ಶಿವಮೊಗ್ಗ: ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆ ಕಳೆದ ನಾಲ್ಕೈದು ದಿನಗಳಿಂದ ಭಾರೀ ಪ್ರಮಾಣದಲ್ಲಿ ಅಬ್ಬರಿಸುತ್ತಿದ್ದು, ಮಲೆನಾಡು ಅಕ್ಷರಶಃ ಮಳೆನಾಡಾಗಿದೆ.
ಜಿಲ್ಲಾ ಕೇಂದ್ರ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮೂರು ದಿನದಿಂದ ಭಾರೀ ಪ್ರಮಾಣದಲ್ಲಿ ವರ್ಷಧಾರೆ ಸುರಿಯುತ್ತಿದ್ದು, ಪರಿಣಾಮವಾಗಿ ನಗರದ ಹಲವು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಅಣ್ಣಾನಗರ ಚಾನೆಲ್ ಒಡೆದು ರಸ್ತೆಯಲ್ಲಿ ನೀರು ನುಗ್ಗಿದ ಪರಿಣಾಮ ತೊಂದರೆಯುಂಟಾಗಿದೆ.
ಇನ್ನು, ಬೈಪಾಸ್ ರಸ್ತೆಯಲ್ಲಿರುವ ನಂದನ ಸ್ಕೂಲ್ ಪ್ರದೇಶದಲ್ಲಿ ರಸ್ತೆ ನೀರಿನಲ್ಲಿ ಮುಳುಗಿಹೋಗಿದೆ.
ಅಶ್ವತ್ಥ್ ನಗರ ಗಾರೆ ಚಾನಲ್ ಪ್ರದೇಶದಲ್ಲಿ ನೀರು ನುಗ್ಗಿದ್ದರೆ, ಇನ್ನೊಂದೆಡೆ ವಡ್ಡಿನಕೊಪ್ಪದ ಹಲವು ಮನೆಗಳಿಗೆ ನೀರು ನುಗ್ಗಿದೆ.
ಇನ್ನು, ಮಳೆಯ ಅಬ್ಬರಕ್ಕೆ ಬಾಲರಾಜ್ ಅರಸ್ ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ಧರೆಗುರುಳಿದೆ.
ತೀರ್ಥಹಳ್ಳಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುಂಗಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಪರಿಣಾಮವಾಗಿ ತುಂಗೆ ತುಂಬಿ ಹರಿಯುತ್ತಿದ್ದು, ತುಂಗಾ ಸೇತುವೆಯ ಹಾಗೂ ರೈಲ್ವೆ ಸೇತುವೆಯ ಮುಕ್ಕಾಲು ಮಟ್ಟಕ್ಕಿಂತಲೂ ಹೆಚ್ಚು ಎತ್ತರದಲ್ಲಿ ನೀರು ಹರಿಯುತ್ತಿದೆ.
ಹೊಸಮನೆ ಬಡಾವಣೆಯಲ್ಲಿ ಮನೆ ಕುಸಿತ
20 ನೆಯ ವಾರ್ಡಿನ ಹೊಸಮನೆ ಬಡಾವಣೆಯ ಅಂಬೇಡ್ಕರ್ ಸಮುದಾಯ ಭವನದ ಪಕ್ಕದಲ್ಲಿರುವ ಶಿವಮೊಗ್ಗ ಮಹಾನಗರ ಪಾಲಿಕೆ ವಸತಿಗೃಹದಲ್ಲಿ ವಾಸಿಸುವ ಮಹಾನಗರ ಪಾಲಿಕೆಯ ನೌಕರರಾದ ಲಕ್ಷ್ಮಮ್ಮ ಎಂಬುವರ ಮನೆ ಮಳೆಯ ರಭಸಕ್ಕೆ ಕುಸಿದುಬಿದ್ದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಕೆ. ರಂಗನಾಥ್, ಇಲ್ಲಿಯ ಹಲವಾರು ವಸತಿ ಗೃಹಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಮುಂದೆ ಇಂತಹ ಯಾವುದೇ ತೊಂದರೆಗಳಾಗದಂತೆ ಕಾರ್ಯನಿರ್ವಹಿಸಬೇಕೆಂದು ವಿನಂತಿಸಿದ್ದಾರೆ.
ಭದ್ರೆಗೆ ಒಳಹರಿವು ಹೆಚ್ಚಳ:
ಇನ್ನೊಂದೆಡೆ ಕೊಪ್ಪ, ಎನ್ ಆರ್ ಪುರ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದ ಒಳಹರಿವು ಇಂದು ಹೆಚ್ಚಾಗಿದೆ.
ನಿನ್ನೆ ಅಂದರೆ, ಸೋಮವಾರ 8 ಸಾವಿರ ಕ್ಯೂಸೆಕ್ಸ್ ಒಳಹರಿವಿದ್ದರೆ, ಇಂದು ಅಂದರೆ ಮಂಗಳವಾರ 22,120 ಕ್ಯೂಸೆಕ್ಸ್’ಗೆ ಒಳಹರಿವು ಹೆಚ್ಚಾಗಿದೆ.
ಶಿವಮೊಗ್ಗದಲ್ಲಿ ತುಂಬಿದ ತುಂಗೆಯ ನಯನಮನೋಹರ ಚಿತ್ರಗಳಿವು:
Discussion about this post