ಧಾರವಾಡ: ಅತಿವೃಷ್ಟಿ ಬಾಧಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಮರು ನಿರ್ಮಾಣ, ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯದಲ್ಲಿ ಎನ್.ಡಿ.ಆರ್.ಎಫ್ ಸೂತ್ರಗಳನ್ವಯ ತ್ವರಿತ ಪರಿಹಾರ ನೀಡಬೇಕು, ಹೆಚ್ಚಿನ ಪರಿಹಾರ ನೀಡಲು ಅಗತ್ಯ ಬಿದ್ದರೆ ಮಾರ್ಗಸೂಚಿಗಳಲ್ಲಿ ಸಡಿಲಿಕೆ ತರುವುದು ಅಥವಾ ಮಾರ್ಪಾಡು ಮಾಡಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಅತಿವೃಷ್ಠಿ ಭಾದಿತ ಸ್ಥಳಗಳಿಗೆ ಭೇಟಿ ನೀಡಿದ ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅತಿವೃಷ್ಟಿ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೆರೆ ಮತ್ತು ಪ್ರವಾಹದ ನಂತರ ಇದೀಗ ಮೂಲಭೂತ ಸೌಕರ್ಯಗಳು, ರಸ್ತೆಗಳ ಮರು ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಇಲಾಖಾವಾರು ಪ್ರತ್ಯೇಕ ಪ್ರಸ್ತಾವನೆ ಕಳುಹಿಸಿ, ಸರ್ಕಾರ ಮಟ್ಟದಲ್ಲಿ ಅನುದಾನ ಬಿಡುಗಡೆಗೆ ಒತ್ತಡ ಹೇರುತ್ತೇನೆ. ಯೋಜನೆಗಳ ಅನುಷ್ಠಾನಕ್ಕೆ ಮಾರ್ಗದರ್ಶಿ ಸೂತ್ರಗಳ ಬದಲಾವಣೆಗೆ ಅಧಿಕಾರಿಗಳು ಸರ್ಕಾರದ ನಿರ್ದೇಶನ ಕೋರಿದರೆ ಅಂತಹ ಮಾರ್ಪಾಡುಗಳನ್ನು ಮಾಡಿಕೊಡುತ್ತೇವೆ.
ಮಳೆಯಿಂದ ಬಟ್ಟೆ ಬರೆ, ಪಾತ್ರೆ ಮತ್ತಿತರ ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಕ್ಷಣ 10 ಸಾವಿರಗಳ ಪರಿಹಾರ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು. ಮನೆ, ಆಸ್ತಿ, ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ದಾಖಲೆಗಳಿಗಾಗಿ ಹೆಚ್ಚು ಅಲೆದಾಡಿಸಬೇಡಿ. ನಂಬಲರ್ಹವಾದ ದಾಖಲೆಗಳನ್ನು ಪಡೆದು ಸರಳವಾಗಿ ಪರಿಹಾರ ನೀಡುವ ಮೂಲಕ ಜನಸಾಮಾನ್ಯರಲ್ಲಿ ಭರವಸೆ ತುಂಬಿ ಎಂದು ಸೂಚಿಸಿದರು.
ನೆರೆಹಾವಳಿಯಿಂದ ಪಾಠ ಕಲಿಯಬೇಕು: ನೆರೆ ಹಾವಳಿಯಿಂದ ನಾವು ಪಾಠ ಕಲಿಯಬೇಕು ರಾಜ ಕಾಲುವೆ, ನಾಲಾಗಳನ್ನು ದುರಸ್ತಿ ಮಾಡಬೇಕು. ತಡೆಗೋಡೆ ನಿರ್ಮಿಸಿ ನೀರು ಹರಿಯುವಂತೆ ಮಾಡಬೇಕು. ಇಂಜನೀಯರಗಳು ಕೇವಲ ಕಟ್ಟಡ ಕಟ್ಟುವುದು ಮಾತ್ರವಲ್ಲ, ಅದರ ಬಾಳಿಕೆ, ವಿನ್ಯಾಸ ಸ್ಥಳೀಯ ವಾತಾವರಣ ಹಾಗೂ ಸ್ಥಳೀಯ ಜನರ ಅನುಭವಗಳನ್ನು ಆಲಿಸಿ ಕಟ್ಟಡ, ರಸ್ತೆ ಸೇತುವೆ ನಿರ್ಮಿಸಬೇಕು. ದೂರದೃಷ್ಠಿಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ರೈತರ ಹೊಲಗಳಿಗೆ ತೆರಳಲು ತಾತ್ಕಾಲಿಕವಾಗಿ ಕೂಡಲೇ ರಸ್ತೆಗಳನ್ನು ನಿರ್ಮಿಸಿಕೊಡಬೇಕು. ಶಾಲೆ, ಕಾಲೇಜು, ಹಾಸ್ಟೆಲ್‌ಗಳ ಬಳಿಯಿರುವ ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸಬೇಕು ಎಂದರು.
ಉಣಕಲ್ ಕೆರೆ, ನಾಲಾ ಕಾಮಗಾರಿಗಳನ್ನು ಕೂಡಲೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಥಮ ಆದ್ಯತೆಯಡಿ ಕೈಗೊಂಡು ಮುಂಬರುವ ಮಳೆಗಾಲಕ್ಕೆ ಮುನ್ನ ಪೂರ್ಣಗೊಳಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾಡಳಿತದ ಪರಿಹಾರ ಕಾರ್ಯಾಚರಣೆ ಶ್ಲಾಘನೆ: ನೆರೆಹಾವಳಿ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಎಲ್ಲಾ ತಹಶೀಲ್ದಾರರು ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಂತ್ರಸ್ತ ಜನರಲ್ಲಿ ಆತ್ಮ ವಿಶ್ವಾಸ ತುಂಬಿ ಭಯ, ಭೀತಿ ನಿವಾರಿಸಿದ್ದಾರೆ. ತ್ವರಿತವಾಗಿ ಪರಿಹಾರ ಕೇಂದ್ರಗಳನ್ನು ತೆರೆದು ನೋವಿನಲ್ಲಿದ್ದ ಜನರಿಗೆ ಸ್ಪಂದಿಸಿರುವ ಕಾರ್ಯ ಪ್ರಶಂಸನೀಯ ಎಂದು ಸಚಿವ ಜಗದೀಶ ಶೆಟ್ಟರ್ ಮುಕ್ತ ಕಂಠದಿಂದ ಹೊಗಳಿದರು.
ಅಣ್ಣಿಗೇರಿ ತಾಲೂಕಿನಲ್ಲಿ 18 ಜನರನ್ನು ರಕ್ಷಿಸಿರುವುದು ಸೇರಿದಂತೆ ಬೆಣ್ಣೆಹಳ್ಳ, ತುಪ್ಪರಿಹಳ್ಳ ಪ್ರವಾಹದಿಂದ ತೊಂದರೆಗೊಳಗಾದ ಜನರಿಗೆ ಜಿಲ್ಲಾಡಳಿತ ಎಲ್ಲ ಸಹಕಾರ ನೀಡಿದೆ. ಉಪವಿಭಾಗಾಧಿಕಾರಿ ಮಹ್ಮದ ಜುಬೇರ, ಪಿ.ಎಸ್.ಐ. ಜೈಪಾಲ್ ಸೇರಿದಂತೆ ಅನೇಕ ಅಧಿಕಾರಿಗಳು ತಮ್ಮ ಪ್ರಾಣಾಪಾಯ ಲೆಕ್ಕಿಸದೇ ಶ್ರಮಿಸಿರುವುದು ಕೃತಜ್ಞತೆಗೆ ಅರ್ಹವಾದ ಕಾರ್ಯವಾಗಿದೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 4 ಮಾನವ ಜೀವಹಾನಿಯಾಗಿವೆ,20 ಲಕ್ಷ ರೂ.ಪರಿಹಾರ ವಿತರಿಸಲಾಗಿದೆ. 212 ಜಾನುವಾರುಗಳ ಜೀವಹಾನಿಯಾಗಿದೆ 11.77 ಲಕ್ಷ ರೂ.ಪಾವತಿ ಮಾಡಲಾಗಿದೆ. 16872 ಮನೆಗಳು ಹಾನಿಯಾಗಿವೆ ಅವುಗಳಲ್ಲಿ 8631 ಮನೆಗಳಿಗೆ 1049.46 ಲಕ್ಷ ರೂ.ಪರಿಹಾರ ಪಾವತಿಸಲಾಗಿದೆ. ಬಟ್ಟೆ ಬರೆ,ದಿನಬಳಕೆಯ ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ 10 ಸಾವಿರ ರೂ.ತಕ್ಷಣ ಪರಿಹಾರವಾಗಿ ಈವರೆಗೆ 2743 ಕುಟುಂಬಗಳಿಗೆ 274.30 ಲಕ್ಷ ರೂ.ಪಾವತಿಸಲಾಗಿದೆ. ಅತಿವೃಷ್ಟಿ ವೇಳೆಯಲ್ಲಿ ಸರಾಸರಿ ಐದು ದಿನಗಳ ಕಾಲ ಜಿಲ್ಲೆಯಲ್ಲಿ 127 ಪರಿಹಾರ ಕೇಂದ್ರಗಳಲ್ಲಿ 6978 ಕುಟುಂಬಗಳ 42760 ಸಂತ್ರಸ್ತರಿಗೆ ಆಶ್ರಯ ಒದಗಿಸಲಾಗಿತ್ತು. ಸುಮಾರು 8460 ಜನ ತಮ್ಮ ಸಂಬಂಧಿಕರು, ಆಪ್ತರ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಎನ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿಯು 334 ಜನರನ್ನು ರಕ್ಷಿಸಿದ್ದಾರೆ. 51220 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. 20908 ಕುಟುಂಬಗಳು ನೆರೆಬಾಧಿತವಾಗಿದ್ದವು, 30454 ಆಹಾರ ಕಿಟ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 153616 ಹೆಕ್ಟೇರ್ ಕೃಷಿ ಹಾಗೂ 38358 ಹೆಕ್ಟೇರ್ ತೋಟಗಾರಿಕೆ ಬೆಳೆಗಳ ಹಾನಿಯಾಗಿದೆ ಒಟ್ಟು ಸುಮಾರು 126 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ 62.47 ಕಿ.ಮೀ.ರಾಜ್ಯ ಹೆದ್ದಾರಿ ಹಾಗೂ 283.43 ಕಿ.ಮೀ.ಜಿಲ್ಲಾ ಮುಖ್ಯ ರಸ್ತೆಗಳು ಹಾನಿಯಾಗಿವೆ. 61 ಸೇತುವೆಗಳು ಹಾನಿಯಾಗಿವೆ. ಸಿ.ಆರ್.ಎಫ್ ಖಾತೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 1846.99 ಲಕ್ಷ ರೂ. ಲಭ್ಯವಿದೆ ಎಂದು ವಿವರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಜಿಲ್ಲೆಯಲ್ಲಿ 487 ಶಾಲೆಗಳ 2772 ಕೊಠಡಿಗಳು ಹಾನಿಯಾಗಿವೆ. ದುರಸ್ತಿಗೆ ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗದಿಂದ 6.83 ಕೋಟಿ ರೂ.ಗಳ ಅಂದಾಜು ಪ್ರಸ್ತಾವನೆ ಸಲ್ಲಿಸಲಾಗಿದೆ. 65 ಶಾಲೆಗಳಿಗೆ ತಲಾ 2 ಲಕ್ಷ ರೂ.ಗಳಂತೆ ಒಟ್ಟು 1.30 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಲಕಿನಕೊಪ್ಪ ಹಾಗೂ ಗಳಗಿ ಹುಲಕೊಪ್ಪ ಶಾಲೆಗಳು ಪೂರ್ಣ ಹಾನಿಯಾಗಿವೆ ಅವುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆಗಳ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲ ಪ್ರಾಥಮಿಕ ಶಾಲೆಗಳ ಎಸ್.ಡಿ.ಎಂ.ಸಿ.ಗಳಿಗೆ ಒಟ್ಟು 1.65 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಶಾಸಕರಾದ ಅಮೃತ ದೇಸಾಯಿ, ಶ್ರೀನಿವಾಸ ಮಾನೆ, ಕುಸುಮಾ ಶಿವಳ್ಳಿ, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ,ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಮಂಜುಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.
Discussion about this post