ಭಾರತ ವಿಶ್ವದ ಮಿಕ್ಕೆಲ್ಲ ದೇಶಗಳಿಗಿಂತ ಬಹಳಷ್ಟು ವಿಭಿನ್ನ. ಇದಕ್ಕೆ ಕಾರಣ ಇಲ್ಲಿನ ಸಂಸ್ಕೃತಿ ಸಂಪ್ರದಾಯ ಆಚರಣೆ ಎಂದರೆ ತಪ್ಪಲ್ಲ. ಸೃಷ್ಠಿಯ ಪ್ರತಿ ಕಣ ಕಣದಲ್ಲೂ ದೇವರನ್ನು ಕಾಣುವ ಕಣ ಕಣಕ್ಕೂ ಪ್ರಾಮುಖ್ಯತೆ ಕೊಡುವ ದೇಶ ಇದೆ ಎಂದಾದರೆ ಅದು ಕೇವಲ ಭಾರತ ಮಾತ್ರ.
ಹೀಗಿರುವಾಗ ಈ ಸುಂದರ ಸೃಷ್ಟಿಯನ್ನು ನೋಡಿ ಆಸ್ವಾದಿಸಲು ಕಾರಣವಾಗಿರುವ ಬೆಳಕಿಗೆ ಪ್ರಾಮುಖ್ಯತೆ ನೀಡದಿದ್ದರೆ ಹೇಗೆ ಹೇಳಿ? ಇದಕ್ಕಾಗಿಯೇ ಆಚರಣೆ ಮಾಡುವ ಹಬ್ಬವೇ ದೀಪಗಳ ಹಬ್ಬ ದೀಪಾವಳಿ.
ದೀಪಾವಳಿ ಮೂಲ ಇರುವುದು ತ್ರೇತಾಯುಗದಲ್ಲಿ. ಮರ್ಯಾದಾ ಪುರುಷೋತ್ತಮ ಶ್ರೀರಾಮ ವನವಾಸ ಮುಗಿಸಿ ಅಯೋಧ್ಯೆಗೆ ಬಂದ ದಿನ ಪುರ ಜನರು ಮನೆ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ತಮ್ಮ ಸಂತಸ ಆಚರಣೆ ಮಾಡಿದರು.
ಹೀಗೆ ದೀಪಾವಳಿ ಆಚರಣೆ ಬೆಳೆದು ಇಂದಿಗೂ ಅಷ್ಟೇ ಪ್ರಾಮುಖ್ಯತೆ, ಪಾವಿತ್ರತೆ ಉಳಿಸಿಕೊಂಡು ಬಂದಿದೆ ದೀಪಾವಳಿ. ದೀಪಾವಳಿ ಎರಡು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಮೊದಲ ದಿನ ನೀರು ತುಂಬಿ ಮರುದಿನ ಎಣ್ಣೆ ಸ್ನಾನ ಮಾಡಿ ಸಂಜೆ ಮನೆಯ ಸುತ್ತ ದೀಪ ಬೆಳಗಿಸಲಾಗುತ್ತದೆ. ಈ ಸೌಂದರ್ಯ ನೋಡಲು ಎರಡು ಕಣ್ಣು ಸಹ ಸಾಲದು. ಇದರ ಗೂಡಾರ್ಥ ಅಂಧಕಾರ ರೂಪಿ ನಕಾರಾತ್ಮಕ ಅವಗುಣಗಳನ್ನು ದೂರ ಮಾಡಿ ಸಕಾರಾತ್ಮಕ ಸದ್ಗುಣಗಳನ್ನು ರೂಪಿಸುವುದಾಗಿದೆ. ಎಂದರೆ ಇನ್ನೂ ಸಣ್ಣ ಮಕ್ಕಳಿಗೆ ದೀಪಾವಳಿ ಎಂದರೆ ಎಲ್ಲಿಲ್ಲದ ಹಿಗ್ಗು. ಮನೆಯ ಹಿರಿಯರಿಗಿಂತ ಹೆಚ್ಚಿನ ಕುತೂಹಲ, ಕಾತರತೆ ಮಕ್ಕಳ ಮನಸ್ಸಿನಲ್ಲಿ ಮೂಡಿರುತ್ತದೆ.
ಅದರಲ್ಲೂ ಮಕ್ಕಳ ಮನಸ್ಸು ಕದಿಯುವುದು ಢಂ ಢಂ ಸದ್ದು ಮಾಡುವ ಪಟಾಕಿಗಳು. ಆದರೆ ಇಲ್ಲಿ ಹಿರಿಯರಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. ಅದೇನೆಂದರೆ ಪಟಾಕಿ ಮಕ್ಕಳ ಕೈಗೆ ಕೊಡುವಾಗ ಚೂರು ಜಾಗೃತಿ ವಹಿಸಿ. ಏಕೆಂದರೆ ನಿಮ್ಮ ಒಂದು ಚಿಕ್ಕ ನಿರ್ಲಕ್ಷ್ಯ ನಿಮ್ಮ ಮಕ್ಕಳ ಇಡೀ ಬದುಕನ್ನು ಬೆಳಕಿನ ಹಬ್ಬದಂದೇ ಅಂಧಕಾರಕ್ಕೆ ತಳ್ಳಬಹುದು. ಪ್ರತಿ ವರ್ಷ ಇದೇ ಸುದ್ದಿ ಕೇಳಿ ದೀಪಾವಳಿ ಎಂದು ಕೇಳಿದ ಕೂಡಲೇ ಸಂತಸದ ಬದಲು ಮನಸ್ಸು ಒಂದು ರೀತಿ ಭಯಕ್ಕೆ ಒಳಗಾಗುತ್ತದೆ. ಈ ವರ್ಷ ಅಂತಹ ಯಾವುದೇ ದುರ್ಘಟನೆಗಳ ಬಗ್ಗೆ ಕೇಳದಂತಾಗಲಿ ಮತ್ತು ನಿಮ್ಮ ಬದುಕಿನ ತುಂಬಾ ಸಂತಸದ ಬೆಳಕನ್ನು ಮೂಡಿಸಲಿ ಎನ್ನುವ ಆಶಯದೊಂದಿಗೆ ಹಾಗೂ ತಮಗೆಲ್ಲ ದೀಪಾವಳಿ ಶುಭಾಶಯ ತಿಳಿಸುತ್ತಾ ನನ್ನ ಲೇಖನ ಮುಗಿಸುತ್ತೇನೆ.
ನಮಸ್ಕಾರ…
Discussion about this post