ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಎನ್ನುವ ಸೃಷ್ಟಿ ಸಾಮಾನ್ಯ ಅಂದರೆ ನನ್ನ ಸೃಷ್ಟಿ ಇಷ್ಟೇ ಅಲ್ಲ ಎಲ್ಲದಕ್ಕೂ ಸಲಾಲೊಡ್ಡುವ ಮತ್ತೊಂದು ಜೀವಿ ನನ್ನ ರಚನೆ ಎನ್ನುತ್ತಲೇ ಮುಂದಿಟ್ಟಿದ್ದು ಲೈಂಗಿಕ ಅಲ್ಪಸಂಖ್ಯಾತರೆನ್ನುವ ತೃತೀಯ ಲಿಂಗಿಗಳನ್ನು ಗಂಡು ಹೆಣ್ಣುಗಳಂತೆಯೇ ಭಾವನೆಗಳು ಹಾಗೂ ಗೌರವಯುವತವಾಗಿ ಬಾಳಲು ಎಲ್ಲಾ ಹಕ್ಕು ಇರುವ ಇವರದು ಸವಾಲಿನ ಬದುಕು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಟ್ಟುಪಾಡುಗಳು, ಸವಾಲುಗಳು, ಸಂಕಷ್ಟಗಳು ಎಲ್ಲವನ್ನೂ ಮಟ್ಟಿನಿಂತು ಸಾಧನೆಯ ಛಲಹಿಡಿದು ಯಶಸ್ವಿ ಬದುಕನ್ನು ನಡೆಸುತ್ತಿರುವವರು ತಮಿಳುನಾಡಿನ ರೇವತಿಯವರು.
ವಾಸ್ತವ ಹಾಗೂ ಕಾಲ್ಪನಿಕ ಜಗತ್ತಿನ ಮಧ್ಯದ ಕೊಂಡಿಯಾದ ರಂಗಭೂಮಿ, ಕಲಾವಿದರ ಪ್ರತಿಭೆಯ ವಿಕಸನಕ್ಕೆ ಸೃಷ್ಟಿಯಾದ ಸುಂದರ ವೇದಿಕೆ. ನಾಟಕ ಕಲ್ಪನಾಲೋಕಕ್ಕೂ ವಾಸ್ತವಿಕ ಜೀವನಕ್ಕೂ ನಡುವೆ ಹಾಯಬಲ್ಲ ಸುಂದರ ಕಲೆ.
ರಂಗಕರ್ಮಿಗಳೆಂದರೆ ಕೇವಲ ರಂಗ ಸಜ್ಜಿಕೆ, ವಿನ್ಯಾಸ, ಸಂಯೋಜನೆ ಕಾರ್ಯನಿರತರು ಮಾತ್ರವಲ್ಲ, ರಂಗಭೂಮಿಗಾಗಿ ತನು ಮನ ಧನವನ್ನು ಸರ್ಮಪಿಸಲು ಸಿದ್ಧರಿರುವ ನಟ, ನಿರ್ದೇಶಕ ಇನ್ನಿತರ ವರ್ಗದವರೂ ಸೇರುತ್ತಾರೆ. ಇವರಿಂದ ಸೃಷ್ಟಿಸಲ್ಪಡುವ ನಾಟಕವೆಂಬ ಅದ್ಫುತ ಕಲೆಯ ಅಳಿವು- ಉಳಿವಿಗೆ ಅಗತ್ಯವಾಗಿಬೇಕಾದ್ದು ಒಂದು ರಂಗಮಂದಿರ, ಇನ್ನೊಂದು ಪ್ರೇಕ್ಷಕರ ವರ್ಗವಾಗಿದೆ.ನಾಟಕ ಎಂಬ ಮಾಯಾ ಲೋಕದಲ್ಲಿ ಪ್ರೇಕ್ಷಕರು ಮೈ ಮರೆತು ವಿಹರಿಸುವಂತೆ ಮಾಡಬಲ್ಲ ನಿರ್ದೇಶಕರ ಪರಂಪರೆಯೇ ನಮ್ಮ ರಂಗಭೂಮಿಯಲ್ಲಿದೆ. ನಾಟಕ ಕೇವಲ ಮನೋರಂಜನಾ ಮಾಧ್ಯಮವಾಗಿರದೆ ಮಾಹಿತಿ ಹಾಗೂ ಮನೋರಂಜನೆಯ ಸಮ್ಮಿಶ್ರಣವಾಗಿ ಜನತೆಯ ಮುಂದೆ ನೀಡುವ ಹೊಣೆಗಾರಿಕೆಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು.
ರಂಗಭೂಮಿಯಲ್ಲಿ ಸಾಕಷು ಕಲಾವಿದರು ತಮ್ಮ ಜೀವನದ ಕಥೆಯನ್ನು ಆಧಾರವಾಗಿಟ್ಟುಕೊಂಡು ನಟನೆ ಮಾಡುತ್ತಾರೆ. ಅದೇ ರೀತಿ ಮಂಗಳಮುಖಿಯಾದ ಎ. ರೇವತಿಯವರು ತಮ್ಮ ಜೀವನಾಧರಿತವಾಗಿ ರಚಿಸಿರುವ ‘‘ಎನ್ನ್ ಕೊರಳ್ ತಮಿಳ್’’ ನಾಟಕದಲ್ಲಿ ಗಂಡು ಹೆಣ್ಣುಗಳ ಚೌಕಟ್ಟಿನಾಚೆ ಭಿನ್ನಲಿಂಗಿಯಾಗಿ ಬದುಕುವುದು ಬಲು ಕಷ್ಟವಾಗಿರುವ ಬಗ್ಗೆ ನಾಟಕದಲ್ಲಿ ಎಳೆ ಎಳೆಯಾಗಿ ಬಿಡಿಸಿದ್ದು ಸ್ವತಃ ಅವರೇ ಅಭಿನಯಿಸಿದ್ದಾರೆ.
ಸಮಾಜದಲ್ಲಿ ಅಪನಿಂದನೆಗೆ ಗುರಿಯಾಗುತ್ತಿದ್ದ ಮಂಗಳಮುಖಿಯರು ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಾಧನೆಯ ಹಾದಿಯನ್ನು ಹುಡುಕಿಕೊಳ್ಳುತ್ತಿದ್ದಾರೆ. ತೃತೀಯ ಲಿಂಗಿಗಳು ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದಾರೆ. ಅಂಥವರಲ್ಲಿ ರೇವತಿ ಅವರು ಆರುಮುಗಂ ಅವರ ಪುತ್ರಿ, ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಜನಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಇವರಿಗೆ ಆರ್ಥಿಕ ಸಂಕಷ್ಟ ಹುಟ್ಟಿನಿಂದ ಬಂದ ಬಳುವಳಿ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಎಲ್ಲರಿಗೂ ಕುಟುಂಬ ತುಂಬ ಮುಖ್ಯವಾಗಿರುತ್ತದೆ. ಒಂದು ಕಟ್ಟಡ ಗಟ್ಟಿಯಾಗಿರಬೇಕು ಎಂದರೆ ಪಾಯ ಎಷ್ಟು ಮುಖ್ಯವಾಗಿ ಇರುತ್ತದೆಯೂ ಅಷ್ಟೇ ಅವರ ಸಮುದಾಯಕ್ಕೂ ಕುಟುಂಬ ಮುಖ್ಯ. ಈ ಎಲ್ಲವನ್ನು ತಮ್ಮ ಕುಟುಂಬದವರೊಡನೆ ಹೇಳಬೇಕೆಂಬ ದೃಢ ಸಂಕಲ್ಪ ಮಾಡಿ ತನ್ನೆಲ್ಲಾ ತೊಳಲಾಟವನ್ನು ತಮ್ಮ ಕುಟುಂಬದವರೊಡನೆ ಹೇಳಿಕೊಳ್ಳುತ್ತಾರೆ. ಈ ಅಘಾತವನ್ನು ಸಹಿಸಿಕೊಳ್ಳುವುದು ಕಷ್ಟವೆಂದು ಇವರನ್ನು ನಿರಾಕರಿಸುತ್ತಾರೆ. ಅವರ ಇಚ್ಚೆಯಂತೆ ಇವರನ್ನು ಬಿಡುತ್ತಾರೆ. ಬೇರೆ ಮಕ್ಕಳಿಗೆ ಪ್ರೀತಿ, ಶಿಕ್ಷಣ ಕೊಡಲು ಇಚ್ಚಿಸುವಂತೆ ತೃತೀಯ ಲಿಂಗಿಗಳಿಗೂ ಪ್ರೋತ್ಸಾಹ ನೀಡಬೇಕು. ಕುಟುಂಬದವರು ಅವರನ್ನು ದೂರ ಮಾಡದಿದ್ದರೆ ಯಾರು ಹೊರಗೆ ಹೋಗುವಂತಹ ಪ್ರಶ್ನೆಯೇ ಬರುವುದಿಲ್ಲ.
ಸಮಾಜದಲ್ಲಿ ಅವಮಾನ, ದೈಹಿಕ ಮತ್ತು ಮಾನಸಿಕ ಕಿರುಕುಳಗಳಿಗೆ ಒಳಗಾಗುವ ಮಂಗಳಮುಖಿಯರಿಗೆ ಬದುಕುವ ಆತ್ಮವಿಶ್ವಾಸ ಮೂಡಿಸಿರುವ ಮಾದರಿ ಇಲ್ಲಿದೆ. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸತತ ಪರಿಶ್ರಮದಿಂದ ರೇವತಿ ಸಾಬೀತುಪಡಿಸಿದ್ದಾರೆ.
ಸ್ವತಃ ಮಂಗಳಮುಖಿಯಾದ ಇವರಿಗೆ ತಮ್ಮಂತೆಯೇ ಇರುವ ಹಲವರನ್ನು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಭಿನ್ನರಾಗಿರುವ ಇತರರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಏಕೈಕ ಕಾರ್ಯವಾಗಿದೆ.
ಸ್ವಾಭಾವಿಕವಾಗಿ ಹೆಣ್ಣು ಮಕ್ಕಳ ಭಾವನೆಗಳು ಹುಟ್ಟಿಕೊಂಡವು. ಹೆಣ್ಣಿನ ದೈಹಿಕ ಸ್ವರೂಪ, ಮಾನಸಿಕ ವಿಕಾಸ, ಭೌದ್ದಿಕ ಬೆಳವಣಿಗೆ, ಹೆಣ್ಣಿನ ಅನಿಸಿಕೆ ಮತ್ತು ಸಹಜ ತುಮುಲುಗಳು ಮುಂತಾದ ನೈಸರ್ಗಿಕ ಭಾವನೆಗಳಿಂದ ಹೆಣ್ತನ ಪ್ರಾರಂಭವಾಯಿತು.
ತಮ್ಮನ್ನು ಮಹಿಳೆಯೆಂದು ದೃಢೀಕರಿಸಿಕೊಂಡು ಪಾಸ್’ಪೋರ್ಟ್‌ನಲ್ಲೂ ಮಹಿಳೆ ಎಂಬ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯನ್ನು ಬಲ್ಲ ಇವರು 2003 ರಿಂದ 2008 ರವರೆಗೆ ಸಂಗಮ ಎಂಬ ಲೈಂಗಿಕ ಶೋಷಿತರ ಧ್ವನಿಯಾದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. 2009-10 ರಲ್ಲಿ ಇದೇ ಸಂಸ್ಥೆಗೆ ನಿರ್ದೇಶಕಿಯಾಗಿ ನಿಯುಕ್ತಿಗೊಂಡಿರುತ್ತಾರೆ.
ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯದಲ್ಲೂ ಇವರು ಕಾರ್ಯನಿರ್ವಹಿಸಿರುತ್ತಾರೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಮತ್ತು ಚ್ಯುತಿಗಳ ಮೇಲು ಅಳವಾಗಿ ಅಧ್ಯಯನ ನಡೆಸುವ ಸಂಘಟನೆಗಳೊಂದಿಗೆ ಕೈ ಜೋಡಿಸಿರುತ್ತಾರೆ.
ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಹಲವು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಹೋರಾಟದ ಬಗ್ಗೆ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ದೇಶದ ವಿವಿಧ ಭಾಷೆಗಳಿಗೆ ತುರ್ಜುಮೆಯಾಗಿದೆ. ಇವರು ರಚಿಸಿದ ಕನ್ನಡ ಅನುವಾದಿತ ‘‘ಬದುಕು ಬಯಲು’’ ಎಂಬ ನಾಟಕವು ಅವರ ಹೋರಾಟದ ಹಿನ್ನೆಲೆಯನ್ನು ಹೊಂದಿದ್ದು, ಬಡ ಸಮುದಾಯ, ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳ ಹಾಗೂ ಬೇರೆ ಜಾತಿಯವರನ್ನು ಪ್ರೀತಿಸಿ ವಿವಾಹವಾದರೆ ಅವರನ್ನು ಹತ್ಯೆ ಮಾಡುವ ರೀತಿಯ ವಿಚಾರಗಳ ಸಮಾಜದಲ್ಲಿ ನಡೆಯುತ್ತಿದ್ದರೂ ಯಾರು ಪ್ರಶ್ನೆ ಮಾಡುವುದಿಲ್ಲ. ಅದೇ ಸಮಾನತೆ ನೀಡಿ ಎಂಬ ವಿಚಾರ ಬಂದಾಗ ಸಮಾಜ ಏನು ಹೇಳದೆ ಸುಮ್ಮನಿರುತ್ತದೆ. ಈ ರೀತಿಯ ಹೊಸ ಹೊಸ ವಿಚಾರಗಳ ಕಥೆಯೇ ಬದುಕು ಬಯಲು ನಾಟಕವಾಗಿದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರರ್ದಶಿಸಿದೆ.
ತಮ್ಮ ಜೀವನವನ್ನು ಆಧರಿಸಿದ ಜನುಮದತ್ತ ಎಂಬ ನಾಟಕವು 50ಕ್ಕೂ ಹೆಚ್ಚು ಪ್ರದರ್ಶನ ಕಂಡು ಜನಮನ್ನಣೆ ಪಡೆದಿದೆ. ಈ ನಾಟಕದಲ್ಲಿ ತಾವೇ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಕನ್ನಡ ರಂಗಭೂಮಿಗೊಂದು ಹೊಸ ಆಯಾಮ ಸಿಕ್ಕಂತಾಗಿದೆ. ‘‘ನನ್ನ ದನಿ’’ ನಾಟಕದಲ್ಲಿ ರೇವತಿಯವರ ಜೀವನಾಧಾರಿತವಾಗಿ ರಚಿಸಿರುವ ‘‘ಎನ್ನ ಕೊರಳ್ ತಮಿಳ್’’ ನಾಟಕವನ್ನು ಅವರೇ ಕನ್ನಡಕ್ಕೆ ತರ್ಜುಮೆ ಮಾಡಿ ಸ್ವತಃ ಅವರೇ ಅಭಿನಯಿಸಿದ್ದಾರೆ.
ಬದುಕಿನ ಹಲವು ಮುಗ್ಗಲುಗಳನ್ನು ಅನುಭವಿಸಿ ನೋವಿನಿಂದ ದಾಖಲಿಸಿರುವ ಕಥಾ ವಸ್ತುವಿನ ಮೂಲ ರಚನೆ ಎ. ರೇವತಿ ಆಸೆ ಪಟ್ಟಿದ್ದನ್ನೆಲ್ಲ ಬೇಕಂತಲೇ ಕಸಿದುಕೊಳ್ಳುವ ಸಮಾಜಕ್ಕೆ ಬದುಕಿನ ನೋವು, ಅವಮಾನ, ಹತಾಶೆಗಳ ಬೆಂಕಿಯಲ್ಲಿ ಪ್ರತಿ ಕ್ಷಣವೂ ಬೇಯುವಂತೆ ಮಾಡಿದ ಅನುಭವದ ಜನ್ಮ ಕಥೆಯಾಗಿದೆ ನನ್ನ ದನಿ ನಾಟಕ. ಹೆಣ್ಣಾದ ನಂತರ ಸಮಾಜದಲ್ಲಿ ಕೆಲವು ವ್ಯಕ್ತಿಗಳಿಂದ ಅನುಭವಿಸಿದ ಕ್ರೌರ್ಯದ ಸಂದರ್ಭ ಹೇಳುವಾಗಲಂತೂ ಆ ಸನ್ನಿವೇಶ ಹೃದಯ ಹಿಂಡುವಂತೆ ಮಾಡುತ್ತದೆ.
ಬಡತದಲ್ಲಿ ಹುಟ್ಟಿದ ಇವರು, ತಂದೆ ಮತ್ತು ತಾಯಿ ಹಾಗೂ ಸಮಾಜದಲ್ಲಿ ಎಲ್ಲರಿಂದಲೂ ನಿಂದನೆಗೆ ಒಳಗಾಗಿ ನೋವುಗಳ ನಡುವೆಯೂ ಸ್ವಾಭಿಮಾನದಿಂದ ಬದುಕುವ ಆಸೆ, ಛಲ ಹೊಂದಿರುವ ರೇವತಿಯವರ ಬದುಕಿನ ಒಡಲಾಳದ ಕಥಾ ವಸ್ತುವೇ ನನ್ನದಾನಿ ಏಕ ವ್ಯಕ್ತಿ ಪ್ರದರ್ಶನವಾಗಿದೆ. ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವಾರು ಕಡೆಗಳಲ್ಲಿ ನಾಟಕ ಪ್ರದರ್ಶನಗೊಂಡಿದೆ.
ಇವರ ಇನ್ನಿತರ ಲೇಖನಗಳೆಂದರೆ ಉನರುಮಂ ಉರುವವಂ, ದಿ ಟ್ರೂತ್ ಎಜಾಟ್ ಮಿ ಇವು ತಮಿಳು ಮಾಲೆಯಾಳಂ ಮತ್ತು ತೆಲುಗಿಗೆ ಭಾಷಾಂತರವಾಗಿದೆ. 20ಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮವಾಗಿದೆ. 2010 ರಲ್ಲಿ ಹಮಾರಾ ಕಹಾನಿಯಾ ಹಮಾರಾ ಖಾಡೇ, ಹಿಜಡಾಕಾ ಜೀವನಯಾನ ಕಾ ಏಕ್ ಸಂಖನ್, 2016 ರಲ್ಲಿ ಎ ಲೈಫ್ ಇನ್ ಟ್ರಾನ್ಸ್ ಆಕ್ಟಿವಿಜಂ ಎಂಬ ಕೃತಿಗಳನ್ನು ರಚಿಸಿದ್ದಾರೆ.
ಈ ಎಲ್ಲದರ ಅನುಭವವನ್ನು ತಮ್ಮ ಸಮುದಾಯದ ಸಂಕಟಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಮಾಜದ ಕಣ್ಣು ತೆರೆಸಿದ ಪರಿಯನ್ನು ಹೆಮ್ಮೆಯಿಂದಲೇ ಹೇಳುತ್ತಾರೆ. ನಮಗೂ ಅಪ್ಪ-ಅಮ್ಮ, ಅಕ್ಕ, ತಮ್ಮ, ತಂಗಿ ಹೀಗೆ ಕುಟುಂಬ ಪ್ರೀತಿ ಸಿಗಬೇಕು ಎಂಬ ಆಸೆಯಿದೆ ಎಂದು ತಿಳಿಸಿ ಹನಿಗಣ್ಣಾಗುತ್ತಾರೆ. ‘‘ಶವದ ಮೇಲೆ ಇದ್ದರೂ, ಗುಡಿಯ ಅಂಗಳದಲ್ಲಿ ಬಿದ್ದರೂ ಮಲ್ಲಿಗೆ ಮಲ್ಲಿಗೇನೆ’’. ಆದರೆ ಸಮಾಜ ಅದನ್ನು ನೋಡುವ ಪರಿ ಭಯ ಹುಟ್ಟಿಸುತ್ತದೆ. ಮಂಗಳಮುಖಿಯರನ್ನು ಹೀನಾಯವಾಗಿ ಕಾಣುವ ಸಮಾಜ ತನ್ನ ನೋವನ್ನು ತಿದ್ದುಕೊಳ್ಳಲಿ ಎಂಬ ಮಾತಿನೊಂದಿಗೆ ಮಂಗಳಮುಖಿ ರೇವತಿಯವರ ಏಕ ವ್ಯಕ್ತಿ ನಾಟಕವು ಮುಕ್ತಾಯವಾಗುವುದು.
ರೇವತಿಯವರು 18ನೆಯ ವಯಸ್ಸಿನಲ್ಲೇ ದಕ್ಷಿಣ ಭಾರತದಲ್ಲಿ ತೃತೀಯ ಲಿಂಗಿಗಳ ಪರವಾಗಿ, ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಕುರಿತು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ವಿಶ್ವವಿದ್ಯಾಲಯ, ಕಾಲೇಜು ಹೀಗೆ ಹಲವಾರು ಕಡೆಗಳಲ್ಲಿ ತೃತೀಯ ಲಿಂಗಿಗಳ ಬಗ್ಗೆ ಚರ್ಚೆ ಮತ್ತು ನಾಟಕ ಮಾಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ಶ್ರೀಲಂಕಾ, ಸ್ವಿಡ್ಜಲೆಂಡ್, ಲಂಡನ್ ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೋಗಿ ಸಾಧನೆಯನ್ನು ಮಾಡಿದ್ದಾರೆ.
ಗಂಡು ಮತ್ತು ಹೆಣ್ಣು ಎಂಬ ಭೇದವಿಲ್ಲದೇ ಸರ್ಕಾರಿ ಮತ್ತು ಖಾಸಗೀ ಕೆಲಸಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶಗಳನ್ನು ನೀಡಬೇಕು. ಈ ರೀತಿಯ ಕ್ರಮ ಕೈಗೊಳ್ಳುವುದರಿಂದ ನಮ್ಮ ಸಮುದಾಯದಲ್ಲೂ ಬದಲಾವಣೆ ಕಾಣುವುದಕ್ಕೆ ಸಹಾಯವಾಗುತ್ತದೆ. ಹಾಗೇ ಸಮಾಜದಲ್ಲಿ ನಮ್ಮನ್ನು ನೋಡುವ ದೃಷ್ಠಿಕೋನವು ಕೂಡ ಬದಲಾಯಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಮುಂದೆ ಬರುವ ಪೀಳಿಗೆಗೆ ಇದರ ಸದೋಪಯೋವಾಗಬೇಕು.
ನಾನು ಹೋಗುವ ಕಡೆಗಳಲ್ಲಿ ನನಗೆ ಎಲ್ಲರೂ ಪ್ರಶ್ನೆ ಮಾಡುವುದು ಒಂದೇ, ನಿಮಗೆ ಸರ್ಕಾರ ಎಷ್ಟೊಂದು ಸೌಲಭ್ಯಗಳನ್ನು ನೀಡುತ್ತಿದೆ. ಅದು ಕೇವಲ ಪೇಪರ್’ನಲ್ಲಿ ಇರುವಂತಹ ಸೌಲಭ್ಯವಾಗಿದೆ. ನಮ್ಮ ಕೈಗೆ ಆ ಸೌಲಭ್ಯಗಳು ಇನ್ನೂ ಬಂದಿಲ್ಲ. ಆದರೆ ನಮ್ಮ ಸಮುದಾಯಕ್ಕೆ ಈಗಾಗಲೇ ಸರ್ಕಾರ ಹಳೆಯ ಪಿಂಚಣಿ, ತರಬೇತಿ ಕಾರ್ಯಕ್ರಮಗಳನ್ನು ಮಾಡಿ ಸಾಲ ಸವಲತ್ತುಗಳನ್ನು ನೀಡಿದೆ. ಆದರೆ ಶಿಕ್ಷಣ, ಉದ್ಯೋಗ ಸೇರಿದಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಶೇಷವಾದ ಸವಲತ್ತುಗಳನ್ನು ನೀಡಬೇಕು ಎಂಬುದು ನಮ್ಮ ಸಮುದಾಯದ ಮನವಿ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.
ಜೀವನದ ಸವಾಲುಗಳು ಯಶಸ್ಸಿಗೆ ಅಡ್ಡಗಾಲಲ್ಲಿ, ದೃಢ ಸಂಕಲ್ಪವಿದ್ದರೆ ಅಸಾಧ್ಯವಾಗುವುದು ಯಾವುದೂ ಇಲ್ಲ ಎನ್ನುವುದನ್ನು ರೇವತಿ ಅವರು ಈ ಸಮಾಜಕ್ಕೆ ತೋರಿಸಿದ್ದಾರೆ. ಜೀವನದಲ್ಲಿ ಅವಕಾಶಗಳನ್ನು ನಾವು ಹುಡುಕಿಕೊಂಡು ಹೋಗಬಾರದು, ನಮ್ಮನ್ನು ಅವಕಾಶಗಳು ಹುಡುಕಿಕೊಂಡು ಬರಬೇಕು. ಮನೆಯಲ್ಲಿ ನಿಮ್ಮ ಅಣ್ಣ, ತಂಗಿ, ಮಕ್ಕಳಿಗೆ ಹೀಗಾದಾಗ ಅವರನ್ನು ನಿರಾಕರಿಸಬೇಡಿ, ಪ್ರೋತ್ಸಾಹಿಸಿ ಅವರೂ ಮನುಷ್ಯರೇ ಎನ್ನುವುದು ರೇವತಿಯವರ ಮನದ ಮಾತು.
ಮಂಗಳಮುಖಿಯರನ್ನು ಸಮಾಜದಲ್ಲಿ ಎಲ್ಲಾ ಕಡೆ ತಾತ್ಸಾರ ಭಾವದಿಂದ ನೋಡುತ್ತಾರೆ, ಅವರನ್ನು ಮನುಷ್ಯರಂತೆ ಕಾಣೋರೇ ವಿರಳ. ಸಮಾಜದ ಮುಂದೆ ತಿರಸ್ಕೃತರಾಗಿ ಬದುಕುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕುಬೇಕು, ಮಂಗಳಮುಖಿಯರನ್ನು ಮಹಿಳೆಯರೆಂದು ಗುರುತಿಸಬೇಕು ಹಾಗೂ ಸಮಾಜದಲ್ಲಿ ಗೌರವಯುತವಾಗಿ ಕಾಣಬೇಕು. ಈ ದಿಸೆಯಲ್ಲಿ ದೃಢ ನಿರ್ಧಾರ ತೆಗೆದುಕೊಂಡು ಮಂಗಳಮುಖಿಯರ ಶ್ರೇಯೋಭಿವೃದ್ಧಿಗೆ ಶ್ರಮ ಪಡುತ್ತಿರುವುದು ಯುವ ಪೀಳಿಗೆಗೆ ಉತ್ತಮ ಉದಾಹರಣೆಯಾಗಿದೆ. ಪ್ರತಿಯೊಬ್ಬ ಮಂಗಳಮುಖಿಯರು ರೇವತಿಯವರಂತೆ ಮಾದರಿಯಾಗಲಿ.
Get in Touch With Us info@kalpa.news Whatsapp: 9481252093
Discussion about this post