ಸೊರಬ: ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ವಿರೋಧಿ ಪೂರ್ವಭಾವಿ ಸಭೆ ಪಟ್ಟಣದಲ್ಲಿ ನಡೆಯಿತು.
ಅವೈಜ್ಞಾನಿಕ ಯೋಜನೆಯನ್ನು ಮಲೆನಾಡಿಗರು ಸಂಪೂರ್ಣ ವಿರೋಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಶರಾವತಿ ನದಿಯಿಂದ ನೀರು ಒಯ್ಯಲು ಬಿಡಬಾರದು. ನೀರು ಒಯ್ಯದಂತೆ ವಿವಿಧ ಹಂತದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಿದ್ದು, ಪಕ್ಷ, ಧರ್ಮ, ಜಾತಿ, ಪ್ರತಿಷ್ಟೆ ಬದಿಗೊತ್ತಿ ಈ ನೆಲದಲ್ಲಿ ವಾಸಿಸುವ, ಉಸಿರಾಡುವ ಎಲ್ಲರ ಸಹಕಾರವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘಸಂಸ್ಥೆ, ಹಿರಿಯರು, ಮುಖಂಡರು, ಚಿಂತಕರನ್ನೊಳಗೊಂಡ ಸಂಘಟನಾ ಚಟುವಟಿಕೆ ತುರ್ತು ಆಗಬೇಕಿದ್ದು, ವಿವೇಚನಾ ಸಭೆ ಕರೆಯಬೇಕು, ಆ ಸಭೆ ಸಾಗರದ ಪರಿಸರ ತಜ್ಞರ ಸಮ್ಮುಖದಲ್ಲಿ ನಿರ್ಧಿಷ್ಟ ರೂಪ ಪಡೆಯಬೇಕು ಎಂದು ತೀರ್ಮಾನಿಸಲಾಯಿತು.
ತಾಲೂಕು ವಿವಿಧ ಧರ್ಮ ಗುರುಗಳ ಸಾಂಗತ್ಯದಲ್ಲಿ, ವಿವಿಧ ಸಂಘಟಕರ ನಿರ್ದೇಶನದಲ್ಲಿ ಪ್ರತಿಭಟನೆಯ ರೂಪುರೇಷೆ ತಯಾರಾಗಬೇಕು. ಪ್ರಸ್ತುತ ಪಟ್ಟಣ ಸಂಘಟನಾ ಚಟುವಟಿಕೆಯನ್ನು ಡಿಆರ್’ಎಸ್’ನ ಪ್ರಶಾಂತ್ ದೊಡ್ಮನೆ, ಗ್ರಾಮಾಂತರ ಸಂಘಟನೆಯ ಕಾರ್ಯ ಚಟುವಟಿಕೆಯ ಜವಾಬ್ಧಾರಿಯನ್ನು ಬಿಎಸ್’ಎನ್’ಡಿಪಿ ಪ್ರವೀಣ್ ಹಿರೇ ಇಡಗೋಡು ನಿರ್ವಹಿಸಲು ಒಪ್ಪಿಗೆ ಸೂಚಿಸಿದರು. ಇನ್ನುಳಿದಂತೆ ಎಲ್ಲ ಟೌನ್ ಪಂಚಾಯ್ತಿ ಸದಸ್ಯರನ್ನು, ಎಲ್ಲ ಸಂಘ ಸಂಸ್ಥೆಯವರನ್ನು ಬುಧವಾರದ ಸಭೆಗೆ ಕರೆಯಬೇಕು, ಜುಲೈ 2ನೇ ತಾರೀಖು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಬೇಕಿದ್ದು, ಅಂದು ಸಾಗರದ ಅಖೀಲೇಶ್ ಚಿಪ್ಪಳಿ, ಸಾರಾ ಧನುಷ್, ಏಸು ಪ್ರಕಾಶ್ ಹಾಗೂ ಕುಗ್ವೆ ಹರ್ಷಕುಮಾರ್ ಅವರನ್ನು, ತಾಲೂಕಿನ ಎಲ್ಲ ಧರ್ಮಗಳ ಗುರುಗಳನ್ನು ಕರೆಯುವುದೆಂದು ನಿರ್ಣಯಿಸಲಾಯಿತು.
ತುರ್ತು ಸಂಘಟನೆಯಾಗಿರುವುದರಿಂದ ಎಲ್ಲರನ್ನು ಖುದ್ದು ಕರೆಮಾಡಲು ಆಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಮಾಧ್ಯಮದ ಮೂಲಕ ಬರುವ ಕರೆಯನ್ನು ಖುದ್ದು ಕರೆಯಿಂದ ಅರಿತು ತಪ್ಪದೇ ಆಗಮಿಸುವ ಮೂಲಕ ಕೈಜೋಡಿಸಬೇಕು ಎಂದು ಈ ಸಂದರ್ಭದಲ್ಲಿ ವಿನಂತಿಸಿಕೊಳ್ಳಲಾಯಿತು.
ಬಿಎಸ್’ಎನ್’ಡಿಪಿಯ ಜಿಲ್ಲಾ ಪ್ರಮುಖ ಪ್ರವೀಣ್ ಹಿರೇ ಇಡಗೋಡು, ಜೆಸಿಐನ ಗೋ ಗ್ರೀನ್ ನ ವಿಶೇಷ ವಲಯಾಧಿಕಾರಿ ದೊಡ್ಡಮನೆ ಪ್ರಶಾಂತ್, ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಹಸಿರು ಮಡಿಲಿನ ಸೈಯದ್ ಅನ್ಸರ್, ಉದ್ರಿ ಎಂ. ಕರುಣಾಕರ, ಗ್ಯಾರೇಜ್ ಮಾಲೀಕರ, ಕಾರ್ಮಿಕ ಸಂಘದ ಜಗದೀಶ್ ಕಕ್ಕರಸಿ, ಇಂಧೂದರ ಯಲವಳ್ಳಿ, ಬಿಳವಗೋಡು ಶಿವಕುಮಾರ್, ದೈವಜ್ಞ ಬ್ರಾಹ್ಮಣ ಸಮಾಜದ ದತ್ತಾತ್ರೇಯ, ಸಾಹಿಹೋವೇ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮತ್ತಿತರರು ಇದ್ದರು.
(ವರದಿ: ಮಧುರಾಮ್, ಸೊರಬ)

















