ಶಿವಮೊಗ್ಗ: ಸಾಮಾನ್ಯವಾಗಿ ಯಾವುದೇ ಒಂದು ಕಾಲೇಜಿನ ಮುಖ್ಯಸ್ಥರು, ಆಡಳಿತ ಮಂಡಳಿಯ ಮುಖ್ಯಸ್ಥರು ತಮ್ಮ ಸಂಸ್ಥೆಯ ಅಭಿವೃದ್ದಿಯ ಕುರಿತಾಗಿಯೇ ಚಿಂತಿಸುತ್ತಾ ಕಾರ್ಯಪ್ರವೃತ್ತರಾಗಿರುವುದು ಸಹಜ. ಆದರೆ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ ಇವೆಲ್ಲಕ್ಕಿಂತಲೂ ಕೊಂಚ ವಿಭಿನ್ನ.
ಹೌದು… ತಮ್ಮ ಸಂಸ್ಥೆಯ ಸಾಮಾಜಿಕ ಕಳಕಳಿಯ ಭಾಗವಾಗಿ ಈಗಾಗಲೇ ಹಲವು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು, ಇಂದು ಪುರದಾಳಿನ ಸಮೀಪವಿರುವ ಕೌಲಪುರಕ್ಕೆ ಭೇಟಿ ನೀಡಿ, ಅಲ್ಲಿ ನಿವಾಸಿಗಳ ಸಮಸ್ಯೆ ಆಲಿಸಿದರು.
ಪುರದಾಳು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕೌಲಪುರಕ್ಕೆ ಭೇಟಿ ನೀಡಿದ ಲತಾ ನಾಗೇಂದ್ರ ಅವರು, ಅಲ್ಲಿನ ಬಹುತೇಕ ಹೆಚ್ಚು ವಾಸವಾಗಿರುವ ಗೌಳಿ ಜನಾಂಗದ ಜನರೊಂದಿಗೆ ಬೆರೆತು ಹಲವು ಮಾಹಿತಿಗಳನ್ನು ಪಡೆದುಕೊಂಡರು.
ಸರಿಸುಮಾರು ಇಪ್ಪತ್ತೈದು ಮನೆಗಳ ಈ ಊರಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಹಲವು ಕಾಯಿಲೆಯಿಂದ ಬಳಲುವ ಜನರ ಕುಂದು ಕೊರತೆಯನ್ನು ವಿಚಾರಿಸಿದ ಅವರು, ಆರೋಗ್ಯ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದರು.
ಪುರದಾಳು ಗ್ರಾಮದಿಂದ ಕೌಲಪುರಕ್ಕೆ ಹೋಗುವ ದಾರಿ ದುರವಸ್ಥೆಯಿಂದ ಕೂಡಿದ್ದು, ರಸ್ತೆಯು ಡಾಂಬರೀಕಣ ಕಾಣದಿದ್ದರೂ ಅಡ್ಡಿಯಿಲ್ಲ. ಕನಿಷ್ಠ ಪಕ್ಷ ಮಣ್ಣಿನ ರಸ್ತೆಯೂ ಸಹ ಸುಸ್ಥಿತಿಯಲ್ಲಿ ಇಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಸುಮಾರು ಎರಡು ಕಿಲೋಮೀಟರ್ ಮಾರ್ಗ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ವಾಹನಗಳ ಓಡಾಟ ಸ್ಥಗಿತವಾಗಿದೆ. ಗ್ರಾಮದ ಬಹುತೇಕ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಅನೇಕ ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ.
ಇನ್ನು ಪುರದಾಳು ಗ್ರಾಮದ ಸುತ್ತಮುತ್ತಲು ಮಂಗನ ಕಾಯಿಲೆ (ಕೆ.ಎಫ್.ಡಿ.) ಕಾಣಿಸಿಕೊಂಡಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಪುರದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಭೇಟಿ ಮಾಡಿದ ಡಾ.ಲತಾ ನಾಗೇಂದ್ರ ಅವರು ಮಕ್ಕಳೊಂದಿಗೆ ಬೆರೆತರು. ಆನಂತರ ಮಂಗನ ಕಾಯಿಲೆಯ ಕುರಿತು ಮುಖ್ಯಶಿಕ್ಷಕರ ಬಳಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಆರ್.ಪಿ. ಪೈ ಹಾಗೂ ಡಾ. ದಿವಾಕರ್ ಒಳಗೊಂಡ ತಂಡ ಉಪಸ್ಥಿತರಿದ್ದರು.
Discussion about this post