನಾಗದೇವರ ಭಕ್ತಿಗೂ ಚ್ಯುತಿಯಾಗದಂತೆ, ಈವರೆಗೆ ನಡೆದು ಬಂದಂತಹ ಆರಾಧನೆಗೂ ಲೋಪ ಬಾರದಂತೆ, ಪ್ರಕೃತಿಗೆ ಪೂರಕ ಆಗುವಂತೆ ನಾಗ ಬನಗಳನ್ನು ನಿರ್ಮಿಸಲು ಸಲಹೆ ನೀಡಿದ್ದಿದೆ. ಆ ಪ್ರಕಾರ ನಡೆದದ್ದೂ ಇದೆ. ಅದು ಬಿಟ್ಟು, ಅದು Waste ಇದು ಮೂಢನಂಬಿಕೆ ಎಂದು ನಾನು ಹೇಳುತ್ತಿದ್ದರೆ ನಾನೊಬ್ಬ ಮೂರ್ಖನಾಗುತ್ತಿದ್ದೆ. ಜನರೊಳಗಿನ ಸದ್ಭಾವನೆಗಳೇ ದೇವರು. ಅದಕ್ಕೆ ಧಕ್ಕೆ ತಂದರೆ, ಅವಹೇಳನ ಮಾಡಿದರೆ ಅದು ದೇವ ಕೋಪವಾಗುವುದರಲ್ಲಿ ಸಂಶಯವೂ ಇಲ್ಲ.
ವ್ಯವಹಾರ ದೃಷ್ಟಿಯಲ್ಲಿ ನೋಡಿ- ಒಂದು ನಾಗ ಮಂಡಲ ನಡೆದರೆ ವಾಹನಗಳಿಂದ ಹಿಡಿದು, ಫಲ, ಪುಷ್ಪ, ಹಾಲು, ಇತ್ಯಾದಿ ವ್ಯಾಪಾರಿಗಳ ಜೀವನ ವೃದ್ಧಿಯಾಗುತ್ತದೆ. ಮಾನಸಿಕವಾಗಿಯೂ ಜನರಲ್ಲಿ ಈ ಸೇವೆಯಿಂದ ಕೃತಾರ್ಥತೆ ಬರುತ್ತದೆ. ಒಂದು ಪೂಜೆ, ಯಾಗ, ತಂಬಿಲ ಇತ್ಯಾದಿ ದೇವ, ದೈವ ಕಾರ್ಯದಿಂದ ಅನೇಕ ಜನರ ಜೀವನ ನಡೆಯುತ್ತದೆ. ಇಂತಹದ್ದರಲ್ಲಿ ಅದು ಆಡಂಬರ, ಇದು ಮೂಢನಂಬಿಕೆ ಎಂದು ಭಾಷಣ ಬಿಗಿದರೆ ಅದು ಮತ್ಸರವೂ ಆದೀತು, ಶುದ್ಧ ತಪ್ಪೂ ಆಗುತ್ತದೆ. ಮಠದ ಯತಿಗಳು ತಮ್ಮ ತಮ್ಮ ವೃತಾನುಷ್ಠಾನ, ಆಹಾರ ಪದ್ಧತಿಯಂತೆ ಇತರರೂ ಇರಬೇಕು ಎಂದು ಹೇಳಿದರೆ ಹೇಗಾದೀತು.? ಇದು one side thinking ಆಗುತ್ತದೆಯೇ ವಿನಾ ಜಗತ್ತಿನ ವ್ಯವಹಾರಕ್ಕೆ ಪೂರಕವಲ್ಲ.
ಅಡುಗೆಯು ಆಡಂಬರ, ಅದ್ದೂರಿ, ರುಚಿಕರ, ಎಲ್ಲರಿಗೂ ಹಿತವಾಗಬೇಕಾದರೆ ಅಲ್ಲಿ ವಿವಿಧ ರೂಪದ ಭಕ್ಷಭೋಜ್ಯಗಳಿರಬೇಕು. ಕೇವಲ ಗಂಜಿ, ಮುದ್ಧೆಗಳಲ್ಲೂ ಜೀವಿಸಬಹುದು. ದೇವರಿಗೆ ’ಪತ್ರಂ ಪುಷ್ಪಂ ತೋಯಂ’ ಸಾಕು ಎಂದು ಗುರೂಜಿ ಹೇಳಿದರು. ಅದು ಕನಿಷ್ಟ ರೂಪದ ಆತಿಥ್ಯ. ಮನೆಗೊಬ್ಬ ಅತಿಥಿ ಬಂದು ಅವನಿಗೆ ನನ್ನ ಸತ್ಕಾರ ಕೇವಲ ಒಂದು ಲೋಟ ನೀರು ಮಾತ್ರ ಎಂದರೆ ಸಾಕೇ. ನಾವು ಉಣ್ಣುವ ಆಹಾರ, ನಮ್ಮ ಜೀವನ ಶೈಲಿಗನುಗುಣವಾಗಿ ಸತ್ಕರಿಸುವುದು ನಮ್ಮ ಕರ್ತವ್ಯ. ದೇವರು ಕೇವಲ ನಾವಿಟ್ಟ ಸಮರ್ಪಣೆಯ ಅನಿಲವನ್ನು ಮಾತ್ರ ಗ್ರಹಣ ಮಾಡುತ್ತಾರೆಯೇ ವಿನಾ ಆ ಸಮರ್ಪಣೆ ಖಾಲಿ ಮಾಡುವುದಿಲ್ಲ. ಹಾಗೆಂದು ನೀರನ್ನು ಮಾತ್ರ ಸಮರ್ಪಿಸುವುದು ಸರಿಯಾಗುತ್ತದೆಯೇ? ಏನೋ ಒಂದು ಭಾಷಣ ಬಿಗಿಯಬಹುದೇ ವಿನಾ ಇದು ಕಾರ್ಯರೂಪವಲ್ಲ. ದೇವಾನ್ನ ಭಕ್ಷಣೆ ಮಾಡಲು ನಾವು ತಯಾರು ಮಾಡಿದ ನೈವೇದ್ಯ ದೇವರಿಗೆ ಮೊದಲು ಸಮರ್ಪಣೆ ಆಗಬೇಕು. ಅದರಲ್ಲೊಂದು ಸಿಗುವ ಸಂತೋಷವೇ ಬೇರೆ. ಒಬ್ಬ ಸರ್ವಸಂಗ ಪರಿತ್ಯಾಗಿಗೆ ವಾಸಿಸಲು ಒಂದು bus stand ಕೂಡಾ ಸಾಕು. ಆದರೆ ಸ್ಥಾನ ಮಾನಾನುಸಾರ ಅವರವರಿಗೆ ಏನೇನು ಬೇಕೋ ಅದು ಇರಲೇಬೇಕು.
ಭೂತಾರಾಧನೆಯಾಗಲೀ, ನಾಗಾರಾಧನೆಯಾಗಲೀ ಒಂದು ನಿರ್ಧಿಷ್ಟ ಮೂಲ ಕಾರಣ ಇಲ್ಲದೆ ಸೃಷ್ಟಿಯಾಗಿಲ್ಲ. ನಾಗಾರಾಧನೆಯು ಪರಿಸರ ರಕ್ಷಣೆ, ಸಂಘಟನೆ, ನಿಧಿ ಸ್ಥಾಪನೆಗಾಗಿ ಜನರಲ್ಲಿ ಆಸ್ತಿಕತ್ವವನ್ನು ಮೂಡಿಸಲು ಇದ್ದಂತಹ ಒಂದು ಕಾರ್ಯ. ಇನ್ನು ಇದರ ನೆನಪಿಗಾಗಿ ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ, ಭಕ್ತಿ ಶ್ರದ್ಧೆ ಪರಸ್ಪರ ಬಂಧುತ್ವ ಘಟ್ಟಿಯಾಗಲೂ ಸಂಘಟಿಸಿ ಮಾಡುವಂತಹ ಕಾರ್ಯ. ಭೂತಾರಾಧನೆಯೂ ಸಮಾಜದಲ್ಲಿ ಸತ್ಯ ಧರ್ಮದ ಪಾಲನೆಗಾಗಿ ಹಿಂದೆ ಪ್ರಜೆಗಳಿಗಾಗಿ ದೇಹದಂಡನೆ ಮಾಡಿದ ವೀರ ಯೋಧರ ಸ್ಮರಣೆಗಾಗಿ ಮಾಡಿದಂತಹ ಒಂದೊಂದು ಭೂತಾಲಯಗಳು. ಅಲ್ಲಿ ಕಾಣುವ ’ಮೊಗ’, ಆಯುಧಗಳು’ ಆಯೋಧರ ಸ್ಮರಣೆಯ ಪ್ರತೀಕ. ಜನಪದೀಯವಾಗಿ ಹಾಡು(ಪಾಡ್ದನ) ರೂಪದಲ್ಲಿ ಜನರಿಗೆ ಒಂದು ಸಂದೇಶದ ಮೂಲಕ ಜನ ಜಾಗೃತಿ(Awareness) ಮೂಡಿಸುವ ಒಂದು ಕಾರ್ಯವಾಗಿದೆ. ಯಕ್ಷಗಾನ, ಹರಿಕಥೆಗಳೂ ಇದರ ಇನ್ನೊಂದು ರೂಪಗಳು. ಭೂತ, ನಾಗಾರಾಧನೆಗಳ ಇನ್ನೊಂದು ಪಾರಮಾರ್ಥಿಕ(transparent body- ಸೂಕ್ಷ್ಮ ಶರೀರ) ರೂಪವೇ ಬೇರೆ. ದಿಕ್ಪಾಲಕ ಶಕ್ತಿ ಸ್ವರೂಪ ದೇವತೆಗಳ ಪ್ರೀತ್ಯರ್ಥವಾಗಿ ಈ ಆರಾಧನೆಗಳಿರುತ್ತವೆ. ಸಮಾಜದಲ್ಲಿ ಈ ಆರಾಧನೆಯಿಂದ ಎಷ್ಟೋ ಜನ ಮನಃಶಾಂತಿ ಪಡೆದುದರಿಂದಲೇ ಇಂದಿಗೂ ಈ ಆರಾಧನೆಯು ಮಹತ್ವ ಕಳೆದುಕೊಳ್ಳದೆ ನಡೆಯುತ್ತದೆ.
ಆಡಂಬರ, ಅಬ್ಬರಗಳು ಮೇಲ್ನೋಟಕ್ಕೆ ಖರ್ಚು ಎಂದು ಕಂಡರೂ ಜನ ಸಂತುಷ್ಟರಾಗುತ್ತಾರೆ. ಇಂತಹ ಒಂದು ಸಂಪ್ರದಾಯವನ್ನು ಮೂಢನಂಬಿಕೆ, ಇದರ ಹಣದಲ್ಲಿ ರಸ್ತೆ ಮಾಡಬಹುದು, ಕುಡಿಯುವ ನೀರು ಸರಬರಾಜು ಮಾಡಬಹುದು ಎಂದು ಅವರವರ ಮೂಗಿನ ನೇರಕ್ಕೆ ಹೇಳುವುದು ಬಾಲಿಷ ಆಗುತ್ತದೆ. ನಿತ್ಯವೂ ಮುದ್ದೆಯೋ, ಗಂಜಿಯೋ ತಿಂದು, ಇಂತಹ ಗುರೂಜಿಗಳ ಭಾಷಣಕ್ಕೆ ಖರ್ಚು ಮಾಡುವುದನ್ನೂ ನಿಲ್ಲಿಸಿ ಊರಿನ ಅಭಿವೃದ್ಧಿ ಕಾರ್ಯವನ್ನು ಮಾಡಬಹುದು ಎಂದೂ ಸಲಹೆ ನೀಡಿದರೆ ಅದು ಎಷ್ಟು ಪ್ರಯೋಜನ ಆದೀತು ಎಂದು ಯೋಚಿಸಲಿ. ಮಕ್ಕಳ ಹುಟ್ಟು ಹಬ್ಬವನ್ನು ಕೇವಲ ಶರಬತ್ತು ಹಂಚಿ ಮಾಡಬಹುದು ಎಂದರೆ ಹೇಗೆ. ಜನರಿಗೆ ಸಂಪಾದನೆ ಇದೆ, ಮನೋರಂಜನೆಯೊಂದಿಗೆ ಪಾರಮಾರ್ಥಿಕ ಸಂತೋಷವನ್ನು ಪಡೆಯುವುದಕ್ಕೆ ಅಡ್ಡಿ ಮಾಡಬೇಡಿ ಎಂದು ನಮ್ಮ ಪ್ರಾರ್ಥನೆ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post