ಪುರಾಣ ಪ್ರಸಿದ್ಧ ಕುರುಡುಮಲೆ ಕ್ಷೇತ್ರ ಕೋಲಾರ ಜಿಲ್ಲೆ ಮುಳಬಾಗಿಲಿನಿಂದ 10ಕಿ.ಮೀ ದೂರದ ಬೆಟ್ಟದಲ್ಲಿದೆ. ಚೋಳರ ಕಾಲದ ದೇಗುಲಗಳಿರುವ ಈ ಸ್ಥಳ ಕುರುಡುಮಲೆ ಗಣಪನ ಸನ್ನಿಧಿಯೆಂದೇ ಪ್ರಸಿದ್ಧಿ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಂತೂ ಇಲ್ಲಿ ಜನಜಾತ್ರೆ. ಗಣೇಶ ಚೌತಿ ಮರುದಿನ ಇಲ್ಲಿನ ಗಣೇಶನಿಗೆ ಅದ್ದೂರಿ ಬ್ರಹ್ಮ ರಥೋತ್ಸವ.
ಕುರುಡುಮಲೆ ಬಯಲು ಗಣಪನಿಗೆ ವಿಜಯನಗರ ಅರಸರ ಕಾಲದಲ್ಲಿ ಈಗಿನ ದೇವಾಲಯ ನಿರ್ಮಿಸಲಾಯಿತು. ಮುಂದೆ ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ದೇಗುಲವನ್ನು ಅಭಿವೃದ್ಧಿಪಡಿಸಿದರು. ಇಲ್ಲಿನ ಗಣಪ ಸುಮಾರು 15 ಅಡಿ ಎತ್ತರದ ಸುಂದರ ಕಪ್ಪು ಶಿಲೆಯಲ್ಲಿ ನಿರ್ಮಾಣಗೊಂಡಿದ್ದಾನೆ. ದೇವಾಲಯದ ಪ್ರಾಕಾರದಲ್ಲಿ ಆರು ಅಡಿ ಎತ್ತರದ ಸುಬ್ರಹ್ಮಣ್ಯ ಮೂರ್ತಿಯೂ ಇದೆ. ಗಣಪತಿ ವಾಹನ ಮೂಷಕ ಶಿಲಾಮೂರ್ತಿಗೂ ನಿತ್ಯ ಪೂಜೆ ಇಲ್ಲಿನ ವಿಶೇಷ.
ಚೋಳರ ಕಾಲಕ್ಕೆ ಸೇರಿದ ಕುರುಡುಮಲೆ ಸೋಮೇಶ್ವರ ದೇವಾಲಯದ ವಾಸ್ತು ಶಿಲ್ಪ ಬೇಲೂರು ಹಳೇಬೀಡು ದೇವಾಲಯಗಳಿಗೆ ಹೋಲಿಸಬಹುದಾದಷ್ಟು ಕಲಾತ್ಮಕ. ಇದರ ಮುಖ್ಯ ದ್ವಾರದ ಬಲಭಾಗದಲ್ಲಿ ಪಂಜರದಲ್ಲಿರುವ ಬಯಲು ಗಣಪನನ್ನು ನೋಡಬಹುದು. ಗರ್ಭಗುಡಿ, ನವರಂಗ, ಮುಖಮಂಟಪ, ಸುಖನಾಸಿಗಳಿರುವ ವಿಶಾಲ ದೇವಾಲಯದ ಒಳಪ್ರಕಾರದಲ್ಲಿ ಅಷ್ಟಮೂಲೆಗಳಿರುವ ಶಿಲಾ ಸ್ತಂಭಗಳ ಮೇಲಿನ ಚೋಳರಾಜ, ಜಕಣಾಚಾರಿ ಹಾಗೂ ದೇವರುಗಳ ಉಬ್ಬು ಚಿತ್ರಗಳು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.
ಕುರುಡುಮಲೆಯ ಸೋಮೇಶ್ವರ
ಬೆಂಗಳೂರಿನಿಂದ ತಿರುಪತಿಗೆ ಹೋಗುವ ಹೆದ್ದಾರಿಯಲ್ಲಿ 90 ಕಿ.ಮೀ. ಸಾಗಿದರೆ ಕೋಲಾರ ಜಿಲ್ಲೆಯ ಮುಳಬಾಗಿಲು ಕಾಣ ಸಿಗುತ್ತದೆ. ಇಲ್ಲಿನ ಆಂಜನೇಯಸ್ವಾಮಿಯ ದೇಗುಲ ವಿಖ್ಯಾತವಾದುದು. ಇಲ್ಲಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿ ಕುರುಡುಮಲೆ ಎಂಬ ಕ್ಷೇತ್ರವಿದೆ. ಇದರ ಪೂರ್ವಹೆಸರು ಕೂಡುಮಲೈ (ಬೆಟ್ಟಗಳು ಕೂಡುವ ಪ್ರದೇಶ) ಎಂದಿದ್ದುದು ಅದೇಕೆ ಕುರುಡಾಯಿತೋ ತಿಳಿಯದು. ಆದರೆ ಕ್ಷೇತ್ರದ ಹಿರಿಮೆಯಂತೂ ಅನೇಕ ಐತಿಹ್ಯಗಳೊಡನೆ ತುಳುಕುಹಾಕಿಕೊಂಡಿದೆ. ಇಲ್ಲಿರುವ ಗಣೇಶನ ಬೃಹತ್ತಾದ ಶಿಲಾಮೂರ್ತಿಯು ತ್ರಿಮೂರ್ತಿಗಳಿಂದಲೇ ಸ್ಥಾಪಿಸಲ್ಪಟ್ಟಿರುವುದಾಗಿ ಐತಿಹ್ಯವಿದೆಯೆಂದ ಮೇಲೆ ಹೇಳುವುದೇನು? ಬೆಟ್ಟದ ತಪ್ಪಲಿನಲ್ಲಿರುವ ಈ ಗಣಪತಿಯ ಗುಡಿ ಸಾಕಷ್ಟು ಪುರಾತನವಾದುದೇನೂ ನಿಜ. ಹದಿನೈದು ಅಡಿಗಳಷ್ಟು ಎತ್ತರದ ಭವ್ಯವಾದ ಶಿಲೆಯ ಮೇಲೆ ಕಂಡರಿಸಲಾಗಿರುವ ಗಣೇಶನ ಶಿಲ್ಪ ಅಸಂಖ್ಯ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
ಗಣೇಶನ ಗುಡಿಯಿಂದ ಊರಿನೊಳಗೆ ಬರುವ ಹಾದಿಯಲ್ಲೇ ಸೋಮೇಶ್ವರನ ದೇವಾಲಯವಿದೆ. ಈ ಪ್ರಾಂತ್ಯವನ್ನು ಹೊಯ್ಸಳರೂ ಚೋಳರೂ ಆಳಿದ್ದು ಚೋಳರ ಕಾಲದಲ್ಲೇ ಈ ದೇಗುಲ ನಿರ್ಮಾಣವಾಗಿರಬಹುದು. ಹೊಯ್ಸಳರ ಕಾಲದಲ್ಲಿ ದೇಗುಲದ ವಿಸ್ತರಣೆಯಾಗಿರಬೇಕು. ಶಾಲಿವಾಹನ ಶಕ 1165ರಲ್ಲಿ ಚೋಳ ಅರಸ ಇಳವಂಜಿರಾಯನೆಂಬಾತನು ಈ ದೇವಾಲಯಕ್ಕೆ ದತ್ತಿದಾನಗಳನ್ನು ಒದಗಿಸಿರುವ ಬಗ್ಗೆ ಶಾಸನವಿದೆ. ಶಿಲ್ಪಕಲೆಯ ದಂತಕಥೆಯಾದ ಜಕಣಾಚಾರಿ ಮತ್ತವನ ಮಗ ಡಂಕಣರ ಕೌಶಲವನ್ನು ಇಲ್ಲಿಯ ನಿರ್ಮಾಣಕ್ಕೂ ಆರೋಪಿಸಲಾಗಿದೆ.
ದೇವಾಲಯದ ಹೊರಗೆ ಪ್ರದಕ್ಷಿಣೆ ಬರುವ ದಾರಿಯಲ್ಲಿ ಒಂದು ಮಂಟಪ. ಗರ್ಭಗುಡಿಯ ಶಿವಲಿಂಗಕ್ಕೆ ಅಭಿಮುಖವಾಗಿ ಕುಳಿತಿರುವ ನಂದಿ. ಹೊರಬಾಗಿಲೆಡೆಯಲ್ಲಿ ಬೃಹದಾಕಾರದ ಗಣಪತಿಯ ಭಗ್ನವಿಗ್ರಹವೊಂದನ್ನು ಕಬ್ಬಿಣದ ಜಾಲದೊಳಗೆ ಸಂರಕ್ಷಿಸಿಡಲಾಗಿದೆ. ಈ ಮೂರ್ತಿಯನ್ನು ಕಡೆದ ಶಿಲೆ ನಾದಗುಣವನ್ನು ಹೊಂದಿರುವ ಕಾರಣಕ್ಕೆ ಜನರ ಪ್ರಹಾರಕ್ಕೆ ಸಿಲುಕಿ ಭಗ್ನಗೊಂಡಿದೆಯಂತೆ. ಸೋಪಾನದ ಇಕ್ಕೆಲಗಳಲ್ಲಿ ಅಂದವಾಗಿ ಕೆತ್ತಿದ ಶರಭ ಶಾರ್ದೂಲಗಳಿವೆ.
ದೇವಾಲಯವನ್ನು ಪ್ರವೇಶಿಸುವ ದ್ವಾರದೆಡೆಯಲ್ಲಿ ಕಲ್ಲುಕಂಬಗಳ ಪ್ರವೇಶ ಮಂಟಪವಿದೆ. ಈ ಮಂಟಪದ ಹಾಗೂ ಒಳಗುಡಿಯ ಕಲ್ಲುಕಂಬಗಳ ಮೇಲಿನ ಶಿಲ್ಪಗಳು ತಮ್ಮ ಸೊಬಗಿನಿಂದ ನೋಡುಗರನ್ನು ಚಕಿತಗೊಳಸುತ್ತವೆ. ಶಿವಲೀಲೆಯ ಹಾಗೂ ಶಿವಭಕ್ತರ ಅನೇಕ ಉಬ್ಬುಶಿಲೆಗಳು ಈ ಫಲಕಗಳ ಮೇಲೆ ಮೂಡಿವೆ. ಭಕ್ತನನ್ನು ಅನುಗ್ರಹಿಸುತ್ತಿರುವ ಶಿವಪಾರ್ವತಿಯರು, ನಂದಿಯ ತಲೆಯ ಮೇಲೆ ಕೈಯಿರಿಸಿ ಅಭಯನೀಡುವ ಶಿವ, ಏಕಪಾದದಲ್ಲಿ ನಿಂತ ಶಿವನನ್ನು ಋಷಿಗಳು ಅರ್ಚಿಸುತ್ತಿರುವುದು, ಲಿಂಗೋದ್ಭವ ಮೂರ್ತಿಗೆ ದೀರ್ಘದಂಡ ನಮಸ್ಕರಿಸುತ್ತಿರುವ ಭಕ್ತ, ಯಕ್ಷಗಂಧರ್ವಕಿನ್ನರಾದಿಗಳಿಂದ ಸೇವಿತನಾದ ಶಿವ, ತ್ರಿನಯನ ಮೂರ್ತಿ, ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡುತ್ತಿರುವ ಯೋಗಿಗೆ ದರ್ಶನವೀಯುತ್ತಿರುವ ಶಿವ, -ಹೀಗೆ ಅನೇಕ ಶಿಲ್ಪಗಳನ್ನು ಇಲ್ಲಿ ಮೂಡಿಸಲಾಗಿದೆ. ಜಲಂದರ, ಅಂಧಕಾಸುರ ಮೊದಲಾದ ರಾಕ್ಷಸರನ್ನು ಸಂಹರಿಸುವ ಶಿವನ ಲೀಲೆಯೂ ಇಲ್ಲಿನ ಕಂಬಗಳ ಮೇಲೆ ಚಿತ್ರಿತವಾಗಿದೆ. ಪಾರ್ವತಿಯನ್ನು ಅಪ್ಪಿಕೊಂಡು ರಮಿಸುತ್ತಿರುವ ಶಿವನ ಶಿಲ್ಪವೊಂದು ರಮಣೀಯವೂ ವಿಶಿಷ್ಟವೂ ಆಗಿದೆ. ಯಮನಿಂದ ತನ್ನನ್ನು ಪಾರುಮಾಡುವಂತೆ ಬೇಡುತ್ತ ಶಿವಲಿಂಗದ ಪಕ್ಕಕ್ಕೆ ನಿಂತ ಮಾರ್ಕಂಡೇಯ, ಅವನತ್ತ ಪಾಶವನ್ನು ಬೀಸಲೇಳಸಿದ ಯಮನನ್ನು ಶಿವಲಿಂಗದೊಳಗಿಂದ ಹೊರಧಾವಿಸುತ್ತಿರುವ ಪದವೊಂದು ಒದೆದು ದೂಡುತ್ತಿರುವ ಶಿಲ್ಪವಂತೂ ಮನೋಹರವಾಗಿದೆ. ಕುರುಮಲೆಯ ಬೆಟ್ಟಗಳಲ್ಲಿ ತಪಸ್ಸು ಮಾಡಿದರೆನ್ನಲಾದ ಕೌಂಡಿನ್ಯಋಷಿಯ ಶಿಲ್ಪವೂ ಈ ಕಂಬಗಳಲ್ಲಿ ಕಾಣುವ ತಪಸ್ವಿಗಳಲ್ಲಿ ಸೇರಿರಬಹುದು. ಅಲ್ಲದೆ, ಶಿವನ ವಿವಿಧ ರೂಪಗಳಾದ ಭಿಕ್ಷಾಟನ ಮೂರ್ತಿ, ಕಂಕಾಳಶಿವ ಮೂರ್ತಿಗಳನ್ನೂ ಚಿತ್ರಿಸಲಾಗಿದೆ.
ಹಲವು ನೃತ್ಯಶಿಲ್ಪಗಳು ಇಲ್ಲಿನ ಕಂಬಗಳಲ್ಲಿ ಒಡಮೂಡಿವೆ. ನೃತ್ಯಗಣೇಶ, ಬೆಣ್ಣೆ ಕೃಷ್ಣನ ನೃತ್ಯರೂಪಗಳಲ್ಲದೆ ಮೂವರು ನರ್ತಕರನ್ನು ನಾಲ್ಕು ಕಾಲುಗಳಲ್ಲಿ ನಿಂತಿರುವಂತೆ ಚಿತ್ರಿಸಿರುವ ಚಮತ್ಕಾರದ ಶಿಲ್ಪವೂ ಇದೆ. ತಪೋಮಗ್ನರಾದ ಋಷಿಗಳೂ ಆನೆ, ಸಿಂಹ ಮತ್ತಿತರ ಪ್ರಾಣಿಗಳೂ ಈ ಕಂಬಗಳ ಮೇಲೆ ಚಿತ್ರತವಾಗಿವೆ. ಅನೇಕ ಯಕ್ಷರು, ನರ್ತಕನರ್ತಕಿಯರು, ವಾದ್ಯಗಾರರು ಈ ಉಬ್ಬುಶಿಲ್ಪಗಳಲ್ಲಿ ಮೂಡಿದ್ದಾರೆ. ದೇಗುಲದ ಒಳಾಂಗಣದಲ್ಲಿ ಇರಿಸಲಾಗಿರುವ ರಾಜರಾಣಿಯರ ಶಿಲ್ಪವು ಈ ದೇಗುಲಕ್ಕೆ ದತ್ತಿಯೊದಗಿಸಿದ ಚೋಳರಾಜ ಇಳವಂಜಿರಾಯ ಮತ್ತವನ ಅರಸಿಯರ ವಿಗ್ರಹಗಳಿರಬಹುದು.
ವಿಶಾಲವಾದ ದೇವಾಲಯದ ಆವರಣದ ಹಿಂಬದಿಗೆ ಬಂದರೆ ಅಲ್ಲೊಂದು ಪುಟ್ಟ ಗುಡಿಯಲ್ಲಿ ಮಯೂರ ವಾಹನನಾದ ಸುಬ್ರಹ್ಮಣ್ಯನನ್ನು ಕಾಣಬಹುದು. ಇದೂ ಒಂದು ವಿಶೇಷ ಶಿಲ್ಪವೇ. ಇದರ ಹಿಂದೆ ಅಮ್ಮನವರ ಗುಡಿ. ಸೋಮೇಶ್ವರ ದೇವಾಲಯದ ಹೊರಗೋಡೆಗಳ ಮೇಲೆ ಭಿತ್ತಿ ಶಿಲ್ಪಗಳಿಲ್ಲ. ಆದರೆ ಸರಳವೂ ಸುಂದರವೂ ಆದ ಕೆತ್ತನೆಗಳಿಂದ ಕೂಡಿದ ಕಂಬಗಳು ಗಮನ ಸೆಳೆಯುತ್ತವೆ. ನೀರಿನ ಹೊರಗಿಂಡಿಯಿರುವ ಪ್ರನಾಳಗಳ ವಿನ್ಯಾಸವಂತೂ ಮನೋಹರವಾಗಿದೆ.
ಪುರಾತನವೂ ಐತಿಹಾಸಿಕವೂ ಆದ ಕುರುಡುಮಲೆ ಸೋಮೇಶ್ವರ ಗುಡಿಯ ದರ್ಶನವೂ ನಿಮಗೆ ಪ್ರಾಚೀನ ಶಿಲ್ಪಕಲೆಯ ಹಲವು ವಿಶಿಷ್ಟ ರೂಪಗಳನ್ನು ಪರಿಚಯಮಾಡಿಸುವುದರಲ್ಲಿ ಸಂದೇಹವಿಲ್ಲ.
Discussion about this post