ಚಳ್ಳಕೆರೆ: ಜನಸಂಘ ಎಂಬ ಸೈದ್ದಾಂತಿಕ ಪಕ್ಷವನ್ನು ಸ್ಥಾಪಿಸಿ ದೇಶದ ಪ್ರಗತಿಗೆ ತಮ್ಮ ಜೀವನವನ್ನು ಅರ್ಪಿಸಿದ ಕೀರ್ತಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಎನ್. ಜಯರಾಂ ತಿಳಿಸಿದರು.
ನಗರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ನಡೆದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬಂಡವಾಳ ಶಾಹಿಗಳು ಮತ್ತು ಆಡಳಿತಶಾಹಿಗಳ ಕೈಯಲ್ಲಿ ನಡೆಯುತ್ತಿದ್ದ ಸ್ವಾರ್ಥ ಆಡಳಿತವನ್ನು ಸರಿದಾರಿಗೆ ತರುವ ಪ್ರಯತ್ನ ಮುಖರ್ಜಿ ಅವರಿಂದ ನಡೆದಿತ್ತು. ಇದರ ಫಲವಾಗಿ ಸಮಾನ ಮನಸ್ಕರ ಜತೆಗೂಡಿ ಜನಸಂಘ ಎಂಬ ಸೈದ್ದಾಂತಿಕ ಪಕ್ಷವನ್ನು ಸ್ಥಾಪಿಸಿದ್ದರು. ಈ ಮೂಲಕ ಸಮರ್ಥ ಪ್ರಜಾಪ್ರಭುತ್ವದ ಬೆಳವಣಿಗೆಗೆ ನಾಂದಿ ಹಾಡಿದ್ದರು ಎಂದವರು ಹೇಳಿದರು.
ಜನಸಂಘದ ಸ್ಥಾಪನೆ ನಂತರ ದೇಶದ ಸಾರ್ವತ್ರಿಕ ಚುನಾವಣೆ ಎದುರಿಸುವ ಮೂಲಕ ಲೋಕಸಭೆಗೆ ತಮ್ಮ ಪಕ್ಷದ ಸಂಸದರನ್ನು ಕಳಿಸಿ ಉತ್ತಮ ಸಾಧನೆ ತೋರಿದ್ದರು. ನಂತರ ರಾಜಕೀಯ ಮುತ್ಸದ್ದಿ ವಾಜಪೇಯಿ ಸೇರಿದಂತೆ ಅನೇಕ ಧುರೀಣರು ಜನಸಂಘದಿಂದ ಆಯ್ಕೆಯಾಗಿ ದೇಶದ ರಾಜಕಾರಣದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದರು. ನಂತರ ಜನಸಂಘವನ್ನು ಭಾರತೀಯ ಜನತಾ ಪಕ್ಷವೆಂದು ಪರಿವರ್ತಿಸಿ ದೇಶದ ಉದ್ದಗಲಕ್ಕೂ ಸಂಘಟನೆಯಲ್ಲಿ ತೊಡಗಲಾಯಿತು. ಇಂದು ಈ ಪಕ್ಷ ದೇಶದ ಸಮರ್ಥ ಪಕ್ಷವಾಗಿ ರೂಪುಗೊಂಡು ಉತ್ತಮ ಆಡಳಿತ ನೀಡುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಬಿ.ಎಸ್. ಶಿವಪುತ್ರಪ್ಪ ಮಾತನಾಡಿ, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸಾವಿನ ಬಗ್ಗೆ ಅಂದಿನ ಆಡಳಿತ ಪಕ್ಷ ಸರಿಯಾದ ತನಿಖೆ ಕೈಗೊಳ್ಳುವ ಪ್ರಯತ್ನ ಮಾಡಲಿಲ್ಲ. ಕೇವಲ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿದ್ದ ಜವಾಹರ ಲಾಲ್ ನೆಹರೂ ಪಕ್ಷಪಾತ ಧೋರಣೆ ಅನುಸರಿಸುವುದರ ಮೂಲಕ ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದ್ದರು. ಆದರೆ ಡಾ.ಶ್ಯಾಮ್ ಪ್ರಸಾದ್ ಅವರ ಬಲಿದಾನ ವ್ಯರ್ಥವಾಗಲು ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.
ನಗರ ಸಭೆ ಮಾಜಿ ಸದಸ್ಯ ಎಂ. ಶಿವಮೂರ್ತಿ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ. ತಿಪ್ಪೇಸ್ವಾಮಿ, ದೊಡ್ಡೇರಿ ಶಕ್ತಿ ಕೇಂದ್ರದ ಅಧ್ಯಕ್ಷ ಜಿ.ಕೆ. ಈರಣ್ಣ, ಮುಖಂಡರಾದ ವಿಜಯೇಂದ್ರ, ಈಶ್ವರನಾಯಕ, ಮನೋಜ್, ಕಾಟಪ್ಪನಹಟ್ಟಿ ವೀರೇಶ್, ಸದಾನಂದ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)

















