ಸಾಮಾನ್ಯವಾಗಿ ವೈದ್ಯರ ಬಳಿ ಹೋದಾಗ ರೋಗಿಗಳ ಕಿವಿ ಬೀಳುವ ಪದ ವೈರಲ್ ಫಿವರ್.
ವೈರಲ್ ಜ್ವರ ಎಂದರೆ ವೈರಾಣುಗಳ ಸೋಂಕಿನಿಂದ ಉಂಟಾಗುವ ಜ್ವರವೇ ಆಗಿದೆ. ಬ್ಯಾಕ್ಟೀರಿಯಾ, ವೈರಾಣು, ಶಿಲೀಂದ್ರ ಮತ್ತು ಅನೇಕ ಬಗೆಯ ಸೂಕ್ಷಜೀವಿಗಳು ದೇಹವನ್ನು ಪ್ರವೇಶಿಸುತ್ತವೆ. ದೇಹದಲ್ಲಿನ ರೋಗ ನಿರೋಧ ಶಕ್ತಿಯು ವೈರಾಣುಗಳೊಂದಿಗೆ ಹೋರಾಡುತ್ತದೆ.
ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ವೈರಲ್ ಫೀವರ್ ಬಗ್ಗೆ ಆರಂಭದ ಹಂತದಲ್ಲೇ ತಿಳಿದುಕೊಂಡರೆ ಬೇಗ ಗುಣಪಡಿಸಬಹುದು. ಇದರ ಲಕ್ಷಣವೇನು ಇದರಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
ಲಕ್ಷಣಗಳೇನು?
ವಿಪರೀತ ಬಿಸಿ, ನಡುಕ, ಸುಸ್ತು, ಗಂಟಲಲ್ಲಿ ಕೊರೆತ, ಕಣ್ಣು ಕೆಂಪಾಗುವುದು, ಕೆಮ್ಮು, ಗಂಟುಗಳ ನೋವು, ತ್ವಚೆಯ ಮೇಲೆ ಗುಳ್ಳೆಗಳು, ಸುಸ್ತು, ಮಾಂಸಖಂಡಗಳ ನೋವು, ನೆಗಡಿ, ತಲೆನೋವು ಇವೆಲ್ಲಾ ಕಾಣಿಸಿಕೊಂಡರೆ ಇದು ವೈರಲ್ ಫೀವರ್ ಲಕ್ಷಣ ಎಂಬುದು ನೀವು ತಿಳಿದುಕೊಳ್ಳಬೇಕು. ಭಯ ಪಡುವ ಅವಶ್ಯಕತೆ ಇಲ್ಲ. ಬದಲಾಗಿ ಡಾಕ್ಟರ್ ಬಳಿ ಹೋಗಬೇಕಾಗಿಯೂ ಇಲ್ಲ. ಮನೆಯಲ್ಲೇ ಸಿಗುವ ಔಷಧ ಸೇವಿಸಿ ಗುಣ ಮುಖರಾಗಬಹುದು.
ಪ್ರಮುಖ ಕಾರಣ
ವೈರಲ್ ಜ್ವರದ ಹೆಚ್ಚಳಕ್ಕೆ ಪ್ರಮುಖ ಕಾರಣ ಬದಲಾಗುತ್ತಿರುವ ವಾತಾವರಣ ಎನ್ನಲಾಗುತ್ತಿದೆ. ಶೀತಗಾಳಿ, ಆಗಾಗ ಬರುವ ಮಳೆ, ಮೋಡ ಕವಿದ ವಾತಾವರಣದಿಂದಾಗಿ ವೈರಾಣುಗಳ ಸಂಖ್ಯೆ ಹೆಚ್ಚುತ್ತದೆ. ಇದರ ಪರಿಣಾಮ ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವ ಮಕ್ಕಳು ಬಹುಬೇಗ ಜ್ವರಕ್ಕೆ ಒಳಗಾಗುತ್ತಿದ್ದಾರೆ.
ಆದರೆ ಮಕ್ಕಳಲ್ಲಿ ಹೆಚ್ಚಳಕ್ಕೆ ಶಾಲೆಗಳನ್ನು ದೂರಲಾಗುತ್ತಿದೆ. ಸಾಮಾನ್ಯವಾಗಿ ಈ ಜ್ವರ ಕಾಣಿಸಿಕೊಂಡಾಗ 4-5 ದಿನವಾದರೂ ಕಾಳಜಿ ವಹಿಸಬೇಕು. ಆದರೆ ಹಾಜರಾತಿ, ಅಭ್ಯಾಸ ಮತ್ತಿತರ ಕಾರಣಗಳಿಗೆ ಜ್ವರ ಪೀಡಿತ ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿದೆ. ಇದರ ಪರಿಣಾಮ ಸೋಂಕು ತಗುಲಿರುವ ಮಗುವಿನಿಂದ ಉಳಿದ ಮಕ್ಕಳಿಗೆ ಬಹಳ ಸುಲಭವಾಗಿ ಸೋಂಕು ಹರಡುತ್ತಿದೆ. ಇದರ ಪರಿಣಾಮ ಜ್ವರದ ಸಂಖ್ಯೆ ಹೆಚ್ಚಿದೆ ಎನ್ನಲಾಗುತ್ತಿದೆ.
ಮುನ್ನೆಚ್ಚರಿಕಾ ಕ್ರಮಗಳು
- ಕಾಯಿಸಿ, ಆರಿಸಿದ ನೀರನ್ನೇ ಕುಡಿಯಿರಿ
- ಆಹಾರದಲ್ಲಿ ಸ್ವಚ್ಛತೆ ಕಾಪಾಡಬೇಕು
- ಬಿಸಿಯಾದ ತಾಜಾ ಆಹಾರ ಸೇವಿಸಿ
- ಮೈ ತುಂಬಾ ಬಟ್ಟೆ ಹಾಕಿಕೊಳ್ಳಿ
- ನಿಮ್ಮ ಸುತ್ತಲ ಪರಿಸರದ ಸ್ವಚ್ಛತೆ ಕಾಪಾಡಿ
- ಸೊಳ್ಳೆಗಳಿಂದ ದೂರವಿರಲು ಸೊಳ್ಳೆಪರದೆ ಬಳಸಿ
- ತೊಟ್ಟಿ, ಸಂಪುಗಳನ್ನು ತೆರೆದಿಡಬೇಡಿ
- ನೀರು ಒಂದೆಡೆ ನಿಲ್ಲದಂತೆ ನಿಗಾ ವಹಿಸಿ
- ಸಮತೋಲಿತ ಆಹಾರ, ಶುದ್ಧ ನೀರು ಸೇವಿಸಿ
- ಶೌಚದ ನಂತರ ಕೈಗಳನ್ನು ಸೋಪಿನಲ್ಲಿ ತೊಳೆಯರಿ
- ಕೆಮ್ಮುವಾಗ, ಸೀನುವಾಗ ಕರ್ಚೀಫ್ ಅಡ್ಡವಿಟ್ಟುಕೊಳ್ಳಿ
- ಜ್ವರ ಬಂದಕೂಡಲೇ ವೈದ್ಯರನ್ನು ಸಂಪರ್ಕಿಸಿ
ಲೇಖನ: ಡಾ.ಕೆ.ಸಿ. ಶೇಖರಪ್ಪ
ಮೆಡಿಸಿನ್ ವಿಭಾಗ ಮುಖ್ಯಸ್ಥರು
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ
ಶಿವಮೊಗ್ಗ
Discussion about this post