ಮಹಾಭಾರತದಲ್ಲಿ ಸ್ವರ್ಣಗೌರಿ ಮೂರ್ತಿ ಮಾಡಿ ಗಾಂಧಾರಿ ಆರಾಧನೆ ಮಾಡಿದಳು. ಎಲ್ಲವನ್ನೂ ಕಳೆದುಕೊಂಡ ಕುಂತಿಯು ದುಃಖಿಸುತ್ತಾ ಮೃಣ್ಮಯ ಮೂರ್ತಿ ಪೂಜಿಸಿದಳು. ಆದರೆ ಪಾಂಡವರು ತಾಯಿಯ ಪೂಜಾ ಕ್ರಿಯೆಗೆ ಸ್ವರ್ಗಲೋಕದಿಂದಲೇ, ಬಾಡಿ, ಕೊಳೆತು ಹೋಗದಂತಹ ಫಲ ಪುಷ್ಪಾದಿಗಳನ್ನು ತಂದರು. ಭೀಮಸೇನನು ಸ್ಥಳ ಶುದ್ಧಿಗಾಗಿ, ಜೀವದ ಹಂಗು ತೊರೆದು ಪುರುಷಾ ಮೃಗವನ್ನೇ ತಂದನು. ಇದು ಪುರಾಣ ಕಥೆ. ಅಂದರೆ ಆಗಲೂ ಮೃಣ್ಮಯ ಮೂರ್ತಿ ಆರಾಧನೆಯ ಕ್ರಮ ಇತ್ತು ಎಂದರ್ಥ. ಅದಕ್ಕಿಂತಲೂ ಪೂರ್ವದಲ್ಲಿ ಸ್ವಯಂ ಪಾರ್ವತಿ ದೇವಿಯೇ ಗಣಪತಿಯ ಮೃಣ್ಮಯ ಮೂರ್ತಿ ರಚಿಸಿ ಭಾದ್ರಪದ ಮಾಸದ ಚೌತಿಯಂದು ಗಣಾಧಿಪನಾದ ಗಣೇಶನ ಆರಾಧನೆ ಮಾಡಿದ್ದಳು. ಇದು ಕೂಡಾ ಪುರಾಣ ಕಥೆ.
ಮೃಣ್ಮಯ(ಮಣ್ಣಿನ) ಮೂರ್ತಿಯಲ್ಲಿ ಪಂಚ ತತ್ವಗಳಿವೆ. ಪೃಥ್ವಿ, ಜಲ, ಅಗ್ನಿ, ಆಕಾಶ, ವಾಯುಗಳೇ ಪಂಚತತ್ವ. (ಆದರೆ ಇದರಲ್ಲಿ ಅಗ್ನಿ ಎಲ್ಲಿದೆ ಅದರಲ್ಲಿ ಎಂದು ವಾದಿಸುವ ಮಂದಿಯೂ ಇದ್ದಾರೆ ನಮ್ಮಲ್ಲಿ. ಜಲದೊಳಗೆ ಅಗ್ನಿಯೂ ಇದೆ. ಜಲವನ್ನು ಭೇದಿಸಿದಾಗ oxygen ಮತ್ತು hydrogen ಸಿಗುತ್ತೆ. ಮಿಶ್ರಣದಲ್ಲಿ ನೀರು ಸಿಕ್ಕಿದರೆ, ವಿಭಜನೆಯಲ್ಲಿ ವಾಯು ಮತ್ತು ಅಗ್ನಿ ಸಿಗುತ್ತೆ ಅಂತ ತಿಳಿಯಬೇಕು.)
ಯಾರೋ ಈ ಆಚರಣೆಯನ್ನು ವಿರೋಧಿಸಿದವರು ಏನೇನೋ ಅಪಸ್ವರದ ಕಥೆ ಕಟ್ಟಿದರು. ಪಾರ್ವತಿ ಮಣ್ಣಿನಿಂದ ರಚಿಸಿದ ತನ್ನ ಮಗನೆಂದು ಮುದ್ದಾಡುತ್ತಾ, ಸ್ನಾನಗೃಹದ ಮುಂದೆ ರಕ್ಷಣೆಗಾಗಿ ಇಟ್ಟಳು. ಶಿವನು ಅಲ್ಲಿಗೆ ಬಂದು ಸ್ನಾನ ಗೃಹದ ಬಾಗಿಲು ತೆರೆಯಲೆತ್ನಿಸಿದಾಗ ಈ ಬಾಲಕ ತಡೆದ. ಕುಪಿತನಾದ ಶಿವನು ಬಾಲಕನ ತಲೆ ಕಡಿದ. ಕೊನೆಗೆ ಪಾರ್ವತಿ ಹೊರ ಬಂದು ಈ ದೃಶ್ಯ ನೋಡಿ ದುಃಖಿಸಿದಾಗ ಶಿವನು ಆ ಮುಂಡಕ್ಕೆ ಉತ್ತರಕ್ಕೆ ತಲೆ ಇಟ್ಟು ಮಲಗಿದಂತಹ ಆನೆಯ ತಲೆಯನ್ನು ಇಟ್ಟು ಬದುಕಿಸಿದ ಎಂದು ಕಥೆ ಕಟ್ಟಿದರು. ಇದುವೇ ಮಹಾ ಪುರಾಣ ಎಂದು, ತಿಳಿಯದವರು ಕಥೆ ಹೇಳುತ್ತಾ, ಹಾಡು ಹಾಡುತ್ತಾ ಭಾವ ಪರವಶರಾಗುತ್ತಾರೆ.
ನಂತರದ ಅಂದರೆ ಈಗಿನ ಕೆಲ ಮೂರ್ಖ ಸಾಹಿತಿಗಳು ಪಾರ್ವತಿ ವ್ಯಭಿಚಾರಿ, ಗಣಪತಿ ಅವಳ ಮಗ ಎಂದು ಪುಸ್ತಕವನ್ನೇ ಬರೆದು ಈಚೆಗೆ ಧನ ಸಂಪಾದನೆಯನ್ನೂ, ಆಕಡೆ ಮೂರ್ಖರಿಂದ ಸನ್ಮಾನವನ್ನೂ ಪಡೆದು ತೃಪ್ತರಾದರು. ನೀವೇ ಯೋಚಿಸಿ ನೋಡಿ. ಬಾಲಕನ ತಲೆ ಕಡಿದ ಶಿವನು ದೇವರಾದಾನೇ? ಅಥವಾ ದೇವರಾಗಿದ್ದರೆ ಆನೆಯ ತಲೆಯ ಬದಲು, ಅದೇ ಬಾಲಕನ ತಲೆಯನ್ನೇ ಯಾಕೆ ಕಸಿ ಮಾಡಲಿಲ್ಲ. ಪುರಾಣ ನಿಂದನೆ ಆಗಲೂ ಇತ್ತು, ಈಗಲೂ ಇದೆ. ಮುಂದೆಯೂ ಇರುತ್ತೆ. ಆದರೆ ಆರಾಧನೆ ಮಾಡುವವರು ಜ್ಞಾನವಂತರಾಗಬೇಕಾಗಿದೆ.
ಪಂಚತತ್ವದ ಮೃಣ್ಮಯ ಮೂರ್ತಿಯಲ್ಲಿ ಕುಜಾದಿ ಪಂಚ ಗ್ರಹರ ತತ್ವವೂ, ರವಿ ಚಂದ್ರರ ಅನುಗ್ರಹವೂ, ರಾಹು ಕೇತುಗಳ ಮೋಹವೂ ಇರುತ್ತದೆ. ದೇಹದ ಒಳಗಿರುವ 72 ಸಾವಿರ ನಾಡಿಗಳಲ್ಲಿ 36 ಸಾವಿರ ನಾಡಿಗಳು ಕ್ರಿಯೆಗೂ, ಮತ್ತೆ ಉಳಿದ 36 ಸಾವಿರ ನಾಡಿಗಳು ಕ್ರಿಯಾ ನಾಡಿಗಳ ರಕ್ಷಣೆಗೂ ಇರುತ್ತದೆ. ಆ ಎಲ್ಲಾ ನಾಡಿಗಳೊಳಗೆ ಅನೇಕ ಗುಂಪುಗಳು ಇರುತ್ತದೆ. ಪ್ರತಿಯೊಂದು ಗುಂಪಿನ ನಿಯಂತ್ರಣಕ್ಕೂ ಒಂದೊಂದು ಗಣಪತಿ ಇರುತ್ತದೆ. ಈ ಗಣಪತಿಯ ರಕ್ಷಣಾ ಕವಚದಿಂದಲೇ ವಿಘ್ನಗಳ ನಿವಾರಣೆಯಾಗಿ ಪರಿಶುದ್ಧತೆ ಲಭಿಸುತ್ತದೆ. ಇದಕ್ಕಾಗಿಯೇ ಗಣಪತಿಯು ವಿಘ್ನ ನಿವಾರಕ ವಿಘ್ನೇಶನಾದ.
ಎಲ್ಲಾ ಗಣಪತಿಗಳಿಗೂ ಮತ್ತೊಬ್ಬ ಪ್ರಧಾನ ಅಧಿಪತಿ ಇರುತ್ತಾನೆ. ಅವನೇ ವಿಶ್ವಂಭರ ರೂಪಿ ಭಗವಂತ. ಅವನನ್ನೇ ನಾವು ಗಣಪತಿ, ಗಣಾಧ್ಯಕ್ಷ, ಗಣೇಶ ಎಂಬಿತ್ಯಾದಿ ನಾಮಗಳಿಂದ ಕರೆಯುತ್ತೇವೆ. ಹೇಗೆ ದೇಶದ ಪ್ರಜಾ ಪ್ರಭುತ್ವದೊಳಗೆ, ಗ್ರಾಮ ಪಂಚಾಯತ್ ಅಧ್ಯಕ್ಷ, ತಾಲೂಕು ಪಂಚಾಯತ್ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಅಧ್ಯಕ್ಷ, ಶಾಸಕರು, ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಾಧ್ಯಕ್ಷರ ಪದವಿಗಳಿರುತ್ತೋ ಹಾಗೆಯೇ ದೇಹದ ಒಳಗೂ ಒಂದು ಆಡಳಿತ ವ್ಯವಸ್ಥೆ ಇರುತ್ತದೆ. ಯಾವಾಗ ಈ ವ್ಯವಸ್ಥೆಯಲ್ಲಿ ಅನೇಕಾನೇಕ ಲೋಪಗಳನ್ನು ಹೊಂದಿದ ಮನುಷ್ಯರು ಇರುತ್ತಾರೋ ಅವರೇ ಈಗಿನ ಕೆಲ ಮೂರ್ಖ ಪ್ರಗತಿಪರ ವಿಚಾರವಾದಿ ಸಾಹಿತಿಗಳು.
ಹಾಗಾಗಿ ಯಾವುದೇ ಪೂಜೆ ಮಾಡಬೇಕಾದರೆ ನಾವು ಗಣಪತಿಯ ಸ್ಮರಣೆ ಮೊದಲಾಗಿ ಮಾಡುವುದು. ಇಂತಹ ಗಣಪತಿಯ ಆರಾಧನೆಯಿಂದ ದೇಹದೊಳಗಿನ ವಿವಿಧ ಕ್ರಿಯೆಗಳನ್ನು ಮಾಡುವ ನಾಡಿಗಳ ಅಭಿಮಾನಿ ದೇವತೆಗಳ ಅನುಗ್ರಹ ಸಿಗುತ್ತದೆ. ಇದು ಕೇವಲ ನಂಬಿಕೆಯಲ್ಲ. ಪುರಾಣ ಸತ್ಯಗಳು. ನಾವುಣ್ಣುವ ಪ್ರತೀ ಆಹಾರ ಖಾಧ್ಯಗಳಿಗೂ ಅಭಿಮಾನಿ ದೇವತೆಗಳಿದ್ದಾರೆ. ಅವುಗಳಿಂದ ಬರುವ ರಸಾನಿಲಗಳೊಳಗೆ ಅಭಿಮಾನಿ ದೇವರುಗಳಿರುತ್ತಾರೆ. ಇವರೆಲ್ಲರೂ ಅಗ್ನಿ-ಆಕಾಶ-ವಾಯುತತ್ವಗಳಲ್ಲಿದ್ದು ಕಣ್ಣಿಗೆ ಕಾಣಿಸೋದಿಲ್ಲ. ಕೇವಲ ಸ್ಪರ್ಷಾನುಭವದಿಂದ ತಿಳಿಯಬಹುದು. ಯಾರಿಗೆ ನಾಡಿ ಶುದ್ಧ ಇಲ್ಲವೋ ಅವರಿಗೆ ದೇವಾನುಭವ ಸಿಗಲಾರದು. ನೊಣ, ಕೀಟಗಳಿಗೆ ಹೇಗೆ ಅನುಭವ ಸಿಗುವುದಿಲ್ಲವೋ ಹಾಗೆಯೇ ಸ್ಪರ್ಷಾನುಭವ ಇಲ್ಲದವರಿಗೂ ಆಗುತ್ತದೆ.
ಇಂದು ಆಡಂಬರ, ಅಲಂಕಾರ, ಪ್ರತಿಷ್ಠೆಗಳೇ ದೇವತಾರಾಧನೆಗೆ ಮಾರಕವಾಗಿದೆ. ಇಲ್ಲಿ ಸಿಗುವುದು ಕೇವಲ ಮಜಾ(enjoyment) ಮಾತ್ರ. ಬಹುಷಃ ಅದುವೇ ಬೇಕಾಗಿರಲೂಬಹುದು. ಈ ಸಲದ ಗಣೇಶ ಹಬ್ಬದಲ್ಲಿ ಮೃಣ್ಮಯ ಗಣಪತಿ ರಚಿಸಿ, ನೈಸರ್ಗಿಕ ಬಣ್ಣ, ಪುಷ್ಪಾಲಂಕಾರ ಮಾಡಿ. ಇದರಿಂದ ಪರಿಸರಕ್ಕೂ ಹಾನಿಯಾಗದು. ದೇವತಾ ಅನುಗ್ರಹವೂ ಸಿಗುತ್ತದೆ. ಆಡಂಬರದ ಶಬ್ದ ಮಾಲಿನ್ಯ ನಿಲ್ಲಿಸಿ, ಭಜನೆ, ಪೂಜೆಗಳ ಮೂಲಕ ಆ ವಿಶ್ವಂಭರ ಸ್ವರೂಪಿ ಗಣಪನ ಆರಾಧನೆಯನ್ನು ಮಾಡೋಣ. ಇತರ ಸಮುದಾಯದವರಿಗೆ ತೊಂದರೆಯಾಗದೆ ಆರಾಧನೆ ಮಾಡಿದಾಗ, ಒಂದು ದಿನ ಅವರೂ ನಮ್ಮ ಜತೆ ಸೇರಿ ಇನ್ನಷ್ಟು ಭ್ರಾತೃತ್ವ ಹೆಚ್ಚಾಗುತ್ತದೆ. ಸರ್ವ ವಿಘ್ನಗಳೂ ದೂರವಾಗಲಿ ಎಂದು ಪ್ರಾರ್ಥಿಸೋಣ.
Discussion about this post