ಈಗಂತೂ ಮಗುವಿನಿಂದ ಹಿಡಿದು ವಯೋವೃದ್ಧರ ತನಕ ಪ್ರವಾಸಗಳ ಸನ್ನಿ ಹಿಡಿದಿದೆ. ಸದಾ ಪ್ರವಾಸ ಮಾಡುತ್ತಲೇ ಇರಬೇಕು, ಅದನ್ನು ಬೇರೆಯವರೂ ಮೆಚ್ಚಬೇಕು ಅನ್ನುವ ಗೀಳು ಅಂಟಿಸಿಕೊಂಡ ಪೀಳಿಗೆ ಜಾಸ್ತಿ. ಅದರಲ್ಲೂ ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಫೋನುಗಳು ದೊರಕುತ್ತಿರುವ ನಂತರವತೂ ಜೀವನದ ಪ್ರತಿ ಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಹೆಚ್ಚು ಶಹಬ್ಬಾಸ್‌ಗಿರಿ, ಮೆಚ್ಚುಗೆ ಮಾತುಗಳ ಪಡೆಯುವ ಹುಚ್ಚು ಅತಿರೇಕಕ್ಕೆ ಹೋಗಿದೆ.
ಅಪಾಯ ತಂದೊಡ್ಡುವ ಸೆಲ್ಫಿ ಫೋಟೋಗಳ ಕಥೆಯು ಇದರ ಒಂದು ಭಾಗ. ಹೆಚ್ಚು ಮೆಚ್ಚುಗೆ ಸಿಗುತ್ತದೆ ಎಂದು ಅನಾಹುತಕಾರಿ ಕೆಲಸ ಮಾಡುವುದು ಅಥವಾ ತನ್ನ ಚಿತ್ರಗಳ ಯಾರು ಮೆಚ್ಚುವುದಿಲ್ಲ ಎಂದು ಕೀಳರಿಮೆಗೆ ಒಳಗಾಗುವುದು ಸರ್ವೇ ಸಾಮಾನ್ಯವಾಗಿದೆ.
ಪ್ರವಾಸಗಳ ವಿಷಯ ಮುಂದುವರೆದಂತೆ, ಪ್ರತಿ ಕ್ಷೇತ್ರದಲ್ಲೂ ವಾರಾಂತ್ಯಗಳಿಗೆ ಕಾಯುವ ದೊಡ್ಡ ಬಳಗವೇ ಇದೆ. ಅದು ತಪ್ಪು ಅಂತೇನಿಲ್ಲ. ಖುಷಿಯ ಕ್ಷಣಗಳ ಸೃಷ್ಟಿಸಿ, ಸವಿಯುವುದು ಜೀವನದ ಒಂದು ಭಾಗವಾಗಿದೆ. ಈ ರೋಮಾಂಚನಕಾರಿ ಕೆಲಸಗಳನ್ನು ಮಾಡುವ ಗೀಳು ಅಂಟಿಸಿಕೊಂಡು ಬದುಕನ್ನು ಅಪಾಯಕ್ಕೆ ಒಡ್ಡಿಕೊಳ್ಳಬಾರದು. ಅಂತಹ ಸಂದರ್ಭಗಳಲ್ಲಿ ನಂಬಿರುವ ಜೀವಗಳ ಬಿಟ್ಟು ಹೊರಡುವ ಕ್ಷಣ ಎಲ್ಲಿಂದಲೋ ಬಂದು ಕಣ್ಣೆದುರು ನಿಂತು ಬಿಡುತ್ತದೆ. ಅಂತಹುದೇ ಒಂದು ಘಟನೆ ನಡೆದು ಹೋಗಿದೆ. ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ವೃತ್ತಿ ಜೀವನದಲ್ಲಿ ಲಕ್ಷಾಂತರ ಜನರ ಗಮ್ಯ ತಲುಪಿಸಿದ ವ್ಯಕ್ತಿಯ ಬಾಳ ದೋಣಿ ದಾರಿ ತಪ್ಪಿದೆ. ಅವನ ಹಾದಿ ಹಿಡಿದು ನಾಳೆಗಳ ನೊಗ ಹೊರಬೇಕಾದ ಚಂದದ ಮಗ ವಿಧಿಯ ಮಾತಿಗೆ ಓಗೊಟ್ಟು ನಡೆದಿದ್ದಾನೆ. ಕನಸುಗಳ ಜೋಪಡಿಯಲ್ಲಿ ನಾಳೆಗಳ ಬೆಳಕು ಮಾಯವಾಗಿದೆ. ಕತ್ತಲೆ ದಾಂಗುಡಿಯಿಟ್ಟಿದೆ.
ಅಪಘಾತಗಳ ಸುದ್ದಿ ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಆದರೆ ಅದರಲ್ಲಿ ಶೇ.75ರಷ್ಟು ಘಟನೆಗಳು ಅಜಾಗರೂಕತೆಯಿಂದಲೇ ದುರಂತಕ್ಕೆ ದಾರಿಯಾಗುತ್ತವೆ ಎಂಬುದು ಅಷ್ಟೇ ಸತ್ಯ. ಇತ್ತೀಚಿನ ಒಂದು ಘಟನೆ. ವಾರಾಂತ್ಯಕ್ಕೆ ಊಟಿಗೆ ಹೊರಡಲು ಯೋಜನೆ ಹಾಕಿಕೊಂಡ ಯುವಕ ಯುವತಿಯರು ಅನಾಮತ್ತಾಗಿ ಬೆಂಗಳೂರು, ಶಿವಮೊಗ್ಗ ಮತ್ತು ಮೈಸೂರುಗಳಲ್ಲಿರುವ ಸ್ನೇಹಿತರ, ಬಂಧುಗಳ ಸಂಪರ್ಕಿಸಿ ಹೊರಡಲು ಅನುವಾಗುತ್ತದೆ. ತಂಡದ ಕೊನೆಯ ಸದಸ್ಯನ ಕರೆತರಲು ಮೈಸೂರಿನ ಬಸ್ ನಿಲ್ದಾಣಕ್ಕೆ ತೆರಳುವ ಇಪ್ಪತ್ತೇಳರ ಹರೆಯದ ಯುವಕ ಬೈಕ್’ನಲ್ಲಿ ತೆರಳುತ್ತಾನೆ.
ಸಮಯ ಸುಮಾರು ಬೆಳಗಿನ ಜಾವ 2.45. ಇನ್ನೇನು ಕರೆದುಕೊಂಡು ಹೊರಡಬೇಕು ವೇಗವಾಗಿ ಬಂದ ಕಾರು ಅವನನ್ನು ಅರೆ ಜೀವ ಮಾಡಿಬಿಡುತ್ತದೆ. ಸುಮಾರು ಆರು ದಿನಗಳಷ್ಟು ಒದ್ದಾಡುವ ಆ ಎಳೆ ಜೀವ ಬಾರದ ಲೋಕಕ್ಕೆ ಹೊರಟು ಹೋಗುತ್ತದೆ. ಯಾರನ್ನು ಹೊಣೆ ಮಾಡುವುದು? ಪ್ರವಾಸಗಳ ಹುಚ್ಚು ಹಿಡಿಸಿಕೊಂಡ ಆ ಯುವಕ ಯುವತಿಯರನ್ನೇ? ಅಥವಾ ಮಧ್ಯರಾತ್ರಿ ಬಂದ ಸದಸ್ಯನ? ಅಥವಾ ಅತಿ ವೇಗವಾಗಿ ಬಂದು ಅಪಘಾತ ಮಾಡಿ ನಿಲ್ಲಿಸದೇ ಹೋದ ಆ ಆಗಂತುಕನನ್ನೇ? ಅಥವಾ ಯಾವುದೇ ಸಿಸಿಟಿವಿ ದಾಖಲೆ ಸಿಗಗೊಡದಂತೆ ಮಾಡಿದ ಆ ತೆರೆಮರೆಯ ವ್ಯವಸ್ಥೆಯನ್ನೇ? ಈ ವ್ಯವಸ್ಥೆಯೇ ಹಾಗೆ ಶಕ್ತಿವಂತರ ಗುಲಾಮಗಿರಿ ಮಾಡುತ್ತದೆ. ಅಮಾಯಕರ ಉಸಿರು ಬಿಗಿಯುತ್ತದೆ.
ಕಣ್ಣೆದುರೇ ಎದೆಯೆತ್ತರಕ್ಕೆ ಬೆಳೆದ ಮಗ, ಕಂಗಳಲಿ ಕನಸುಗಳ ಹೊತ್ತು ತಿರುಗಿದ ಮಗ ಇಂದು ಅದೇ ಮನೆಯ ಅಂಗಳದಲ್ಲಿ ಅತ್ತು ಕರೆದರೂ ಓಗೊಡದೆ ಹೆಣವಾಗಿ ಮಲಗಿದ್ದಾನೆ. ತಂದೆಯ ಕಣ್ಣೀರು ಬತ್ತಿ ಹೋಗಿದೆ. ಈ ಅಪಘಾತಗಳಿಗಿಂತಲೂ ಘೋರ ಏನು ಗೊತ್ತಾ? ಜೀವಂತ ಇರುವಾಗಲೇ ಇನ್ನು ಚಿಕಿತ್ಸೆ ಮಾಡಲಾಗದು ಎಂದು ಹೇಳಿದಾಗ ವಾಪಸ್ಸು ಮನೆಗೆ ತರುವುದು. ಊಹಿಸಿದರೆ ಕರುಳು ಚುರುಕ್ ಅನ್ನುತ್ತದೆ. ಇನ್ನು ಆ ತಂದೆಯ ಗತಿ ಏನು? ಕಳೆದ ವರ್ಷ ಮಗಳ ಮದುವೆ ಮಾಡಿ, ಮಗನ ಓದಿಸುತ್ತ, ಚಾಲಕ ವೃತ್ತಿಯ ಜೊತೆ ಒಂದಿಷ್ಟು ವ್ಯವಸಾಯ ಮಾಡಿ ನೂರಾರು ಆಸೆಗಳ ಬುತ್ತಿ ಕಟ್ಟಿಕೊಂಡು ಕೂತಿದ್ದ ಆ ಕುಟುಂಬ ಅಕ್ಷರಶಃ ನುಚ್ಚುನೂರಾಗಿದೆ.
ನಾಲ್ಕು ದಿನ ಮರುಗುವ ಈ ಸಮಾಜ ಮರೆತು ಬಿಡುತ್ತದೆ. ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ. ಒಂದು, ಇಂತಹ ದೊಡ್ಡ ಅಪಘಾತ ನಡೆದರೂ ಮೈಸೂರು ಮಹಾನಗರಿಯ ಮುಖ್ಯ ರಸ್ತೆಯಲ್ಲಿ ಒಂದೂ ದಾಖಲೆ ಸಿಗದೇ ಹೋದದ್ದು. ಎಷ್ಟು ನಿರ್ದಾಕ್ಷಿಣ್ಯವಾಗಿ, ವ್ಯವಸ್ಥಿತವಾಗಿ ಘಟನೆಯನ್ನು ಮುಚ್ಚಿ ಹಾಕಿದಿರಿ? ಛೆ, ನಿಮಗೆ ನನ್ನ ಧಿಕ್ಕಾರ.
ಎರಡು, ಅರಿತೋ ಅರಿಯದೆಯೋ ಪೂರ್ವ ತಯಾರಿಗಳಿಲ್ಲದೇ, ಬೇಜವಾಬ್ದಾರಿಯಿಂದ ಕೈಗೊಳ್ಳುವ ಪ್ರವಾಸಗಳ ಕುರಿತು. ಅದು ತಪ್ಪು ಎಂದಲ್ಲ. ಅದಕ್ಕೂ ಒಂದು ಮಿತಿ ಇರಲಿ. ಬೆಳಗಿನ ಜಾವ, ರಾತ್ರಿ ವೇಳೆಯ ದೂರ ಪ್ರಯಾಣಗಳಿಂದ ದೂರ ಇರುವುದು ಒಳ್ಳೆಯದು. ನೀರವ ಮೌನ ತುಂಬಿದ ಅಮಾಯಕನ ಸಾವಿನ ಆ ಮನೆ ಅಜಾಗರೂಕತೆ, ವಿಧಿಯ ವಿಪರ್ಯಾಸ, ತಂದೆಯ ಕಣ್ಣೀರು ಎಲ್ಲವನ್ನೂ ಕಣ್ಣೆದುರೇ ತಂದು ನಿಲ್ಲಿಸಿ ಬಿಡುತ್ತದೆ. ದಯವಿಟ್ಟು ಪ್ರವಾಸಗಳಿಗೆ ಎಷ್ಟು ಸಾಧ್ಯವೋ ಅಷ್ಟು ಸುರಕ್ಷಿತವಾಗಿ ಹೊರಡಿ. ನಿಮ್ಮನ್ನು ನೀವೇ ಕಾಯಬೇಕು ಮತ್ತು ನಿಮ್ಮನ್ನು ನಂಬಿದವರನ್ನು ಸಹ. ಮತ್ತು ಹಣದ ಅವಶ್ಯಕತೆ ಇದೆ ಎಂದಾಗ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು.
-ಲೇಖನ: ಸಚಿನ್ ಪಾರ್ಶ್ವನಾಥ್,
ಬ್ಯಾಕೋಡು, ಸಾಗರ(ತಾ.), ಶಿವಮೊಗ್ಗ
Discussion about this post