ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ತಾಲೂಕು ಉತ್ತರ ಕನ್ನಡದ ಶಿರಸಿ. ಕನ್ನಡದ ಮೊದಲ ರಾಜಮನೆತನವಾದ ಕದಂಬರು ರಾಜಧಾನಿಯನ್ನಾಗಿಸಿಕೊಂಡು ವೈಭವದಿಂದ ಮೆರೆದ ಸ್ಥಳವಿದು. ಪಶ್ಚಿಮ ಘಟ್ಟದ ಮಡಿಲಿನಲ್ಲಿ ಬರುವ ಈ ಶಿರಸಿ ಪ್ರಾಕೃತಿಕ ಸೊಬಗನ್ನು ಹೊದ್ದು ಮಲಗಿದೆ.
ಧಾರ್ಮಿಕವಾಗಿಯೂ ಇದು ಹೆಸರಾಗಿದ್ದು ಸಹಸ್ರ ಲಿಂಗದ ಮತ್ತು ಮಾರಿಕಾಂಬೆ ದೇಗುಲದ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಶಿರಸಿ ಎಂದ ಕೂಡಲೇ ಬಾಯಿಗೆ ಬರುವ ನಂತರದ ಪದವೇ ಮಾರಿಕಾಂಬಾ.
ಇಂತಹ ಶಿರಸಿಯ ಈ ಪ್ರತಿಭೆಯೇ ಸ್ನೇಹಶ್ರೀ ಹೆಗಡೆ. ದತ್ತಾತ್ರೇಯ ಹೆಗಡೆ ಮತ್ತು ಬಿಂದು ಹೆಗಡೆ ಅವರ ಪುತ್ರಿಯಾದ ಈಕೆ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ 8ನೆಯ ತರಗತಿಯಲ್ಲಿ ಓದುತ್ತಿದ್ದಾಳೆ.
ಬಹುಮುಖ ಪ್ರತಿಭೆಯಾಗಿರುವ ಈಕೆ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಛಾಪು ಮೂಡಿಸುವ ರೀತಿಯಲ್ಲಿ ಬೆಳೆಯುತ್ತಿದ್ದಾಳೆ ಎನ್ನುವುದು ಮಲೆನಾಡಿನ ಹೆಮ್ಮೆಯ ಸಂಗತಿ.
ಈಕೆ ಬೆಂಕಿಯೊಂದಿಗೆ ಸರಸವಾಡುವ ರಿಂಗ್ ಡಾನ್ಸ್ ನೋಡುವಾಗ ಮೈ ಜಮ್ ಎನ್ನದಿರದು. ಮೊಳೆ ಮೇಲೆ ಮಡಿಕೆ ಮೇಲೆ ಮಾಡುವ ಈಕೆಯ ರಿಂಗಿನಾಟ ರಾಜ್ಯದಾದ್ಯಂತ 60ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನ ಕಂಡಿದೆ.
ಭರತನಾಟ್ಯ ಜ್ಯೂನಿಯರ್ ಅಭ್ಯಾಸ ಮಾಡಿ ಈಗ ಸೀನಿಯರ್ ಸೀನಿಯರ್ ಅಭ್ಯಾಸ ಮಾಡುತ್ತಿರುವ ಈಕೆ, ಯಕ್ಷಗಾನವನ್ನು ಸಹ ಅಭ್ಯಾಸ ಮಾಡುತ್ತಿದ್ದಾಳೆ. ಇದರೊಂದಿಗೆ ಯೋಗ ಕೂಡ ಅಭ್ಯಾಸ ಮಾಡುತ್ತಿರುವ ಸ್ನೇಹಶ್ರೀ ಇದರಲ್ಲಿ ರಾಜ್ಯ ಮಟ್ಟಕ್ಕೆ ಕೂಡಾ ಆಯ್ಕೆ ಆಗಿದ್ದಳು.
ಪ್ರತಿವರ್ಷ ರಾಜ್ಯ ಸರ್ಕಾರ ನೀಡುವ ಅಸಾಮಾನ್ಯ ಪ್ರತಿಭಾವಂತ ಮಕ್ಕಳಿಗೆ ನೀಡಲಾಗುವ ಡಿಸ್ಟ್ರಿಕ್ಟ್ ಅವಾರ್ಡ್’ಗೆ ಸಹ ಈಕೆ ಆಯ್ಕೆ ಅಗಿದ್ದಾಳೆ. ಇದರೊಂದಿಗೆ ಕಾನ್ಸೂರಿನ ಸೇವಾರತ್ನ ಟ್ರಸ್ಟ್’ನವರು ನೀಡುವ ಪ್ರತಿಭಾ ಪುರಸ್ಕಾರ ಸಹ ಪಡೆದಿದ್ದಾಳೆ.
ಇವಳ ಈ ಸಾಧನೆಯ ಹಾದಿ ಹೀಗೆ ಮುಂದುವರೆಯಲಿ ಈಕೆಯ ಭವಿಷ್ಯ ಉಜ್ವಲವಾಗಿರಲಿ ಎನ್ನುವ ಆಶಯ ನಮ್ಮದು.
ಲೇಖನ, ಚಿತ್ರಕೃಪೆ, ವೀಡಿಯೋ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸಹಕಾರ: ರೋಹನ್ ಪಿಂಟೋ ಗೇರುಸೊಪ್ಪ
ಮಾಹಿತಿ: ಸುದೇಶ್ ಜೈನ್ ಮಕ್ಕಿಮನೆ

















