ವಿಶೇಷ ಸೂಚನೆ: ಜನಸಾಮಾನ್ಯರಿಗೆ ಹಾಗೂ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಾದ ಪಟ್ಟಣ ಪಂಚಾಯ್ತಿಯು ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಕೆಲಸಗಳಿಗೆ ಅಡ್ಡಗಾಲಾಗಿ ಪರಿಣಮಿಸಿದೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಹಲವು ನಾಗರಿಕರು ಹಾಗೂ ಬಲ್ಲ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಇಲ್ಲಿನ ಹಿಡನ್ ವಿಚಾರಗಳನ್ನು ಸಮಾಜದ ಮುಂದೆ ತೆರೆದಿಡುವ ಕಾರ್ಯವನ್ನು ಈ ವಿಶೇಷ ವರದಿಯಲ್ಲಿ ಮಾಡಲಾಗಿದೆ. ದಯಮಾಡಿ ಮಾನ್ಯ ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ, ಈ ಕುರಿತಂತೆ ಸತ್ಯಾಸತ್ಯತೆಗಳನ್ನು ಹೊರೆಗೆಳೆದು ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕಿದೆ.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇದು ಸೊರಬ ಪಟ್ಟಣ ಪಂಚಾಯ್ತಿಯ ಭ್ರಷ್ಟಾಚಾರದ ಕಥೆ. ಹೇಳಿದಷ್ಟು ಮುಗಿಯುವುದಿಲ್ಲ, ಬಗೆದಷ್ಟೂ ಹೊರ ಬರುತ್ತಲೇ ಇದೆ. ಯಾವ ಇಲಾಖೆಯಲ್ಲೂ ನಡೆಯದಷ್ಟು ಅವ್ಯವಹಾರ ಇಲ್ಲಿ ನಡೆಯುತ್ತಿರುವ ಅನುಮಾನ ಕಾಡುತ್ತದೆ.
ಸಾಮಾನ್ಯ ಜನರು ತಮ್ಮ ಕೆಲಸಗಳಿಗೆ ಪಟ್ಟಣ ಪಂಚಾಯ್ತಿಗೆ ಹೋದರೆ ಅವರನ್ನು ಸತಾಯಿಸಿ ಅಲೆದಾಡಿಸಿ ನಂತರ ಲಂಚ ಪಡೆದು ಕೆಲಸ ಮಾಡಿಕೊಡಲು ಪ್ರಾರಂಭಿಸುತ್ತಾರೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಮುಖ್ಯಾಧಿಕಾರಿಯೇ ಸರ್ವಾಧಿಕಾರಿ
ಇಲ್ಲಿನ ಪಟ್ಟಣ ಪಂಚಾಯ್ತಿಯ ಮುಖ್ಯ ಅಧಿಕಾರಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಸಾರ್ವಜನಿಕರ ಉದ್ದಿಮೆ ಪರವಾನಗಿ, ನವೀಕರಣ, ಕಂದಾಯ, ಪ್ರಮಾಣಪತ್ರಗಳು ಮುಂತಾದ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಕಾನೂನಿನ ನೆಪ ಹೇಳಿ ಸತಾಯಿಸುತ್ತಾರೆ. ತುರ್ತು ಅವಶ್ಯಕತೆ ಇರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆದು ಕೆಲಸ ಮಾಡುವುದು ಇವರ ಅಭ್ಯಾಸವಾಗಿದೆ.
ಪಟ್ಟಣದ ಯಾವುದೇ ಭಾಗದಲ್ಲಿ ಯಾವುದೇ ಕಟ್ಟಡ ಕಾಮಗಾರಿಗಳು ರಿಪೇರಿ ಮತ್ತಿತರ ಕೆಲಸಗಳು ನಡೆಯುವಲ್ಲಿ ಇವರ ಸಿಬ್ಬಂದಿ ಮತ್ತು ಹಿಂಬಾಲಕರು ಹಾಜರಿದ್ದು ಅವರನ್ನು ಕಾನೂನಿನ ನೆಪದಲ್ಲಿ ಹೆದರಿಸಿ ಪಿಡಿಸಿ ಕೆಲಸ ನಿಲ್ಲಿಸಿ ಹೋಗುತ್ತಾರೆ. ಹೀಗೆ ನಿಂತ ಕೆಲಸವನ್ನು ಪ್ರಾರಂಭಿಸಲು ಮತ್ತೆ ಇವರನ್ನು ಸಂಪರ್ಕಿಸಿ ಅವರ ಬೇಡಿಕೆಯನ್ನು ಪೂರೈಸಿದರೆ ಮಾತ್ರ ನೀವು ಕೆಲಸ ಮುಂದುವರೆಸಬಹುದು.
ಯಾವುದೇ ಕಾಮಗಾರಿಗಳ ಟೆಂಡರುಗಳನ್ನು ಇವರಿಗೆ ಬೇಕಾದ ವ್ಯಕ್ತಿಗಳಿಗೆ ಮತ್ತು ಇಲ್ಲಿನ ಸಿಬ್ಬಂದಿಗಳಿಗೆ ಹಾಕಿ ಕೊಡುತ್ತಾರೆ ಎಂಬ ಆರೋಪ ಸಹ ಕೇಳಿ ಬರುತ್ತಿದೆ.
ಮನೆ ಮತ್ತು ನೀರಿನ ಕಂದಾಯಗಳನ್ನು ವಸೂಲಿ ಮಾಡುವಾಗ ಹಳೆಯ ರಸೀದಿ ಬುಕ್ಕುಗಳನ್ನು ಬಳಸಿದ ವರ್ಷಗಳವರೆಗೆ ಬಾಕಿ ಇರುವ ಹಣವನ್ನು ಸರ್ಕಾರಕ್ಕೆ ಕಟ್ಟದೆ ಕೇವಲ ಆನ್ ಲೈನ್ ಆಗಿರುವ ವರ್ಷದ ನಂತರದ ಹಣವನ್ನು ಮಾತ್ರ ಇಲಾಖೆಗೆ ಕಟ್ಟುತ್ತಿದ್ದಾರೆ ಎಂಬ ಆರೋಪವನ್ನು ಸಿಬ್ಬಂದಿಗಳೇ ಮಾಡುತ್ತಿದ್ದಾರೆ.
ಸಿಬ್ಬಂದಿಗಳ ದುಂಡಾವರ್ತನೆ
ಪಟ್ಟಣ ಪಂಚಾಯ್ತಿಯ ಸಿಬ್ಬಂದಿಗಳು ಎಲ್ಲರಿಗಿಂತ ಹೆಚ್ಚಿನ ಅಧಿಕಾರವನ್ನು ತಾವೇ ಹೊಂದಿದ್ದಾರೆ ಎಂಬ ಅಹಂಕಾರ ಹೊಂದಿದ್ದಾರೆ. ಎಲ್ಲಿ ಯಾವ ಕೆಲಸ ನಡೆಯುತ್ತಿದೆ, ಯಾರ್ಯಾರಿಗೆ ಏನೇನು ಕಿರುಕುಳ ಕೊಡಬಹುದೆಂಬ ಸವಿವರ ವರದಿಯನ್ನು ಮುಖ್ಯ ಅಧಿಕಾರಿಗಳಿಗೆ ನೀಡುವುದು ಮತ್ತು ಅವುಗಳನ್ನು ಇವರ ಮಧ್ಯಸ್ಥಿಕೆಯಲ್ಲಿ ಬಗೆಹರಿಸುವುದು ಇವರ ದಿನನಿತ್ಯದ ಕೆಲಸವಾಗಿದೆ. ಇದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಆಡಿಯೋ ತುಣುಕು ಸಾಕ್ಷಿಯಾಗಿ ತೋರುತ್ತದೆ.
ಬಹಳ ವರ್ಷಗಳಿಂದ ಒಂದೇ ಸ್ಥಳದಲ್ಲಿ ಒಂದೇ ಹುದ್ದೆಯಲ್ಲಿ ಅನೇಕ ಸಿಬ್ಬಂದಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವರ್ಗಾವಣೆಯ ಯಾವ ನಿಯಮಗಳೂ ಅನ್ವಯಿಸುವುದಿಲ್ಲ. ಇನ್ನು ಗುತ್ತಿಗೆ/ತಾತ್ಕಾಲಿಕ ಸಿಬ್ಬಂದಿಗಳಂತೂ ಅದೆಷ್ಟು ಬಲಿತು ಹೋಗಿದ್ದಾರೆ ಎಂದರೆ ಇವರು ಅಧಿಕಾರಿಗಳನ್ನು ಮತ್ತು ಆಡಳಿತ ವ್ಯವಸ್ಥೆಯನ್ನೇ ನಿಯಂತ್ರಿಸುತ್ತಿದ್ದಾರೆ. ಎಂತಹ ಉನ್ನತ ಅಧಿಕಾರಿಯಾದರೂ ಇವರ ಮಾತನ್ನು ಮೀರುವುದಿಲ್ಲ ಎಂಬ ಆರೋಪ ಇತ್ತೀಚೆಗೆ ಬಲವಾಗಿ ಕೇಳಿ ಬರುತ್ತಿದೆ.
ಶಾಸಕರಿಗೂ ಹೆದರದ ಸಿಬ್ಬಂದಿ ವರ್ಗ
ಇಲ್ಲಿನ ಸಿಬ್ಬಂದಿ ವರ್ಗ ಎಷ್ಟು ಬೆಳೆದಿದ್ದಾರೆ ಎಂದರೆ ಇವರನ್ನು ಯಾರು ಏನೂ ಮಾಡಲಾರರು ಎಂಬ ಪರಿಸ್ಥಿತಿ ಬಂದಿದೆ. ಕೆಲವು ದಿನಗಳ ಹಿಂದೆ ಶಾಸಕರು, ಪಟ್ಟಣ ಪಂಚಾಯ್ತಿ ಸಿಬ್ಬಂದಿ ವರ್ಗ ಮತ್ತು ಎಲ್ಲಾ ವಾರ್ಡಿನ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವ್ಯಕ್ತಿಯೊಬ್ಬರು ಕಂದಾಯದ ಜೊತೆಗೆ ಹೆಚ್ಚುವರಿ ಲಂಚದ ಹಣವನ್ನು ಪಟ್ಟಣ ಪಂಚಾಯ್ತಿ ಸಿಬ್ಬಂದಿಗೆ ನೀಡಿದ್ದರ ಬಗ್ಗೆ ಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಮಾನ್ಯ ಶಾಸಕರು ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಪಡೆದ ಹೆಚ್ಚುವರಿ ಹಣವನ್ನು ವಾಪಸ್ ನೀಡುವಂತೆ ಸೂಚಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಇಂದು ಅದೇ ಸಿಬ್ಬಂದಿ ಶಾಸಕರು ಮತ್ತು ಇನ್ನಿತರರ ಮೇಲೆ ದೂರು ದಾಖಲಿಸಿದ್ದಾರೆ ಎಂಬ ಸುದ್ದಿ ಬಂದಿದ್ದು, ಇದು ಇನ್ನೂ ಖಚಿತಗೊಳ್ಳಬೇಕಿದೆ.
ಭೂಗಳ್ಳರಿಗೆ ವರವಾದ ಆಡಳಿತ ಯಂತ್ರ
ಸೊರಬ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಹಿರೇ ಶಕುನ ಗ್ರಾಮದ ಕೆಲವು ಸರ್ವೆ ನಂಬರ್ ಗಳಲ್ಲಿ ದನಕ್ಕೆ ಮುಫತ್ತಾಗಿ ಗೋಮಾಳದ ಜಮೀನನ್ನು ಬಹಳ ವರ್ಷಗಳ ಹಿಂದೆಯೇ ಮೀಸಲಿರಿಸಲಾಗಿತ್ತು. ಇದನ್ನು ಕೆಲವು ಜನರು ಅಕ್ರಮ ಸಾಗುವಳಿ ಮಾಡಿಕೊಂಡು ಬಗರ್ ಹುಕುಂ ಮಂಜೂರಾತಿ ಮಾಡಿಸಿಕೊಂಡು ಖಾತೆ ಪಹಣಿ ಪಡೆದಿದ್ದರು. ಸಾಗರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಈ ಕುರಿತಂತೆ ವ್ಯಾಜ್ಯ ನಡೆದು ಹಿರೇ ಶಕುನ ಮತ್ತು ಜೊತೆಗಿನ ವಾರ್ಡುಗಳಲ್ಲಿ ಇರುವ ಜಾನುವಾರುಗಳ ಸಂಖ್ಯೆಗಳ ಮೇಲೆ ಸರ್ಕಾರ ನಿಗದಿಪಡಿಸಿರುವ ಅಗತ್ಯವಿರುವ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಈ ಮಂಜೂರಾತಿಯನ್ನು ರದ್ದುಪಡಿಸಿರುತ್ತದೆ.
ಹೀಗೆ ರದ್ದುಪಡಿಸಿದ ಜಮೀನನ್ನು ಮರಳಿ ಪಡೆಯಲು ಕೆಲವು ಸಾಗುವಳಿದಾರರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯನ್ನು ಬಳಸಿಕೊಂಡು ಸೊರಬ ಪಟ್ಟಣದ ವ್ಯಾಪ್ತಿಯಲ್ಲಿರುವ ದನಗಳನ್ನು ಹಿಡಿದು ಬೇರೆಕಡೆಗೆ ಸಾಗಿಸಿ ಇಲ್ಲಿನ ಜಾನುವಾರುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತಿದ್ದಾರೆ. ಈ ಮೂಲಕ ಗೋಮಾಳವನ್ನು ಬಗರ್ ಹುಕುಂ ಸಾಗುವಳಿದಾರರಿಗೆ ಖಾತೆ ಮಾಡಿಕೊಡಲು ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಅಸ್ಪೃಶ್ಯರಾದ ಕಾನಕೇರಿ ನಿವಾಸಿಗಳು
ಸೊರಬ ಪಟ್ಟಣಕ್ಕೆ ಸೇರಿದಂತೆ ಇರುವ ಸರ್ವೇ ನಂಬರ್ 113 ರಲ್ಲಿನ ಜನರು ಸಂಪೂರ್ಣ ಅಸ್ಪೃಶ್ಯರಂತೆ ಆಗಿದ್ದಾರೆ. ಇವರಿಗೆ ಯಾವುದೇ ವ್ಯವಸ್ಥೆಯನ್ನು ಮಾಡಿಕೊಡಲು ಪಟ್ಟಣ ಪಂಚಾಯ್ತಿ ಕಾನೂನಿನ ನೆಪ ಹೇಳಿ ಒಪ್ಪುವುದಿಲ್ಲ. ಜನರು ತಾವೇ ಸ್ವತಹ ತಮ್ಮ ಖರ್ಚಿನಿಂದ ಮನೆ ಕೊಟ್ಟಿಗೆಗಳನ್ನು ರಿಪೇರಿ ಮಾಡಿಕೊಳ್ಳಲು ಹೋದರೆ ಅದಕ್ಕೂ ಬಿಡುವುದಿಲ್ಲ. ಇಲ್ಲಿನ ಜನ ನೀರಿನ ಸಂಪರ್ಕ ಪಡೆಯಲು ವಿದ್ಯುತ್ ಸಂಪರ್ಕ ಪಡೆಯಲು ಯಾವುದೇ ಗೃಹ ಉದ್ಯೋಗ ಉದ್ದಿಮೆಗಳನ್ನು ಮಾಡಲು ಅನುಮತಿಯನ್ನು ನೀಡುವುದಿಲ್ಲ. ಮಾಡುತ್ತಿರುವ ಉದ್ದಿಮೆಗಳನ್ನು ಅಧಿಕಾರಿಗಳು ನಿಲ್ಲಿಸುತ್ತಿದ್ದಾರೆ. ಮನೆ ಕಟ್ಟಿಕೊಳ್ಳಲು ಕುಡಿಯುವ ನೀರಿಗಾಗಿ ಬೋರ್ವೆಲ್ ಕೊರೆಸಲು ಅನುಮತಿಯನ್ನು ನೀಡುವುದಿಲ್ಲ. ಪೊಲೀಸರನ್ನು ನಿಯೋಜಿಸಿ ಹೆದರಿಸುತ್ತಿದ್ದಾರೆ.
ಮಳಿಗೆಗಳ ಹರಾಜಿನಲ್ಲಿ ಯೂ ಅಕ್ರಮ?
ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಲಾಗಿರುವ ಮಳಿಗೆಗಳನ್ನು ಹರಾಜು ಮಾಡುವಾಗಲೂ ಅನೇಕ ಅಕ್ರಮಗಳು ನಡೆದಿದೆ ಎನ್ನಲಾಗುತ್ತಿದೆ. ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಹರಾಜು ನಡೆಸಿ ನಂತರ ಅದನ್ನು ಯಾರೂ ಪಡೆಯದೆ ಬಿಡುವುದು ಹೀಗೆ ಬಿಟ್ಟ ಮಳಿಗೆಗಳನ್ನು ಅಧಿಕಾರಿಗಳು ತಾವೇ ಸ್ವತಹ ಅತಿ ಕಡಿಮೆ ದರ ನಿಗದಿಪಡಿಸಿ ನೀಡುತ್ತಾರೆ ಎಂಬ ಆರೋಪವೂ ಇದೆ. ಅಲ್ಲದೆ ಒಮ್ಮೆ ಹರಾಜಾದ ಮಳಿಗೆಗಳು ಇನ್ನೂ ಮರು ಹರಾಜಾಗಿದೆ ಹಳೆಯ ಬಾಡಿಗೆ ದರದಲ್ಲಿ ಮುಂದುವರೆಯುತ್ತವೆ. ಇದಕ್ಕೆ ಈ ಕಟ್ಟಡ ಗಳಲ್ಲಿರುವ ಬಾಡಿಗೆದಾರರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮಾಮೂಲಿ ಸಂದಾಯ ಮಾಡಿ ಹೊಸ ಹರಾಜನ್ನು ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಜನರು ಮಾಡುತ್ತಿದ್ದಾರೆ.
ಒಮ್ಮೆ ಹರಾಜಿನಲ್ಲಿ ಯಾರಾದರೂ ಕಟ್ಟಡ ಬಾಡಿಗೆಗೆ ಪಡೆದರೆ ಅವರನ್ನು ಆ ಮಳಿಗೆಯಿಂದ ಬಿಡಿಸಲು ಯಾವ ಅಧಿಕಾರಿಯಿಂದಲೂ ಸಾಧ್ಯವಿಲ್ಲವೆಂದು ಇತರ ವ್ಯಾಪಾರಸ್ಥರು ಆರೋಪಿಸುತ್ತಾರೆ.
ಇದ್ದೂ ಇಲ್ಲದಂತಾದ ಜನಪ್ರತಿನಿಧಿಗಳು
ಸೊರಬ ಪಟ್ಟಣ ಪಂಚಾಯ್ತಿಗೆ ಚುನಾವಣೆ ನಡೆದು ಸುಮಾರು ಐದು ತಿಂಗಳು ಕಳೆದರೂ ಇನ್ನೂ ಯಾವುದೇ ಪದಾಧಿಕಾರಿಗಳ ನೇಮಕ ಆಗಿರುವುದಿಲ್ಲ. ಇಲ್ಲಿನ ಜನರು ತಮ್ಮ ವಾರ್ಡಿನ ಜನಪ್ರತಿನಿಧಿಗೆ ತಮ್ಮ ಸಮಸ್ಯೆಯನ್ನು ಹೇಳಿದರೆ ಅವರು ನಾವು ಇನ್ನೂ ಅಧಿಕಾರವನ್ನು ಪಡೆದಿಲ್ಲ ನಮ್ಮಿಂದ ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ.
ಸರ್ಕಾರದಿಂದ ಅನುಮತಿ ಬರುವವರೆಗೆ ಎನ್’ಓಸಿ ಸಿಗುವವರೆಗೆ ಇಲ್ಲಿನ ಜನರು ವಿದ್ಯುತ್ ಬಳಸುವಂತಿಲ್ಲ. ನೀರು ಕುಡಿಯುವಂತಿಲ್ಲ. ರಸ್ತೆಗಳಿಲ್ಲ. ಮನೆ ಕಟ್ಟುವಂತಿಲ್ಲ. ಪಶುಪಾಲನೆ ಮಾಡುವಂತಿಲ್ಲ. ಅನುದಾನಗಳು ಸಿಗುವುದಿಲ್ಲ. ಯಾವುದು ಇಲ್ಲ ಇಲ್ಲ ಇಲ್ಲ…
Get in Touch With Us info@kalpa.news Whatsapp: 9481252093
Discussion about this post