ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಯು ಮತದಾನ ಮಾಡಿದರೆ ಮಾತ್ರ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಂ.ಎಲ್. ವೈಶಾಲಿ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯ್ತಿ ಮತ್ತು ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ಪುರಲೆಯ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಮತದಾರ ಪಟ್ಟಿಗೆ ನೋಂದಣಿ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ನವೆಂಬರ್ 18ರೊಳಗೆ ಮತದಾರ ಪಟ್ಟಿಗೆ ಹದಿನೆಂಟು ವರ್ಷ ತುಂಬಿದ ಯುವ ಜನರು ಮತದಾರರ ಪಟ್ಟಿಗೆ ನೋಂದಣಿ ಮಾಡಿಸಿ, ತಪ್ಪದೇ ಮತ ಚಲಾಯಿಸಬೇಕು. ವೈಬ್’ಸೈಟ್ ಮೂಲಕವೂ ನಿಮ್ಮ ಮತದಾನ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. http://www.ceokarnataka.kar.nic.in/ ವೈಬ್’ಸೈಟ್’ಗೆ ಭೇಟಿ ನೀಡಿ ಜಿಲ್ಲೆಯ ಹೆಸರು, ಮತದಾರರ ಹೆಸರು, ಲಿಂಗ, ಕ್ಷೇತ್ರದ ಹೆಸರು ಆಯ್ಕೆ ಮಾಡುವ ಮೂಲಕ ನಿಮ್ಮ ಹೆಸರನ್ನು ಹುಡುಕಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿರದ ಅರ್ಹರು ಅರ್ಜಿ ನಮೂನೆ-6ನ್ನು ಪಡೆದು ಭರ್ತಿ ಮಾಡಿ, ಹೆಸರು ನೋಂದಾಯಿಸಿಕೊಳ್ಳಬೇಕು. ಅಲ್ಲದೇ ನಮೂನೆ-7ರ ಮೂಲಕ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಿಸಲೂ ಸಹ ಅವಕಾಶವಿದೆ. ನಮೂನೆ-8ರಲ್ಲಿ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಹೆಸರು ವರ್ಗಾವಣೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದು. ನಮೂನೆ-8ಎ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು/ವಿಳಾಸ ತಿದ್ದುಪಡಿಗೆ ಅವಕಾಶವಿರುತ್ತದೆ ಎಂದು ತಿಳಿಸಿದರು.
ಚುನಾವಣಾ ಆಯೋಗವು ಮತದಾರರ ಸೇರ್ಪಡೆ ಹಾಗೂ ಮತದಾನ ಕುರಿತು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮುಖ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಮತದಾನದ ಮಹತ್ವ ಬಗ್ಗೆ ಅರಿವು ಮಾಡಿಸುವ ಯೋಜನೆಗಳನ್ನು ರೂಪಿಸಿದೆ ಎಂದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ. ಎಸ್. ನಾಗೇಂದ್ರ ಮಾತನಾಡಿ, 18 ತುಂಬಿರುವ ಪ್ರತಿಯೊಬ್ಬರೂ ಸಹ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಸೌಂದರ್ಯವನ್ನು ವೃದ್ಧಿಸುವಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ. ಎಸ್. ನಾಗೇಂದ್ರ, ಡಾ.ಲತಾ ನಾಗೇಂದ್ರ, ಡಾ.ವಿನಯ ಶ್ರೀನಿವಾಸ್, ಡಾ.ಎಸ್.ಎಂ. ಕಟ್ಟಿ, ಡಾ.ಎಸ್. ಸುರೇಶ್, ಡಾ.ಆರ್.ಪಿ. ಪೈ ಮೊದಲಾದವರು ಉಪಸ್ಥಿತರಿದ್ದರು.
Discussion about this post