ಚಳ್ಳಕೆರೆ: ಸಾರ್ವಜನಿಕ ಸ್ಥಳಗಳಲ್ಲಿ ಗಲಭೆ ಎಬ್ಬಿಸುವುದು, ಸಮಾಜಘಾತಕ ಕೃತ್ಯದಲ್ಲಿ ತೊಡಗುವುದು ಮಾಡದೇ ಸೈಲೆಂಟಾಗಿದ್ರೆ ಸರಿ. ಏನಾದರೂ ಬಾಲ ಬಿಚ್ಚಿದ್ರೆ ದಯಾದಾಕ್ಷಿಣ್ಯ ನೋಡದೇ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ.
ಇದು ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ರೌಡಿಗಳಿಗೆ ಪೊಲೀಸರು ನೀಡಿರುವ ಖಡಕ್ ವಾರ್ನಿಂಗ್!
ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಸೂಚನೆಯ ಮೇರೆಗೆ ಡಿವೈಎಸ್’ಪಿ ಕಚೇರಿ ಆವರಣದಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ರೌಡಿ ಶೀಟರ್’ಗಳ ಪೆರೇಡ್ ನಡೆಸಿದ ಡಿವೈಎಸ್’ಪಿ ರೋಷನ್ ಜಮೀರ್ ಎಚ್ಚರಿಕೆ ನೀಡಿದ್ದಾರೆ.
ಸಮಾಜಘಾತುಕ ಕೃತ್ಯಯಲ್ಲಿ ತೊಡಗುವುದು, ದೊಂಬಿ-ಗಲಾಟೆ ನಡೆಸುವುದು, ಸಾರ್ವಜನಿಕರಿಗೆ ಬೆದರಿಕೆಯೊಡ್ಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಭಯ ಪಡಿಸುವುದು ಮಾಡಿದರೆ ದಯಾದಾಕ್ಷಿಣ್ಯವಿಲ್ಲದೇ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ವೃತ್ತ ನಿರೀಕ್ಷಕ ಈ. ಆನಂದ ಮಾತನಾಡಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು, ಜನರನ್ನು ಬೆದರಿಸುವುದು, ರಾಜಕಾರಣಿಗಳ ಆಮಿಷಕ್ಕೆ ಒಳಗಾಗಿ ಅಹಿತಕರ ಘಟನೆಗಳಲ್ಲಿ ತೊಡಗಿಕೊಳ್ಳಬಾರದು. ಹಾಗೇನಾದರು ಮಾಡಿದ್ದು ತಿಳಿದು ಬಂದರೆ ಅಂತಹವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಎಲ್ಲಾ ರೌಡಿಶೀಟರ್’ಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದ್ದು, ಗಣೇಶ ಹಬ್ಬದ ಸಮಯದಲ್ಲಿ ಗಲಾಟೆಗೆ ಅವಕಾಶ ಮಾಡಿಕೊಡದೆ ಸೈಲೆಂಟಾಗಿರಬೇಕು. ಬಾಲ ಬಿಚ್ಚಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ಸುಮಾರು 130 ರೌಡಿಶೀಟರ್’ಗಳು ಪೆರೇಡ್’ನಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಿಎಸ್’ಐಗಳಾದ ನೂರ್ ಅಹ್ಮದ್, ಎನ್. ಗುಡಪ್ಪ, ತಳಕು ಪಿಎಸ್‌ಐ ಕೆ. ಸತೀಶ್ ನಾಯ್ಕ, ಪಿಸಿಗಳಾದ ವಸಂತಕುಮಾರ್, ಪುರುಷೋತ್ತಮ್, ತಿಲಕ್’ರಾಜ್, ಚಿತ್ತಪ್ಪ, ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)















