ಬೆಂಗಳೂರು: ನಗರದ ಇಟ್ಟುಮಡುವಿನ ಶ್ರೀ ಕ್ಷೇತ್ರ ಭವಾನಿಶಂಕರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಷಾಢ ಮಾಸದ ಕೊನೆಯ ಶುಕ್ರವಾರ ಮಹಾಚಂಡಿಕಾ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ತಾಯಿ ಶ್ರೀ ಪ್ರಸನ್ನ ಪಾರ್ವತಿ ದೇವಿಗೆ ಹಾಗೂ ಶ್ರೀ ಭವಾನಿ ಶಂಕರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕರಾದ ಕ್ಷೇತ್ರ ಪುರೋಹಿತ ಶ್ರೀವತ್ಸ ದೀಕ್ಷಿತ್ ಅವರು ಧಾರ್ಮಿಕ ವಿಧಿ ನೆರವೇರಿಸಿದರು.
ಬೆಳಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಳದ ಮುಂಭಾಗದಲ್ಲಿ ಹೋಮ ಕುಂಡ ನಿರ್ಮಿಸಿ ಚಂಡಿಕಾಹೋಮ ನೆರವೇರಿಸಿದರು. ದೇವಾಲಯದ ಆವರಣದಲ್ಲಿ ಪೂಜಾ ಕುಣಿತ ಏರ್ಪಡಿಸಲಾಗಿತ್ತು.
ಕಳಶ ಪ್ರತಿಷ್ಠಾಪನೆ:
ಗುರುವಾರ ದಂದು ಮಹಾ ಕಾಳಿ, ಮಹಾಲಕ್ಷ್ಮೀ , ಮಹಾಸರಸ್ವತಿ ದೇವತೆಗಳ (ಹೆಸರಿನಲ್ಲಿ)ಮೂರು ಕಳಶ ಪ್ರತಿಷ್ಠಾಪನೆ ಮಾಡಿ, ಚಂಡಿ ಪಾರಾಯಣ ನಡೆಸಲಾಯಿತು.
ಚಂಡಿಕಾ ಯಾಗದ ಫಲ:
ಮಹಾಕಾಳಿ, ಮಹಾಲಕ್ಷ್ಮೀ , ಮಹಾ ಸರಸ್ವತಿ ದೇವತೆಗಳ (ಹೆಸರಿನಲ್ಲಿ)ಮೂರು ಕಳಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ರೀತಿ ಕಳಶ ಪ್ರತಿಷ್ಠಾಪನೆ ಮಾಡಿ ಚಂಡಿಕಾ ಯಾಗ ಮಾಡುವುದರಿಂದ ಮಹಾಕಾಳಿ, ಮಹಾ ಲಕ್ಷ್ಮೀ , ಮಹಾ ಸರಸ್ವತಿ ದೇವತೆಗಳ ಅನುಗ್ರಹ ಸಿಗುತ್ತದೆ ಹಾಗೂ ಸಕಲ ಇಷ್ಟರ್ಥಾಗಳು ನೆರವೇರುತ್ತದೆ ಎನ್ನುತ್ತಾರೆ ದೇವಾಲಯದ ಶ್ರೀವತ್ಸ ದೀಕ್ಷಿತ್ ಅವರು.
ಮಹಾಚಂಡಿಕಾ ಹೋಮ ನೆರವೇರಿಸಿ ದೇಶದ ಹಿರಿಮೆ, ದೇಶದ ಗಡಿ ಕಾಯುವ ಯೋಧರಿಗೆ ವಿಶೇಷ ಶಕ್ತಿ ವೃದ್ಧಿಗೆ ಹಾಗೂ ದೇಶದ ಬೆನ್ನೆಲುಬುಗಳಾದ ರೈತರಹಿತಕ್ಕಾಗಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಸಂಮೃದ್ಧ ಬೆಳೆಯಾಗಲಿ ಎಂದು ಪೂಜೆ ಸಲ್ಲಿಸಲಾಯಿತು.
ದೇವಾಲಯದ ಬಗ್ಗೆ:
ಬೆಂಗಳೂರು ನಗರದ ಜನ ದಟ್ಟಣೆಯ ನಡುವೆಯೂ ಮನಸ್ಸಿ ಗೊಂದಿಷ್ಟು ಆಹ್ಲಾದ ನೀಡುವ, ಮನದ ಬೇಗೆ ತಣಿಸುವ ದೇಗುಲವೊಂದು ಇಟ್ಟಮಡುವಿನಲ್ಲಿದೆ.
ಬನಶಂಕರಿ 3 ನೆಯ ಹಂತದಲ್ಲಿರುವ ಇಟ್ಟಮಡುವಿನ ಬಸ್ ನಿಲ್ದಾಣದಿಂದ ಕೊಗಳತೆಯ ದೂರದಲ್ಲಿರುವ ಭವಾನಿಶಂಕರ ದೇಗುಲ ತೀರಾ ಪ್ರಾಚೀನವಾದುದೇನಲ್ಲ. ಚೌಕಾಕಾರ ವಿನ್ಯಾಸದಲ್ಲಿರುವ ದೇವಸ್ಥಾನವನ್ನು ಮಾಜಿ ಮೇಯರ್ ಟಿ.ಕೆ . ತಿಮ್ಮರಾಯಗೌಡರ ಧರ್ಮಪತ್ನಿ ಎಚ್.ಸಿ. ಕಮಲಮ್ಮ 2004ರಲ್ಲಿ ಲೋಕಾರ್ಪಣೆ ಮಾಡಿದ್ದಾರೆ.
ನವ ನವೀನ ದೇಗುಲವಾದರೂ ಇಂದಿಗೂ ಪಾರಂಪರಿಕ ಸೊಗಡನ್ನು ಉಳಿಸಿಕೊಂಡಿದೆ ಹಾಗೂ ವಿಶಿಷ್ಟ ಅಲಂಕಾರಗಳಿಗೆ ಹೆಸರಾದ ದೇಗುಲವಾಗಿದೆ.
ದೈವ ಸನ್ನಿಧಾನ:
ಭವಾನಿ ಶಂಕರ ದೇವಸ್ಥಾನದಲ್ಲಿ ಶಿವ – ಪಾರ್ವತಿ, ಗಣಪತಿ, ಸಾಯಿ ಬಾಬಾ, ದಕ್ಷಿಣಾಮೂರ್ತಿ, ಚಂಡಿಕೇಶ್ವರ ಹಾಗೂ ನವಗ್ರಹ ಸನ್ನಿಧಾನವಿದೆ.
( ಚಿತ್ರ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ)
Discussion about this post