ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದೆಡೆ ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಗೆ ಒಂದು ರೀತಿಯ ಅಳಿವು ಉಳಿವಿನ ಪ್ರಶ್ನೆಯಾಗಿದ್ದರೆ ಇನ್ನೊಂದೆಡೆ ಬಿಜೆಪಿ ಅದರಲ್ಲೂ ಪ್ರಮುಖವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮರ್ಯಾದೆ ಹಾಗೂ ಘನತೆಯ ಪ್ರಶ್ನೆಯಾಗಿದೆ ಇಂದು ಮತದಾನವಾದ ರಾಜ್ಯ ಉಪಚುನಾವಣೆ.
ಹೌದು…. ಬಿ.ಎಸ್. ಯಡಿಯೂರಪ್ಪ… ಈ ಹೆಸರಿನೊಂದಿಗೇ ಹೋರಾಟ ಎಂಬುದು ಬೆಸೆದುಕೊಂಡಿದೆ. ರಾಜ್ಯದ ರಾಜ್ಯದ ರಾಜಕೀಯ ಇತಿಹಾಸವನ್ನೊಮ್ಮೆ ತಿರುವಿ ನೋಡಿದರೆ ಸಿದ್ಧಾಂತದೊಂದಿಗೆ ಹೋರಾಟ ನಡೆಸಿದವರ ಹೆಸರಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿತ್ವ ಇವರದ್ದು.
1965ರಲ್ಲಿ ಆರ್’ಎಸ್’ಎಸ್ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು ಬಿಎಸ್’ವೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರ ಜೊತೆ ಸಂಪರ್ಕಕ್ಕೆ ಬಂದಿದ್ದು, ಇವರ ಹೋರಾಟದ ಕಿಚ್ಚು, ನಿಷ್ಠೆ, ಸಮಾಜಮುಖಿ ಬದುಕಿಗೆ ನಾಂದಿಯಾಯಿತು.
ಶಿಕಾರಿಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡ ಇವರು, 1972 ರಲ್ಲಿ ಶಿಕಾರಿಪುರ ತಾಲ್ಲೂಕಿನ ಜನ ಸಂಘದ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣ ಪ್ರವೇಶಿಸಿದರು. 1975 ರಲ್ಲಿ ಶಿಕಾರಿಪುರ ಪುರಸಭಾ ಸದಸ್ಯರಾಗಿ, ಮಾರ್ಚ್ 1977 ರಿಂದ ಫೆಬ್ರವರಿ 1981ರವರೆಗೆ ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ, ಶಿಕಾರಿಪುರದ ನೀರು, ವಿದ್ಯುತ್, ರಸ್ತೆ, ಸ್ವಚ್ಚತೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟ ನಡೆಸಿದ ಬಿಎಸ್’ವೈ ಅಧಿಕಾರ ಸಿಕ್ಕಾಗ ಶಿಕಾರಿಪುರ ನಗರದ ಚಿತ್ರಣವನ್ನೇ ಬದಲಾಯಿಸಿದರು.
1983ರಲ್ಲಿ ಪ್ರಥಮ ಬಾರಿಗೆ ಕರ್ನಾಟಕದ ವಿಧಾನಸಭೆಗೆ ಭಾರಿ ಬಹುಮತದಿಂದ ಪ್ರವೇಶಿಸಿದ ಯಡಿಯೂರಪ್ಪ, ಶಿಕಾರಿಪುರದ ಕ್ಷೇತ್ರದಿಂದ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಐದು ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.
1996ರಲ್ಲಿ ಮತ್ತು 2004ರಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಪ್ರಭಾವಿ ಹೋರಾಟ ನಡೆಸಿ, 2006ರಲ್ಲಿ ಉಪಮುಖ್ಯಮಂತ್ರಿಯಾಗಿ ಖಾತೆ-ಹಣಕಾಸು ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಜ್ಯೋರ್ತಿವಿಜ್ಞಾನಂ ಪ್ರಕಾಶ್ ಅಮ್ಮಣ್ಣಾಯ ಏನೆನ್ನುತ್ತಾರೆ?
ಉಪಚುನಾವಣೆ ಫಲಿತಾಂಶ ಕುರಿತಂತೆ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಮಾತನಾಡಿಸಿದ ವೇಳೆ ಅವರು ಹೇಳಿದ್ದಿಷ್ಟು…ಬಿ.ಎಸ್. ಯಡಿಯೂರಪ್ಪನವರಿಗೆ ಏಳು ಕ್ಷೇತ್ರಗಳ ಗೆಲುವು ನಿಶ್ಚಿತ. ಜನವರಿಯ ನಂತರ ಅದು 8 ಆಗುತ್ತದೆ. ಹೇಗೆ ಎನ್ನುವುದಕ್ಕೆ ಕಾಲವೇ ಉತ್ತರಿಸುತ್ತದೆ.
ಬಿ.ಎಸ್. ಯಡಿಯೂರಪ್ಪನವರಿಗೆ ಇರುವ ತೊಂದರೆಗಳೆಲ್ಲವೂ ನಿವಾರಣೆಯಾಗುತ್ತವೆ. ಆದರೆ, ಅವರು ಈ ಹಂತದಲ್ಲಿ ಅತ್ಯಂತ ತಾಳ್ಮೆ ಹಾಗೂ ಸಹನೆಯಿಂದ ಇರಬೇಕಾಗುತ್ತದೆ. ಒಂದು ವೇಳೆ ಅವರು ಆತುರದಿಂದ ಗಡಿಬಿಡಿ ಮಾಡಿಕೊಂಡರೆ ಏನು ಬೇಕಾದರೂ ಆಗಬಹುದು ಎಂಬುದಂತೂ ಸತ್ಯ.
ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು 2006ರಲ್ಲಿ ಜೆಡಿಎಸ್ ವಾಪಸ್ ಪಡೆಯಿತು. ನಂತರ ರಚನೆಗೊಂಡ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾದರು. ಮೊದಲ 20 ತಿಂಗಳು ಕುಮಾರಸ್ವಾಮಿಯವರು ಮುಖ್ಯಮಂತ್ರಿ ಮತ್ತು ನಂತರದ 20 ತಿಂಗಳು ಯಡಿಯೂರಪ್ಪನವರು ಮುಖ್ಯಮಂತ್ರಿ ಎಂದು ಸರಕಾರ ರಚನೆ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ಒಪ್ಪಂದವಾಗಿತ್ತು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಹಣಕಾಸು ಖಾತೆಗೂ ಸಚಿವರಾಗಿದ್ದರು. ಒಪ್ಪಂದದಂತೆ 2007ರ ಅಕ್ಟೋಬರ್‌ನಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಾದಾಗ, ಕುಮಾರಸ್ವಾಮಿಯವರು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದರು.
ಜೆಡಿಎಸ್ ನಡೆ ವಿರೋಧಿಸಿ ಯಡಿಯೂರಪ್ಪ ಮತ್ತು ಬಿಜೆಪಿಯ ಎಲ್ಲ ಸಚಿವರು ರಾಜೀನಾಮೆ ನೀಡಿದರು. ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಅಕ್ಟೋಬರ್ 5ರಂದು ಬಿಜೆಪಿ ಹಿಂಪಡೆಯಿತು. ನಂತರ ರಾಷ್ಟ್ರಪತಿ ಆಡಳಿತ ಶುರುವಾಯಿತು.
ನವೆಂಬರ್ 7ರಂದು ಬಿಜೆಪಿ ಮತ್ತು ಜೆಡಿಎಸ್ ನಡುವಿನ ಭಿನ್ನಮತ ಶಮನಗೊಂಡು ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿತು. ನ. 12, 2007ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿದರು. ಆದರೆ ಸಚಿವರಿಗೆ ಖಾತೆ ಹಂಚಿಕೆ ವೇಳೆ ಭಿನ್ನಮತ ಉಲ್ಬಣಗೊಂಡಿತು. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮ್ಮಿಶ್ರ ಸರಕಾರ ಅಂತ್ಯಗೊಂಡು, ಯಡಿಯೂರಪ್ಪನವರು ನವೆಂಬರ್ 19, 2007ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.
2008ರ ಮೇ 30ರ ಶುಕ್ರವಾರ ಕರ್ನಾಟಕದ 25 ನೆಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರಿಸಿದ ಅವರು, ಪರಿಸ್ಥಿತಿಯ ಹಿನ್ನೆಲೆಯಲ್ಲಿ 2011ರ ಜುಲೈ 31ರಂದು ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು.
2014ರ 2014 ರ ಲೋಕಸಭಾ ಚುನಾವಣೆಯಲ್ಲಿ 363,305 ಮತಗಳ ಅಂತರದಿಂದ ಲೋಕಸಭಾಸದಸ್ಯರಾಗಿ ಆಯ್ಕೆಯಾಗಿ ದಾಖಲೆ ಬರೆದ ಬಿಎಸ್’ವೈ, 2018ರ ಮೇ 17ರಿಂದ ಮೇ 19ವರೆಗೆ 2 ದಿನ ಮಾತ್ರ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈಗ 2019ರ ಜುಲೈ 26ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಸರ್ಕಾರ ಅಳಿವು ಉಳಿವಿನ ಪ್ರಶ್ನೆಯಾಗಿ ಇಂದಿನ ಉಪ ಚುನಾವಣೆ ಕಾಡುತ್ತಿದೆ.
ರಾಜ್ಯದ ರೈತರು, ಶೋಷಿತರು ಹಾಗೂ ಬಡವರ್ಗದ ಪರವಾಗಿ ನೂರಾರು ಹೋರಾಟ ಮಾಡಿರುವ ಯಡಿಯೂರಪ್ಪ 1988ರಲ್ಲಿ ಬಸವಕಲ್ಯಾಣದಿಂದ ರೈತ ಜಾಗೃತಿಯನ್ನು ಮೂಡಿಸಲು ನಡೆದಿದ ಭಾರಿ ರೈತ ಜಾಥಾ ಲಕ್ಷಾಂತರ ರೈತರ ಪಾಲ್ಗೊಳ್ಳುವಿಕೆಯಿಂದ ಐದು ಐತಿಹಾಸಿಕ ದಾಖಲೆ ಬರೆಯಿತು.
ಇದರೊಂದಿಗೆ ಬನವಾಸಿಯಿಂದ ಬೆಂಗಳೂರಿಗೆ, ಕೃಷ್ಣರಾಜಸಾಗರಕ್ಕೆ ನಡೆಸಿದ ಜಾಥಾಗಳು ಯಡಿಯೂರಪ್ಪನವರನ್ನು ರಾಜ್ಯ ನಾಯಕರನ್ನಾಗಿ ಬೆಳೆಸುವಲ್ಲಿ ಪ್ರಮುಖ ಹಂತಗಳಾದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನೇತೃತ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾದರೂ, ಬಹುಮತದ ಕೊರತೆಯಿಂದ ಅಧಿಕಾರದಿಂದ ವಂಚಿತವಾಗಬೇಕಾಯಿತು. ಈ ವೇಳೆ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್’ನ ಅನೈತಿಕ ರಾಜಕೀಯ ಮೈತ್ರಿ ಪರಿಣಾಮ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದು ಬಿಎಸ್’ವೈ ಪ್ರತಿಪಕ್ಷ ನಾಯಕರಾದರು.
ಆದರೆ, ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್’ನ 15 ಶಾಸಕರು ತಮ್ಮ ಪಕ್ಷದ ವಿರುದ್ಧ ಸಿಡಿದೆದ್ದು ರಾಜೀನಾಮೆ ನೀಡಿದ್ದರು. ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಇವರನ್ನೆಲ್ಲಾ ಅನರ್ಹಗೊಳಿಸಿದ್ದರು.
ಶಾಸಕರ ರಾಜೀನಾಮೆಯಿಂದ ತೆರವಾದ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಈ 15 ಶಾಸಕರು ಈಗ ಬಿಜೆಪಿಯಿಂದ ಸ್ಪರ್ಧಿಸಿದ್ದು, ಇವರುಗಳ ಗೆಲುವು ಯಡಿಯೂರಪ್ಪ ಸರ್ಕಾರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಇವೆಲ್ಲಕ್ಕೂ ಡಿ.9ರಂದು ಉತ್ತರ ದೊರೆಯಲಿದೆ.
Get in Touch With Us info@kalpa.news Whatsapp: 9481252093
Discussion about this post